ಹಿರೇಬೆಣಕಲ್ ಮೋರೇರ್ ತಟ್ಟಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ: ಶಿಲಾಯುಗ ಕಾಲದ ಪ್ರಯೋಗ ಶಾಲೆ ಎಂದೇ ಇದು ಪ್ರಸಿದ್ಧ

| Updated By: preethi shettigar

Updated on: Jun 30, 2021 | 3:57 PM

1925 ರಲ್ಲಿ ಈ ಗವಿ ಚಿತ್ರಗಳನ್ನು ಮೊಟ್ಟ ಮೊದಲ ಬಾರಿಗೆ ಶೋಧಿಸಿದವರು ಆಂಗ್ಲ ಭೂರ್ಗಭಶಾಸ್ತಜ್ಞರಾದ ಲಿಯೋನಾರ್ಡ್ಮನ್ ಅವರು. ನಂತರದಲ್ಲಿ 1999 ರಲ್ಲಿ ಪುರಾತತ್ವ ಸಂಶೋಧಕರಾದ ಡಾ. ಅ.ಸುಂದರ ಅವರು ಮೋರೇರ್ ತಟ್ಟಿಯ ಚಿತ್ರಣವನ್ನು ಸಂಶೋಧಿಸಿದ್ದಾರೆ.

ಹಿರೇಬೆಣಕಲ್ ಮೋರೇರ್ ತಟ್ಟಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ: ಶಿಲಾಯುಗ ಕಾಲದ ಪ್ರಯೋಗ ಶಾಲೆ ಎಂದೇ ಇದು ಪ್ರಸಿದ್ಧ
ಹಿರೇಬೆಣಕಲ್​ ಬಳಿಯ ಮೋರೇರ್ ತಟ್ಟಿ
Follow us on

ಕೊಪ್ಪಳ: ಕ್ರಿಸ್ತ ಪೂರ್ವ 10ನೇ ಶತಮಾನಗಳಷ್ಟು ಹಳೆಯದಾದ ಹಿರೇಬೆಣಕಲ್‌ನ ಶಿಲಾಸಮಾಧಿಗಳು ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಮತ್ತೆ ಸೇರ್ಪಡೆಯಾಗಿವೆ. ಇತ್ತೀಚಿಗೆ ನಡೆದ ವಿಶ್ವಸಂಸ್ಥೆಯ ಯುನೆಸ್ಕೋ ಅಂಗ ಸಂಸ್ಥೆಯು ವಿಶ್ವಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹಿರೇಬೆಣಕಲ್ ಬಳಿಯ ಆದಿಮಾನವರ ಶಿಲಾಸಮಾಧಿಗಳು ಇರುವ ಮೋರೇರ್ ತಟ್ಟಿ ಸೇರಿದೆ. ಭಾರತದ ಒಂಬತ್ತು ಪ್ರಮುಖ ಸ್ಥಳಗಳನ್ನು ಗುರುತಿಸಿ, ಯುನೆಸ್ಕೋ ಸಂಸ್ಥೆಗೆ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯಿಂದ ವರದಿ ಸಲ್ಲಿಸಲಾಗಿತ್ತು. ಇವುಗಳಲ್ಲಿ ಆರು ಪ್ರಮುಖ ಸ್ಥಳಗಳಿಗೆ ಮಾತ್ರ ತಾತ್ಕಾಲಿಕ ಮಾನ್ಯತೆಯನ್ನು ಯುನೆಸ್ಕೋ ಸಂಸ್ಥೆ ನೀಡಿದೆ. ಆ ಮೂಲಕ ಈಗಾಗಲೇ ಭಾರತದಲ್ಲಿದ್ದ 30 ವಿಶ್ವಪಾರಂಪರಿಕ ಸ್ಥಳಗಳ ಜತೆಗೆ ಈಗ ಯುನೆಸ್ಕೋ ಅಂಗ ಸಂಸ್ಥೆ ಬಿಡುಗಡೆ ಮಾಡಿದ ಆರು ತಾಣಗಳನ್ನು ಸೇರಿವೆ. ಒಟ್ಟು 36 ತಾಣಗಳಿಗೆ ಸದ್ಯ ಮಾನ್ಯತೆ ಸಿಕ್ಕಂತಾಗಿದೆ.

ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಿಂದ ಸುಮಾರು 4 ಕಿ.ಮೀ ದೂರದಲ್ಲಿ ಈ ಹಿರೇಬೆಣಕಲ್ ಗ್ರಾಮವಿದ್ದು, ಸುಮಾರು 2 ಕಿ.ಮೀ ದೂರದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಎತ್ತರವಾದ ಬೆಟ್ಟದಲ್ಲೇ ಶಿಲಾಸಮಾಧಿಗಳಿವೆ. ಇಲ್ಲಿಂದ ಕೊಪ್ಪಳ ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿ.ಮೀ ದೂರದಲ್ಲಿದ್ದರೆ. ತಾಲ್ಲೂಕು ಕೇಂದ್ರವಾದ ಗಂಗಾವತಿಯಿಂದ ಸುಮಾರು 10 ಕಿ.ಮೀ ಅಂತರದಲ್ಲಿದೆ. ಮೋರೇರ್ ತಟ್ಟಿ ಸುಮಾರು 600ಕ್ಕೂ ಅಧಿಕ ಶಿಲಾಸಮಾಧಿಗಳಿದ್ದವೆಂದು ಹೇಳಲಾಗುತ್ತಿದೆ. ಆದರೆ ಪ್ರಸ್ತುತವಾಗಿ ಸುಮಾರು 500 ಶಿಲಾಸಮಾಧಿಗಳು ಮಾತ್ರ ಉಳಿದಿದೆ ಮೂಲಗಳು ತಿಳಿಸಿವೆ.

ಪ್ರಾಚೀನ ಕಾಲದಲ್ಲಿ ಆದಿಮಾನವರು ಈ ಬೆಟ್ಟದ ಮೇಲೇಯೇ ವಾಸವಾಗಿದ್ದರೆಂಬುದಕ್ಕೆ ಸಾಕಷ್ಟು ಪುರಾವೆಗಳು ಇಲ್ಲಿ ದೊರೆತಿವೆ. ಅವರು ವಾಸವಾಗಿದ್ದ ಗುಹೆಗಳನ್ನು ಇಂದಿಗೂ ಸಹ ಇಲ್ಲಿ ವಿಕ್ಷಿಸಬಹುದು. ಕ್ರಿ. ಪೂ ಸುಮಾರು 1000 ರಿಂದ 2000ಕ್ಕೆ ಸಂಬಂಧಿಸಿದ ಶಿಲಾ-ತಾಮ್ರ ಯುಗಕ್ಕೆ ಸಂಬಂಧಪಟ್ಟ ಸಂಸ್ಕೃತಿಯ ಬೂದಿ ದಿಬ್ಬ, ಗುಹಾ ಚಿತ್ರಗಳು ಕೂಡ ಮೋರೇರ್ ತಟ್ಟಿಯಲ್ಲಿ ದೊರಕಿವೆ. ಇವುಗಳಲ್ಲದೇ ಆದಿಮಾನವರು ಉಪಯೋಗಿಸುತ್ತಿದ್ದ ಮಡಿಕೆ ಚೂರುಗಳು, ನೀಳಚಕ್ಕೆ, ಶಿಲಾಗಟ್ಟಿಗಳು ದೊರಕಿವೆ. ವಿಶೇಷವಾಗಿ ಅನೇಕ ಗವಿವರ್ಣ ಚಿತ್ರಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

1925 ರಲ್ಲಿ ಈ ಗವಿ ಚಿತ್ರಗಳನ್ನು ಮೊಟ್ಟ ಮೊದಲ ಬಾರಿಗೆ ಶೋಧಿಸಿದವರು ಆಂಗ್ಲ ಭೂರ್ಗಭಶಾಸ್ತಜ್ಞರಾದ ಲಿಯೋನಾರ್ಡ್ಮನ್ ಅವರು. ನಂತರದಲ್ಲಿ 1999 ರಲ್ಲಿ ಪುರಾತತ್ವ ಸಂಶೋಧಕರಾದ ಡಾ. ಅ.ಸುಂದರ ಅವರು ಮೋರೇರ್ ತಟ್ಟಿಯ ಚಿತ್ರಣವನ್ನು ಸಂಶೋಧಿಸಿದ್ದಾರೆ. ಬಳಿಕ ಡಾ.ಶರಣಬಸಪ್ಪ ಕೋಲ್ಕಾರ್ ಅವರೂ ಸಹ ಈ ಪರಿಸರದಲ್ಲಿರುವ ಅನೇಕ ಗವಿವರ್ಣ ಚಿತ್ರಗಳ ಮೇಲೆ ವಿಸ್ತಾರವಾದ ಅಧ್ಯಯನ ಮಾಡಿ, ಅವುಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ.

