ಸೋಂಕಿತರಿಗೆ ಸಿಗ್ತಿಲ್ಲ ಬೆಡ್​ಗಳು.. ಬಿಬಿಎಂಪಿ ವೆಬ್‌ಸೈಟ್‌ನಲ್ಲೇ ಐಸಿಯು ಬೆಡ್‌ಗಳು ಫುಲ್

ಸೋಂಕಿತರಿಗೆ ಸಿಗ್ತಿಲ್ಲ ಬೆಡ್​ಗಳು.. ಬಿಬಿಎಂಪಿ ವೆಬ್‌ಸೈಟ್‌ನಲ್ಲೇ ಐಸಿಯು ಬೆಡ್‌ಗಳು ಫುಲ್
ಸಂಗ್ರಹ ಚಿತ್ರ

ಕರುನಾಡಿನಲ್ಲಿ ಕಿಲ್ಲರ್ ಕೊರೊನಾ ಹೆಚ್ಚು ಆರ್ಭಟಿಸ್ತಿರೋದು ರಾಜಧಾನಿ ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಪತ್ತೆಯಾಗ್ತಿರೋ ಸೋಂಕಿತರಿಂದಾಗಿ ಅಪಾಯದ ಪರಿಸ್ಥಿತಿ ಎದುರಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಕೊವಿಡ್ ರೋಗಿಗಳಿಗೆ ಬೆಡ್ ಸಿಗ್ತಿಲ್ಲ.

Ayesha Banu

|

Apr 19, 2021 | 8:14 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಕೊರೊನಾ.. ನಿನ್ನೆ ತನ್ನ ದಾಖಲೆಯನ್ನ ತಾನೇ ಚಿಂದಿ ಮಾಡಿ ಹೊಸ ದಾಖಲೆ ಬರೆದಿದೆ. ಶನಿವಾರ 11,404 ಜನರಿಗೆ ಕೊರೊನಾ ವಕ್ಕರಿಸಿ ದಾಖಲೆ ಬರೆದಿತ್ತು. ಭಾನುವಾರ ಇದನ್ನ ಚಿಂದಿ ಮಾಡಿರೋ ಕಿಲ್ಲರ್ ಕೊರೊನಾ ಬರೋಬ್ಬರಿ 12,793 ಮಂದಿಗೆ ಅಂಟಿಕೊಂಡಿದ್ದು 60 ಜನರನ್ನ ಬಲಿ ಪಡೆದಿತ್ತು. ಈಗ ನಮ್ಮ ಮುಂದೆ ಐಸಿಯು, ವೆಂಟಿಲೇಟರ್ ಇರುವ ಐಸಿಯು ಬೆಡ್‌ಗಳು ಸಮಸ್ಯೆ ಉಂಟಾಗಿದೆ. ಸೋಂಕಿತರಿಗೆ ಬೆಡ್​ಗಳು ಸಿಗುತ್ತಿಲ್ಲ. ಬಿಬಿಎಂಪಿ ವೆಬ್‌ಸೈಟ್‌ನಲ್ಲೇ ಐಸಿಯು ಬೆಡ್‌ಗಳು ಫುಲ್ ಆಗಿವೆ.

ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ‌ಮೆಡಿಕಲ್ ಕಾಲೇಜುಗಳಲ್ಲಿ 323 ICU ಬೆಡ್, 265 ವೆಂಟಿಲೇಟರ್ ಉಳ್ಳ ICU ಬೆಡ್‌ಗಳಿವೆ. ಈ ಪೈಕಿ 316 ಐಸಿಯು ಬೆಡ್‌ಗಳು ಫುಲ್ ಆಗಿರುವ ಮಾಹಿತಿ ಇದೆ. 260 ವೆಂಟಿಲೇಟರ್ ಇರುವ ಐಸಿಯು ಬೆಡ್‌ಗಳು ಫುಲ್ ಆಗಿವೆ. ಏಪ್ರಿಲ್ 18ರ ರಾತ್ರಿ ಕೇವಲ 7 ಐಸಿಯು ಬೆಡ್‌ಗಳು ಖಾಲಿ ಇದ್ದವು. ಹಾಗೂ 5 ವೆಂಟಿಲೇಟರ್ ಇರುವ ಐಸಿಯು ಬೆಡ್‌ಗಳು ಖಾಲಿ ಇದ್ದವು. ಖಾಲಿ ಇದ್ದ ICU, ವೆಂಟಿಲೇಟರ್ ಇರುವ ICU ಬೆಡ್‌ ಫುಲ್ ಆಗಿವೆ. ಸೋಂಕಿತರನ್ನ ಶಿಫ್ಟ್ ಮಾಡಲು BBMP ಅಧಿಕಾರಿಗಳು ಐಸಿಯು ಬೆಡ್‌ಗಾಗಿ ನಿನ್ನೆ ಪರದಾಡಿದಂತಹ ಘಟನೆ ನಡೆದಿದೆ.

