ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅದೆಷ್ಟೊ ಮಂದಿ ಸೋಂಕಿತರು ಉಸಿರಾಟ ಸಮಸ್ಯೆಯಿಂದ ಆಕ್ಸಿಜನ್ ಇರೋ ಆಸ್ಪತ್ರೆಗಾಗಿ ನಿತ್ಯವೂ ಅಲೆದಾಡುತ್ತಲೇ ಇದ್ದಾರೆ. ಪ್ರಾಣ ಉಳಿಸಿಕೊಳ್ಳೋಕೆ ಪರದಾಡುತ್ತಲೇ ಇದ್ದಾರೆ. ಇದರ ನಡುವೆ ಜನ ಸಾಮಾನ್ಯರು ಸಹ ಚಿಕಿತ್ಸೆಗಾಗಿ ನರಳುವಂತ ಪರಿಸ್ಥಿತಿ ಬೆಂಗಳೂರಿನಲ್ಲಿ ಉಂಟಾಗಿದೆ. ಅದೇ ರೀತಿ 38 ವರ್ಷದ ವ್ಯಕ್ತಿ ಆಕ್ಸಿಜನ್ ಸಿಗದೇ ನರಳಿ ನರಳಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಜಗನ್ನಾಥ್ಗೆ ಚಿಕಿತ್ಸೆ ಕೊಡಿಸಲು ಪತ್ನಿ-ಮಗಳು ಬೆಂಗಳೂರೆಲ್ಲ ಅಲೆದಾಡಿ ಸುಸ್ತಾಗಿದ್ದು ಕೊನೆಗೆ ಪತಿಯನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ.
ಕೊವಿಡ್ ರಿಪೋರ್ಟ್ ಇಲ್ಲದೇ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ಆಸ್ಪತ್ರೆಗಳು ಮೃತ ಜಗನ್ನಾಥ್ರಿಗೆ ಚಿಕಿತ್ಸೆ ನೀಡಲು ನಿರಾಕರಿಸಿವೆ. ಪತ್ನಿ-ಮಗಳು ಅಂಗಲಾಚಿದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಸತತ ಎರಡು ದಿನ ಆಸ್ಪತ್ರೆ ಸುತ್ತಿದ್ರೂ ಜಗನ್ನಾಥ್ರಿಗೆ ಚಿಕಿತ್ಸೆ ಸಿಕಿಲ್ಲ. ಕೊನೆಗೆ ಪತ್ನಿ ಮತ್ತು ಮಗಳ ಕಣ್ಣೆದುರೇ ಉಸಿರಾಟ ಸಮಸ್ಯೆಯಿಂದ ನರಳಿ ನರಳಿ ಸಾವನ್ನಪ್ಪಿದ್ದಾರೆ.
ನನ್ನ ಪತಿ ತುಂಬಾ ಚೆನ್ನಾಗಿ ಇದ್ರು, ಬೇಡಿಕೊಂಡ್ರೂ ಆಕ್ಸಿಜನ್ ಸಿಗಲೇ ಇಲ್ಲ. ಕೊವಿಡ್ ನೆಪದಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂದು ಪತಿಯನ್ನು ಕಳೆದುಕೊಂಡ ಪತ್ನಿ ಅನಿತಾ ಕಣ್ಣೀರಿಟ್ಟಿದ್ದಾರೆ. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಗನ್ನಾಥ್ ಸಾಲ ತೀರಿಸಬೇಕು, ಮಗಳಿಗೆ ಒಳ್ಳೆ ಶಿಕ್ಷಣ ಕೊಡಬೇಕೆಂದು ಕನಸು ಕಂಡಿದ್ದರು. ಹೀಗಾಗಿ ಊರು ಬಿಟ್ಟು ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದರು. ಆದ್ರೆ ಈಗ ಉಸಿರಾಟದ ಸಮಸ್ಯೆಯಿಂದ ಆಕ್ಸಿಜನ್ ಸಿಗದೇ ಮೃತಪಟ್ಟಿದ್ದಾರೆ. ಸದ್ಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಕೊರೊನಾ ಮಾರ್ಗಸೂಚಿಯಂತೆ ಜಗನ್ನಾಥ್ರ ಅಂತ್ಯಸಂಸ್ಕಾರ ನಡೆಸಿದೆ. ಇದೀಗ ಜಗನ್ನಾಥ್ ಕಳೆದುಕೊಂಡು ಪತ್ನಿ-ಮಗಳು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ವೈದ್ಯರಾಗಿದ್ದರೂ ತಂದೆ-ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ.. ಪೋಷಕರ ಕಳೆದುಕೊಂಡು ಕಣ್ಣೀರಿಟ್ಟ ವೈದ್ಯೆ
Published On - 9:12 am, Mon, 19 April 21