
ಬೆಂಗಳೂರು, ನವೆಂಬರ್ 17: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವ ಮೊದಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ವಿರುದ್ಧ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಬೇಕಿದ್ದ ಬಿಜೆಪಿ ಮತ್ತು ಜೆಡಿಎಸ್ ನಡುವೆಯೇ ಇದೀಗ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ಹಿರಿಯೂರು ಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂಬ ವಾದವನ್ನು ಎರಡೂ ಪಕ್ಷಗಳ ನಾಯಕರು ಮುಂದಿಡುತ್ತಿದ್ದಾರೆ.
ಉಡುಪಿಯ ಕೊಲ್ಲೂರಿನಲ್ಲಿ ಸೋಮವಾರ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್‌ಗೆ ಉತ್ತಮ ಬೆಂಬಲವಿದೆ ಎಂದು ಪ್ರತಿಪಾದಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸುಮಾರು 40 ಸಾವಿರ ಸಾಂಪ್ರದಾಯಿಕ ಮತಗಳ ಬಲವಿದೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೇವಲ 1,200 ಮತಗಳ ಅಂತರದಿಂದ ಸೋಲು ಕಂಡಿದ್ದರು. ಹೀಗಾಗಿ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಬೇಕು ಎಂಬುದು ಅವರ ವಾದವಾಗಿದೆ. ಈ ಸಂಬಂಧ ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿಯೂ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಹಿರಿಯೂರು ಕ್ಷೇತ್ರದ ಟಿಕೆಟ್ ಕೇಳುವ ಅಧಿಕಾರ ಬಿಜೆಪಿಗೂ ಇದೆ ಎಂದು ಹೇಳಿದ್ದಾರೆ. ಕಳೆದ 15 ವರ್ಷಗಳ ಚುನಾವಣಾ ಫಲಿತಾಂಶ ಮತ್ತು ಮತಗಳ ಅಂಕಿ-ಅಂಶಗಳನ್ನು ಪರಿಶೀಲಿಸುವಂತೆ ಅವರು ತಿಳಿಸಿದ್ದಾರೆ. 2018ರಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪಕ್ಷಕ್ಕೆ ಸುಮಾರು 60 ಸಾವಿರ ಮತಗಳ ಬೆಂಬಲವಿದೆ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.

ಹಿರಿಯೂರು ಕ್ಷೇತ್ರದಲ್ಲಿ ಹಿಂದೆ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಈ ಬಾರಿ ಕ್ಷೇತ್ರ ಬಿಜೆಪಿಗೆ ಸಿಗಬೇಕು ಎಂದು ರಾಜ್ಯ ನಾಯಕರು ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ, ಜೆಡಿಎಸ್ ನಾಯಕರ ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗಿದೆ.
ಮೇಲ್ನೋಟಕ್ಕೆ ಮೈತ್ರಿ ಪಕ್ಷಗಳ ನಡುವೆ ಯಾವುದೇ ಗೊಂದಲವಿಲ್ಲ ಎಂದು ಕುಮಾರಸ್ವಾಮಿ ಮತ್ತು ಆರ್. ಅಶೋಕ್ ಹೇಳುತ್ತಿದ್ದರೂ, ಟಿಕೆಟ್ ವಿಚಾರದಲ್ಲಿ ತೆರೆಮರೆಯ ಕಸರತ್ತು ಮುಂದುವರಿದಿದೆ. ಎನ್‌ಡಿಎ ಸಮನ್ವಯ ಸಮಿತಿ ರಚನೆಯಾದ ಬಳಿಕ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದ್ದು, ಅಂತಿಮವಾಗಿ ದೆಹಲಿಯ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