ಬಿಬಿಎಂಪಿ ಕೊವಿಡ್ ವಾರ್ ರೂಂಗೆ ಸುಧಾಕರ್ ಭೇಟಿ ಕೊರೊನಾ ಸೋಂಕಿತರಿಗೆ ಬೆಡ್​ಗಳ ಕೊರತೆ ಇಲ್ಲ.. ಹಿಂದೆ ಆಗಿಲ್ಲ.. ಮುಂದೆಯೂ ಆಗಲ್ಲ ಅಂತಾ ಆರೋಗ್ಯ ಸಚಿವ ಸುಧಾಕರ್ ಹೋದಲ್ಲಿ ಬಂದಲ್ಲಿ.. ಹೇಳ್ತಿದ್ದಾರೆ. ಆದ್ರೆ, ರಾಜಧಾನಿ ಬೆಂಗಳೂರಿನ ವಾಸ್ತವ ಸ್ಥಿತಿಯೇ ಬೇರೆ ಇದೆ. ಹಲವಾರು ಕೊರೊನಾ ಸೋಂಕಿತರು ಬೆಡ್​ಗಳಿಗಾಗಿ ಆಸ್ಪತ್ರೆಗಳ ಎದುರು ಕ್ಯೂ ನಿಲ್ತಿದ್ದಾರೆ. ಇದಕ್ಕೆ ನಿನ್ನೆ ಬೆಂಗಳೂರಿನ ಆರ್.ಟಿ.ನಗರದಲ್ಲಿರೋ ಡಾ.ಬಿ.ಆರ್.ಅಂಬೇಡ್ಕರ್ ಆಸ್ಪತ್ರೆ ಬಳಿ ಕಂಡು ಬಂದ ದೃಶ್ಯಗಳೇ ಸಾಕ್ಷಿಯಾಗಿವೆ. ಕೊವಿಡ್ ಕೇರ್ ಸೆಂಟರ್​ಗಳಲ್ಲಿ ಒಂದಾದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಸುಮಾರು 5ಕ್ಕೂ ಅಧಿಕ ಸೋಂಕಿತರು ಆ್ಯಂಬುಲೆನ್ಸ್​ನಲ್ಲೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನದಿಂದ 5ಕ್ಕೂ ಅಧಿಕ ಆ್ಯಂಬುಲೆನ್ಸ್​ಗಳಲ್ಲಿ ಕಾದು ಕಾದು ಬೇರೆ ಆಸ್ಪತ್ರೆಗಳಿಗೆ ತೆರಳಿದ್ರು.

ಬಿಬಿಎಂಪಿ ವತಿಯಿಂದ ಆಸ್ಪತ್ರೆಗಳು ನಿಗದಿಯಾದ್ರೂ ರೋಗಿಗಳು ಪರದಾಡೋದು ತಪ್ಪಿಲ್ಲ. ಯಾಕೆ ಹೀಗೆ ಅಂದ್ರೆ ವೈದ್ಯರ ಬಳಿಯೂ ಉತ್ತರವಿಲ್ಲ. ಆಸ್ಪತ್ರೆಯಲ್ಲಿ ಸದ್ಯಕ್ಕೆ 4 ವೆಂಟಿಲೇಟರ್, 15 ಐಸಿಯು ಬೆಡ್, 60-70 ಜನರಲ್​ ಬೆಡ್​ಗಳು ಇವೆ. ಇವೆಲ್ಲವೂ ಫುಲ್ ಆಗಿವೆ. ನಾಲ್ಕು ದಿನದ ಹಿಂದೆ ಬೆರಳೆಣಿಕೆಯಷ್ಟು ಇದ್ದ ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಇತರ ಆಸ್ಪತ್ರೆಗಳಲ್ಲಿ ಬೆಡ್ ಲಭ್ಯತೆ ನೋಡಿಕೊಂಡು, ಅಲ್ಲಿಗೆ ಸೋಂಕಿತರನ್ನ ಕಳುಹಿಸುತ್ತಿದ್ದೇವೆ ಅಂತಾ ವೈದ್ಯರು ಹೇಳ್ತಾರೆ.

ಇದು ಆಸ್ಪತ್ರೆಗಳ ಸ್ಥಿತಿಯಾದ್ರೆ, ನಿನ್ನೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೊವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಬಿಬಿಎಂಪಿ ಪಶ್ಚಿಮ ವಲಯದ ವಾರ್ ರೂಂಗೆ ಭೇಟಿ ನೀಡಿ ಎಲ್ಲಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ್ರು. ಪಶ್ಚಿಮ ವಲಯದಲ್ಲಿರುವ ಸೋಂಕಿತರು.. ಅವರ ಚಿಕಿತ್ಸೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದ್ರು.

