ಶಿವಮೊಗ್ಗ: ಬೆಂಗಳೂರಿನಲ್ಲಿ ರೌಡಿಸಂ ನಿಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಿಯಲ್ ಎಸ್ಟೇಟ್, ಡ್ರಗ್ಸ್ಗೆ ಕಡಿವಾಣ ಹಾಕಲು ಸೂಚಿಸಿದ್ದೇನೆ. ಸೈಬರ್ ಕ್ರೈಂ ವಿಭಾಗ ಬಲಪಡಿಸಲು ಇನ್ಫೋಸಿಸ್ ನೆರವು ನೀಡುತ್ತಿದೆ. ಭದ್ರಾವತಿ ಸೇರಿಸಿಕೊಂಡು ಶಿವಮೊಗ್ಗ ಕಮಿಷನರೇಟ್ ಸ್ಥಾಪನೆ ಮಾಡುತ್ತೇವೆ. ಕಮಿಷನರೇಟ್ ಸ್ಥಾಪನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಶಿವಮೊಗ್ಗದಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಇಂದು (ಆಗಸ್ಟ್ 21) ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮರಳು, ಕ್ವಾರಿಗಳ ಸಮಸ್ಯೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಯ ಕಲ್ಲು ಕ್ವಾರಿಗಳ ಸಮಸ್ಯೆ, 94ಸಿ ಮೊದಲಾದ ಸಮಸ್ಯೆ ಬಗೆಹರಿಸಲು ಸಚಿವರ ಸಭೆ ನಡೆಸಲಾಗಿದೆ.
ಆಫ್ಘನ್‌ನಲ್ಲಿ ಸಿಲುಕಿರುವ ನಾಗರಿಕರ ಬಗ್ಗೆ ಮಾಹಿತಿ ಸಂಗ್ರಹಿಸಲು, ಅವರ ರಕ್ಷಣೆಗಾಗಿ ಅಧಿಕಾರಿ ನೇಮಕ ಮಾಡಲಾಗಿದೆ. ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ನೇಮಕ ಮಾಡಿದ್ದೇವೆ ಎಂದು ಈ ವೇಳೆ ಮಾತನಾಡಿದ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಜಿಲ್ಲೆಗೆ ಸಂಬಂಧಿಸಿದ ಮರಳು , ಜಲ್ಲಿ ಕ್ವಾರಿಗಳ ಸಮಸ್ಯೆ, 94 ಸಿ ಮೊದಲಾದ ಸಮಸ್ಯೆ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಇರುವ ಅಕ್ರಮ ವಲಸಿಗರ ಬಗ್ಗೆ ಈ ಮೊದಲು ಮಾತನಾಡಿದ್ದ ಆರಗ ಜ್ಞಾನೇಂದ್ರ, ಅವರದ್ದು ಭಾರೀ ಸಮಸ್ಯೆ ಇದೆ. ಅವರು ಬೇಕೆಂದೇ ಸಣ್ಣಪುಟ್ಟ ಕೇಸ್ ಹಾಕಿಸಿಕೊಳ್ಳುತ್ತಾರೆ. ಪ್ರಕರಣ ಮುಗಿಯೋವರೆಗೂ ಹೊರಗೆ ಹೋಗೋ ಹಾಗಿಲ್ಲ. ಇಲ್ಲೇ ನೆಲೆಸುವ ಪ್ರಯತ್ನವೂ ಆಗುತ್ತಿದೆ. ಈಗ ಅಂತವರನ್ನ ಹೊರ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ವೀಸಾ ಅವಧಿ ಮುಗಿದವರನ್ನ ಅರೆಸ್ಟ್ ಮಾಡಬೇಕು, ಇಲ್ಲಾ ಹೊರ ದೂಡಬೇಕು. ಬೆಂಗಳೂರಲ್ಲಿ ಈ ಸಮಸ್ಯೆ ಇರುವುದನ್ನು ವಿಶೇಷವಾಗಿ ಹೇಳಿದ್ದೀನಿ ಎಂದು ಹೇಳಿದ್ದರು. ಬೆಂಗಳೂರು ನಗರದಲ್ಲಿ ಡ್ರಗ್ಸ್ ಹಾಗೂ ರೌಡಿಸಂ ನಿರ್ಮೂಲನೆಯನ್ನು ಉದ್ದೇಶಿಸಿ ಅವರು ಕೆಲವು ಬಾರಿ ಮಾತನಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಕಮಲ್ ಪಂತ್ ಹಾಗೂ ಉಮೇಶ್ ಕುಮಾರ್ ಹೇಳಿಕೆ
ಅಫ್ಘಾನಿಸ್ತಾನದಲ್ಲಿ ಬೆಂಗಳೂರಿನವರು ಸಿಲುಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಕಮಲ್ ಪಂತ್, ಇದುವರೆಗೆ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಯಾರಾದ್ರೂ ಸಂಪರ್ಕಿಸಿದ್ರೆ ನೋಡಲ್ ಅಧಿಕಾರಿಗೆ ಮಾಹಿತಿ ನೀಡುವೆ ಎಂದು ಹೇಳಿದ್ದಾರೆ. ಇತ್ತ, ಟಿವಿ9 ಜೊತೆಗೆ ಮಾತನಾಡಿದ ನೋಡಲ್ ಅಧಿಕಾರಿ ಉಮೇಶ್ ಕುಮಾರ್, ಆಫ್ಘನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕೆಲಸ ಮಾಡುತ್ತಿದ್ದೇವೆ. ನಮಗೆ ಇರುವ ಮಾಹಿತಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕೊಡ್ತಿದ್ದೇವೆ. ಆಫ್ಘನ್‌ನಲ್ಲಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಎಂಬ ನಿಖರ ಮಾಹಿತಿ ಇಲ್ಲ. ಈವರೆಗೆ ನಮ್ಮನ್ನು ಇಬ್ಬರು ಮಾತ್ರ ಸಂಪರ್ಕ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಲೆನಾಡು, ಕೊಡಗಿನಲ್ಲಿ ತುಂಬಾ ಖುಷಿ ಅಥವಾ ದುಃಖ ಆದಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ
Published On - 3:40 pm, Sat, 21 August 21