ಮುಂದಿನ ಆದೇಶದವರೆಗೂ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಬೇಡ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಭಾಷೆಯ ವಿಚಾರ ಗಂಭೀರ ಪರಿಣಾಮ ಬೀರುವ ವಿಷಯ. ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಮಾಲೋಚಿಸಬೇಕಿದೆ. ಸಮಾಲೋಚನೆ ನಂತರ ಕೇಂದ್ರದ ನಿಲುವು ತಿಳಿಸಲಾಗುವುದು ಅಂತ ಕೇಂದ್ರ ಸರ್ಕಾರದ ಎಎಸ್ಜಿ ಎಂಬಿ ನರಗುಂದ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ರಾಜ್ಯ ಸರ್ಕಾರ ಎಲ್ಲರಿಗೂ ಕನ್ನಡ ಕಡ್ಡಾಯಗೊಳಿಸಬಾರದು. ಕನ್ನಡ ಕಲಿತ ವಿದ್ಯಾರ್ಥಿಗಳು ಕಲಿಯಲು ಅಡ್ಡಿಯಿಲ್ಲ. ಕನ್ನಡ ಕಲಿಯಲು ಬಯಸದ ವಿದ್ಯಾರ್ಥಿಗಳಿಗೆ ಕಡ್ಡಾಯ ಬೇಡ. ಮುಂದಿನ ಆದೇಶದವರೆಗೂ ಬಲವಂತದ ಕಡ್ಡಾಯ ಬೇಡ ಅಂತ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಭಾಷೆಯ ವಿಚಾರ ಗಂಭೀರ ಪರಿಣಾಮ ಬೀರುವ ವಿಷಯ. ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಮಾಲೋಚಿಸಬೇಕಿದೆ. ಸಮಾಲೋಚನೆ ನಂತರ ಕೇಂದ್ರದ ನಿಲುವು ತಿಳಿಸಲಾಗುವುದು ಅಂತ ಕೇಂದ್ರ ಸರ್ಕಾರದ ಎಎಸ್ಜಿ ಎಂಬಿ ನರಗುಂದ್ ಹೇಳಿಕೆ ನೀಡಿದ್ದಾರೆ. ಈಗಾಗಲೇ 4 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅರ್ಜಿದಾರ ವಿದ್ಯಾರ್ಥಿಗಳು ಕನ್ನಡ ವ್ಯಾಸಂಗ ಮಾಡಿದ್ದಾರೆ. ಮಧ್ಯಂತರ ಆದೇಶ ನೀಡದಂತೆ ಎಜಿ ಪ್ರಭುಲಿಂಗ್ ನಾವದಗಿ ಮನವಿ ಮಾಡಿದ್ದಾರೆ.
ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ವಿವಾದ ತಂದೊಡ್ಡಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದು, ಸರ್ಕಾರದ ನೀತಿಗೆ ಹೈಕೋರ್ಟ್ ಅಸಮಾಧಾನ ಹೊರ ಹಾಕಿತ್ತು.
ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ. ಇದರಿಂದ ಎಷ್ಟು ವಿದ್ಯಾರ್ಥಿಗಳು ಹೊರಹೋಗಿದ್ದಾರೆ ಗೊತ್ತೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಈ ಹಿಂದೆ ಪ್ರಶ್ನೆ ಮಾಡಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಡ್ಡಾಯಕ್ಕೆ ಅವಕಾಶವಿದೆಯೇ. ಹೊರ ರಾಜ್ಯದವರಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಬಹುದೇ? ಉನ್ನತ ಶಿಕ್ಷಣದಲ್ಲಿ ಕಡ್ಡಾಯಗೊಳಿಸಲು ಅವಕಾಶವಿದೆಯೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿತ್ತು.
ಇದನ್ನೂ ಓದಿ
ಯಾದಗಿರಿಯಲ್ಲಿ ಅಕ್ರಮವಾಗಿ ಮಾರಲು ಮುಂದಾಗಿದ್ದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಜಪ್ತಿ
Published On - 11:36 am, Thu, 16 December 21