ಮಾರತ್ತಹಳ್ಳಿಯ ಸಾಕ್ರಾ ಆಸ್ಪತ್ರೆಗೆ ಸುಧಾಕರ್ ಭೇಟಿ ಪಶ್ಚಿಮ ವಲಯದ ವಾರ್ ರೂಂಗೆ ಭೇಟಿ ನೀಡಿದ ಬಳಿಕ ಸುಧಾಕರ್ ಮಾರತ್ತಹಳ್ಳಿಯ ಸಾಕ್ರಾ ವರ್ಲ್ಡ್ ಆಸ್ಪತ್ರೆಗೆ ಭೇಟಿ ನೀಡಿದ್ರು. ಈ ವೇಳೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಆಡಳಿತ ಮಂಡಳಿಗೆ ತಾಕೀತು ಮಾಡಿದ್ರು. ಏನಾದ್ರೂ ಸಮಸ್ಯೆ ಆದ್ರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ರು. ಆಸ್ಪತ್ರೆಗೆ ಹತ್ತಿರವಿರೋ ಹೋಟೆಲ್​ಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ರು. ಆರೋಗ್ಯ ಸಚಿವರು ವಾರ್ ರೂಂ ಮತ್ತು ಸಾಕ್ರಾ ಆಸ್ಪತ್ರೆಗೆ ಭೇಟಿ ನೀಡಿದ್ರೆ, ಇತ್ತ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ 5 ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ, ಸೋಂಕಿತರಿಗೆ ಅವಶ್ಯವಿರುವ ಬೆಡ್​ಗಳನ್ನ ಮೀಸಲಿಟ್ಟಿದ್ದಾರಾ ಇಲ್ವಾ ಅಂತಾ ಪರಿಶೀಲನೆ ನಡೆಸಿದ್ರು.

5 ಖಾಸಗಿ ಆಸ್ಪತ್ರೆಗಳಿಗೆ ಗೌರವ್ ಗುಪ್ತಾ ದಿಢೀರ್ ಭೇಟಿ ಬೆಂಗಳೂರಿನಲ್ಲಿ ಕೊರೊನಾ ಕೇಸ್​ಗಳು ಹೆಚ್ಚುತ್ತಿವೆ. ಹೀಗಾಗಿ ಸೋಂಕಿತರ ಚಿಕಿತ್ಸೆಗಾಗಿ ಶೇಕಡ 50ರಷ್ಟು ಬೆಡ್​ಗಳನ್ನ ಮೀಸಲಿಡಲು ಸರ್ಕಾರ ಆದೇಶಿಸಿದೆ. ಇದನ್ನ ಆಸ್ಪತ್ರೆಗಳು ಪಾಲಿಸಿವೆಯೇ ಇಲ್ಲವೇ ಅನ್ನೋದನ್ನ ಖಚಿತ ಪಡಿಸಿಕೊಳ್ಳಲು ಬಿಬಿಎಂಪಿ ಗೌರವ್ ಗುಪ್ತಾ, ನಿನ್ನೆ ವಿಕ್ರಂ, ಪೋರ್ಟಿಸ್, ಆಸ್ಟರ್ ಸಿಎಂಐ, ಕೊಲಂಬಿಯಾ ಏಷಿಯಾ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ರು. ಈ ವೇಳೆ ಯಾವ ಆಸ್ಪತ್ರೆಯಲ್ಲೂ ಸರ್ಕಾರದ ಆದೇಶ ಪಾಲನೆ ಆಗಿಲ್ಲ ಅನ್ನೋದು ಗಮನಕ್ಕೆ ಬಂದಿದೆ. ಹೀಗಾಗಿ 5 ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. 24 ಗಂಟೆಯೊಳಗೆ ಉತ್ತರಿಸದೇ ಇದ್ರೆ, ಒಪಿಡಿ ಬಂದ್ ಮಾಡೋ ಎಚ್ಚರಿಕೆ ನೀಡಿದ್ದಾರೆ.

ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಂಕೆಗೆ ಸಿಗದಂತೆ ಏರ್ತಿದೆ. ಇದರ ನಡುವೆ ಸೋಂಕಿತರು ಬೆಡ್​ಗಳಿಲ್ಲದೇ ಪರದಾಡ್ತಿದ್ದಾರೆ. ಇದೆಲ್ಲವೂ ಗೊತ್ತಿದ್ದೂ.. ಖಾಸಗಿ ಆಸ್ಪತ್ರೆಗಳು ಎಂದಿನಂತೆ ತಮ್ಮ ಕಳ್ಳಾಟ ಮುಂದುವರಿಸಿವೆ. ಈಗಲಾದ್ರೂ ಖಾಸಗಿ ಆಸ್ಪತ್ರೆಗಳು ಎಚ್ಚೆತ್ತುಕೊಂಡು ಸರ್ಕಾರದ ಆದೇಶವನ್ನ ಪಾಲಿಸಿದ್ರೆ ಕೊರೊನಾ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಗೆಲುವು ಸಾಧಿಸಬಹುದು ಅನ್ನೋದು ಜನರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: National Lineman Appreciation Day : ನಡೂರಾತ್ರಿ ಎರಡಗಂಟೇಕ ನನ್ನೊಳಗಿನ ಹೆದರ್ಕೀ ಸ್ಮಸಾಣದಾಗ ಹೂತಬಂದೆ

Follow us on

Related Stories

Most Read Stories

Click on your DTH Provider to Add TV9 Kannada