ಮೋರೇರ್ ತಟ್ಟಿಯಲ್ಲಿನ ಈ ಗವಿಗಳಲ್ಲಿ ಆದಿಮಾನವರು ತಮ್ಮ ಸಾಂಸ್ಕೃತಿಕ ಬದುಕುಗಳನ್ನು ಈ ಚಿತ್ರಗಳ ಮೂಲಕ ಅನಾವರಣಗೊಳಿಸಿದ್ದಾರೆ. ಅವುಗಳಲ್ಲಿ ಬಹಳ ಮುಖ್ಯವಾಗಿ ಭೇಟೆಯಾಡುವ, ನೃತ್ಯಮಾಡುವ ಮುಂತಾದ ಜೀವನ ಶೈಲಿಯ ಚಿತ್ರಗಳು ಅವರ ಜೀವನ ಶೈಲಿಯನ್ನು ಪರಿಚಯಿಸುತ್ತವೆ. ಹಂದಿ, ಹುಲಿ, ಗೂಳಿ, ನವಿಲು ಮುಂತಾದ ಪ್ರಾಣಿಗಳ ಚಿತ್ರಗಳನ್ನೂ ಸಹ ಬಿಡಿಸಿ ಅವರು ತಮ್ಮ ಕಲಾವಂತಿಕೆಯನ್ನು ಪ್ರಚುರಪಡಿಸಿದ್ದಾರೆ. ಇವುಗಳ ಕಾಲ ಕ್ರಿ.ಪೂ. ಸುಮಾರು 1000 ರಿಂದ 500 ವರ್ಷಗಳಕ್ಕೂ ಹಿಂದಿನವುಗಳೆಂದು ಈ ಚಿತ್ರಗಳ ಆಧಾರದ ಮೇಲೆ ಸಂಶೋಧಕರು ಊಹಿಸಿದ್ದಾರೆ.

ಈ ಶಿಲಾಸಮಾಧಿಗಳು ವಾಸ್ತವದಲ್ಲಿ ಸತ್ತವರ ಸಮಾಧಿಗಳೇ ಆಗಿದ್ದು, ಪ್ರಾಚೀನ ಕಾಲದಲ್ಲಿ ಮೋರೆರ್ ಎಂಬ ಒಂದು ಬುಡಕಟ್ಟು ಸಮುದಾಯವಿತ್ತು ಎಂದು ಊಹಿಸಲಾಗಿದೆ. ಅವರು ಸತ್ತ ಬಳಿಕ ಹುಳುವುದಕ್ಕೆ ಇಂತಹ ಬೃಹತ್ ಶಿಲಾಸಮಾಧಿಗಳನ್ನು ನಿರ್ಮಿಸುತ್ತ ಬಂದಿದ್ದು, ಆ ಸಮಾಧಿಗಳಿಗೆ ಮೋರೇರ್ ಸಮಾಧಿಗಳು ಅಥವಾ ಮೋರೇರ್ ಮನೆಗಳು ಎಂದು ಕರೆಯಲಾಗಿತ್ತಿದೆ. ಆದಿಕಾಲದಲ್ಲಿ ಮಾನವರು ಸತ್ತ ಬಳಿಕ ವಿಧಿವತ್ತಾಗಿ ಇಲ್ಲಿ ಶವಸಂಸ್ಕಾರ ಮಾಡುತ್ತಿದ್ದರು. ಹೀಗಾಗಿ ಅವರ ಆತ್ಮಗಳು ಇಲ್ಲೇ ಉಳಿದುಕೊಳ್ಳುತ್ತವೆ ಮತ್ತು ಇಲ್ಲಿಯೇ ತಿರುಗಾಡುತ್ತಿರುತ್ತವೆ ಎಂದು ಭಾವಿಸುತ್ತಿದ್ದರು.

