
ಬೆಂಗಳೂರು, ಜುಲೈ 10: ಮನೆಯಲ್ಲಿ ಒಂಟಿಯಾಗಿ ಇದ್ದ 14 ವರ್ಷದ ಬಾಲಕಿಯ ಮೇಲೆ ಆತ್ಯಚಾರವೆಸಗಿ ನಂತರ ಆಕೆಯನ್ನು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರು (Bengaluru) ಹೊರವಲಯದ ತಾವರೆಕೆರೆ ನಗರದಲ್ಲಿ ಬುಧವಾರ ನಡೆದಿದೆ. ಇದರಿಂದಾಗಿ, ಮೂಲತಃ ಕೊಪ್ಪಳ ಜಿಲ್ಲೆಯಿಂದ ಒಂದೂವರೆ ವರ್ಷದ ಹಿಂದೆ ಹೊಟ್ಟೆಪಾಡಿಗಾಗಿ ಕೆಲಸ ಅರಸಿಕೊಂಡು ತಾವರೆಕೆರೆಗೆ ಬಂದ ಆ ಕುಟುಂಬ ಆಘಾತಕ್ಕೊಳಗಾಗಿದೆ. ಬಾಲಕಿಯ ತಂದೆ, ತಾಯಿ ಹಾಗೂ ಸಹೋದರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ.
ಬಾಲಕಿಯ ತಂದೆ ಹಾಗೂ ತಾಯಿ ಕೂಲಿಕೆಲಸಕ್ಕೆ ಹೋಗುತ್ತಿದ್ದರು. ಎರಡನೇ ಮಗ ಸಹ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊನೆಯ ಮಗನನ್ನು ತಾವರೆಕೆರೆಯಲ್ಲಿ ಶಾಲೆಗೆ ಸೇರಿಸಿದ್ದರು. ಆರನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ ಬಾಲಕಿ ಶಾಲೆಗೆ ಹೋಗದೇ ಮನೆಯಲ್ಲೇ ಇರುತ್ತಿದ್ದಳು. ಪ್ರತಿನಿತ್ಯದಂತೆ ಬುಧವಾರ ಸಹ ದಂಪತಿ ಬೆಳಗ್ಗೆ 8 ಗಂಟೆ ಸಮಯಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದರು. ಬಾಲಕಿಯ ಅಣ್ಣ ಹಾಗೂ ತಮ್ಮ ಕೆಲಸ ಹಾಗೂ ಶಾಲೆಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಬಾಲಕಿ ಮಾತ್ರ ಇದ್ದಳು.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮನೆ ಹೊಕ್ಕ ದುರುಳ ಬಾಲಕಿಯ ಮೇಲೆ ಎರಗಿ ಆಕೆಯನ್ನು ಆತ್ಯಾಚಾರಗೈದು ಆನಂತರ ಸಿಲಿಂಡರ್ನಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿಯ ಅಣ್ಣ ಕೆಲಸ ಮುಗಿಸಿ ಊಟಕ್ಕೆಂದು ಮಧ್ಯಾಹ್ನ ಮನೆಗೆ ಬಂದಾಗ ಆಕೆ ವಿವಸ್ತ್ರವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಬಾಲಕಿಯ ಮೇಲೆ ಎರಗಿ ಕೊಂದು ಹಾಕಿದ್ದಾತನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ರಾಯಚೂರು ಮೂಲದವನಾಗಿದ್ದು, ಬಾಲಕಿ ಪೋಷಕರ ಬಗ್ಗೆ ಆತನಿಗೆ ಮೊದಲೇ ಗೊತ್ತಿತ್ತು ಎನ್ನಲಾಗಿದೆ. ತಾವರೆಕೆರೆ ಭಾಗದಲ್ಲಿ ಮರಗೆಲಸ ಮಾಡಿಕೊಂಡಿದ್ದವನು, ಬುಧವಾರ ಮಧ್ಯಾಹ್ನ ಗಾಂಜಾ ನಶೆಯಲ್ಲಿ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾನೆ. ರಾತ್ರಿ ತಾವರೆಕೆರೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ .
ಇದನ್ನೂ ಓದಿ: ಬೀದರ್ ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ 132 ಮಂದಿ ರೈತರು ಆತ್ಮಹತ್ಯೆಗೆ ಶರಣು
ಆರೋಪಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಅಪರಿಚಿತ ವ್ಯಕ್ತಿಯ ಬೈಕ್ ಹಾಗೂ ಮೊಬೈಲ್ ಕಳ್ಳತನ ಮಾಡಿದ್ದ. ಬುಧವಾರ ಮಧ್ಯಾಹ್ನ ಅದೇ ಬೈಕ್ನಲ್ಲಿ ಬಾಲಕಿಯ ಮನೆಯ ಬಳಿ ಬಂದಿದ್ದಾನೆ. ಆನಂತರ ಮನೆಯಿಂದ ದೂರದಲ್ಲಿ ಬೈಕ್ ನಿಲ್ಲಿಸಿ ಮನೆಗೆ ತೆರಳಿ ಕೃತ್ಯ ಎಸೆಗಿದ್ದಾನೆ. ಹತ್ಯೆ ನಂತರ ಮನೆಯಲ್ಲಿ ಇದ್ದ ಸಿಲಿಂಡರ್ ಸಹ ಹೊತ್ತೊಯ್ದಿದ್ದಾನೆ. ಆನಂತರ ಪಕ್ಕದ ಗ್ರಾಮವೊಂದರಲ್ಲಿ ಸಿಲಿಂಡರ್ ಮಾರಾಟ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.