ಎಂಟು ರೀತಿಯ ಶಿಲಾಸಮಾಧಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅವು ಕೋಣೆಯಂತೆ ಇದ್ದು, ಕಂಡಿ ಸಹಿತ ಪೆಟ್ಟಿಗೆಯ ರೂಪದಲ್ಲಿ ಕಾಣುತ್ತದೆ. ಸುಮಾರು 25 ಅಡಿಯ ಅಸಮಭುಜ ಶಿಲಾಕೋಣೆಗಳು ಇಲ್ಲಿ ಇದ್ದು, ನೈಸರ್ಗಿಕ ದೊಡ್ಡ ಬಂಡೆಯ ಹಲಗೆಗಳನ್ನು ಚೌಕಾಕಾರದಲ್ಲಿ ಒಂದಕ್ಕೊಂದು ಪೂರಕವಾಗಿ ನಿಲ್ಲಿಸಿ ಚಪ್ಪಡಿಯ ಕಲ್ಲನ್ನು ಹಾಕಲಾಗಿದೆ. ಇವು ಸುಮಾರು 9 ಅಡಿ ಎತ್ತರವಾಗಿ ನಿರ್ಮಾಣಗೊಂಡಿವೆ ಎಂದು ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಕೆಲ ಗ್ರಾಮಗಳಲ್ಲಿಯೂ ಸಹ ಶಿಲಾಸಮಾಧಿಗಳು ಕಂಡುಬರುತ್ತವೆ. ಚಿಕ್ಕಬೆಣಕಲ್, ಚಿಕ್ಕಮಲ್ಲಾಪುರ, ಘಟ್ಟ, ಮಳೆಮಲ್ಲೇಶ್ವರ ಪರ್ವತದ ಮೇಲೆ ಕೂಡ ಕಾಣಬಹುದಾಗಿದೆ. ಆ ಗ್ರಾಮಗಳಲ್ಲಿಯೂ ಸಹ ಚಿಕ್ಕ ಚಿಕ್ಕ ಗಾತ್ರದ ಶಿಲಾಸಮಾಧಿಗಳು ಇವೆ. ಹೀಗಾಗಿಯೇ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದ ಬೆಟ್ಟದ ಮೇಲಿರುವ ಶಿಲಾಸಮಾಧಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರಕಿದೆ. ಹೀಗಾಗಿಯೇ ವಿಶ್ವಸಂಸ್ಥೆಯ ಯುನೆಸ್ಕೋ ಅಂಗ ಸಂಸ್ಥೆಯು ತಾತ್ಕಾಲಿಕ ಮಾನ್ಯತೆ ನೀಡಿದೆ.

ಮಧ್ಯ ಪ್ರದೇಶದ ಭಿಮಭೇಟ್ಕ ಬೆಟ್ಟದಲ್ಲಿ‌ 250 ಗವಿ ಚಿತ್ರಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಹಾಗೆ ಕೊಪ್ಪಳದ ಹಿರಬೇಣಕಲ್​ನಲ್ಲಿ 300 ಕ್ಕೂ ಹೆಚ್ಚು ಗವಿ ಚಿತ್ರಗಳಿವೆ. ಹಿರೇಬೇಣಕಲ್ ಮೋರೆರ ಬೆಟ್ಟ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದು ನಮಗೆಲ್ಲಾ ಖುಷಿ ವಿಚಾರ ಎಂದು ಇತಿಹಾಸ ತಜ್ಞ ಡಾ ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.

ವರದಿ: ಶಿವಕುಮಾರ್ ಪತ್ತಾರ

ಇದನ್ನೂ ಓದಿ:

200 ವರ್ಷದ ಪುರಾತನ ಮನೆ; ಪ್ರವಾಹ ಬಂದರೂ ತನ್ನ ಅಂದ ಕಳೆದುಕೊಳ್ಳದ ನಿವಾಸದಲ್ಲಿ ಬರೋಬ್ಬರಿ 25 ಕೋಣೆಗಳಿವೆ

ಉಡುಪಿಯ ಹೊಸಂಗಡಿಯಲ್ಲಿದೆ ಐತಿಹಾಸಿಕ ಹಿನ್ನೆಲೆಯ ಮಹಾ ಗಣಪತಿ ದೇವಸ್ಥಾನ

Published On - 3:51 pm, Wed, 30 June 21