National Lineman Appreciation Day : ನಡೂರಾತ್ರಿ ಎರಡಗಂಟೇಕ ನನ್ನೊಳಗಿನ ಹೆದರ್ಕೀ ಸ್ಮಸಾಣದಾಗ ಹೂತಬಂದೆ

‘ಏನಾರ ತಿನ್ಕಂಡ್ ಕೆಲ್ಸಕ್ಕಿಳಿಯೋಣ ಅಂತಾ ನಂಜಪ್ಪ ಮೇಸ್ತ್ರೀ ಅಂದ್ರು, ಒಂದಿಬ್ರೂ ಏನಾರಾ ತರ್ತೀವಂತಾ ಹೋದ್ರು ಊಟ ಸಿಗ್ಲಿಲ್ಲ, ನಿಮ್ಗೂ ಗೊತ್ತಲಾ ಆಗ ನಮ್ ರೇಟಿನ್ಯಾಗ ಸಿಗೋದಿಲ್ಲಂತ. ಬಿಸ್ಕೇಟ್, ಬಾಳೆಣ್ಣು ಇಡ್ಕಂಡ್ ಬಂದ್ರೂ ತಿಂದು, ಅಲ್ಲೇ ಮಸ್ಣಾ ಕಾಯ್ತಿದ್ದವ್ನಾ ಎಬ್ಸಿ ನೀರ ಇಸ್ಕಂಡ್ ಕುಡ್ದುವೀ. ಆದ್ರ ಬಾಳ ಸಂಕ್ಟಾಗಿದ್ರಂದ್ರ ಅವ್ನ್ ಗುಡಸಲ್ಗೇ ಲೈಟಿರ್ಲಿಲ್ಲ ಪಾಪ. ಚಿಮಣಿ ದೀಪ್ದಾಗ ಬದ್ಕು ದೂಡ್ತಿದ್ದ. ನಮಿಗ ಬೆಳ್ಕಿದ್ದೂ ಒಬ್ರ ಇದ್ವಂದ್ರ ಜಲ್ಮಾ ಹೊಯ್ದಾಡ್ತದ. ಇಂವಾ ಗ್ರೇಟ್, ಜಗತ್ತಿ‌ನ ಕಣ್ಗೆ ಇವ್ನೂ ಹೆಣ ಆಗಿ ಎಷ್ಟೋ ಶತಮಾನ ಕಳ್ದವಲ್ಲಾ ಅನ್ನಿಸ್ತು.‘ ದುರಾಹ

National Lineman Appreciation Day : ನಡೂರಾತ್ರಿ ಎರಡಗಂಟೇಕ ನನ್ನೊಳಗಿನ ಹೆದರ್ಕೀ ಸ್ಮಸಾಣದಾಗ ಹೂತಬಂದೆ
ಲೈನ್​ಮನ್ ದುರಾಹ
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:Apr 19, 2021 | 8:54 AM

ಬಳ್ಳಾರಿ ಜಿಲ್ಲಾ ಕೊಟ್ಟೂರು ತಾಲೂಕಿನ ಹರಾಳು ಅನ್ನೋ ಸಣ್ಣ ಹಳ್ಳಿಯ ಲೈನ್ಮನ್​ ದುಮ್ಮಾಡಿ ರಾಮಪ್ಪ ಹರಾಳು ಅವರು ನಮ್ಮೆಲ್ಲಾರಿಗೂ ಒಂದ್ ಪತ್ರಾ ಬರದಾರು. ಯಾಕಂದ್ರ ಈವತ್ತ ‘ರಾಷ್ಟ್ರೀಯ ಲೈನ್​ಮನ್​ ಸ್ತುತಿ ದಿನ’. ಇವರು ಸರ ಸರ ಕಂಬ ಏರಿ ರಿಪೇರಿ ಮಾಡೂದಲ್ದ ಹೊಲದ ಕೆಲಸಾನೂ ಮಾಡ್ತಾರು, ಒಲಿ ಹೂಡಿ ಜೋಳದ ಮುದ್ದೀನೂ ಮಾಡ್ತಾರು, ಕುರಿ ಹಿಂಡೂ ಕಾಯ್ತಾರು ಎಲ್ಲಾಕಿಂತ ಮುಖ್ಯ ಅಂದ್ರ ಇವರು ಯಾವಾಗಲೂ ಕವಿತೆ ನಶೆಯೊಳಗ ಇರ್ತಾರು. ನಾ ಬರೀ ಕವನದಾ ಮನಷ್ಯಾರೀ, ಅಂಥಾ ಪರೀ ಏನು ಬರಿಯೂ ಮನಷ್ಯಾ ಅಲ್ರೀ ಅನ್ಕೋತನ ನಿಮ್ಮೆಲ್ಲಾರಿಗೂ ಒಂದು ಪತ್ರಾ ಬರದಾರು. 

ನಮಸ್ಕಾರರೀ, ನಮ್ ಜನ ಈವೊಂದು ಇಲಾಖೆ ಹೆಸ್ರು ಕೇಳಿದ್ರೇನೇ ಬೈತಾರಾ, ಮತ್ ಅಷ್ಟೆ ಭಯಾನೂ ಪಡ್ತಾರಾ. ಈ ಜನಕ್ಕ ಕೆಇಬಿಯಾವ್ರಂದ್ರ ಆಗಬರಾಂಗಿಲ್ಲೇನೋ ಅಂತ ನಂಗ್ಯಾವಾಗ್ಲೂ ಅನ್ನಸ್ತಿರ್ತದ. ಆದ್ರ ಒಂದ್​ ಮಾತ ಮೊದ್ಲ ತಿಳ್ಕೊಂಬಿಡ್ರಿ, ಕರೆಂಟ್ ಹೋತಂದ್ರ ಅದು ನಮ್ಮ ತಪ್ಪಲ್ಲ. ಯಾಕಂದ್ರ ನೋಡ್ರೀ ಇಲ್ಯಾರೂ ಬೇಕ್ ಬೇಕಂತಾನ ಕರೆಂಟ್ ತಗ್ಯಂಗಿಲ್ಲ, ಹಂಗ್ ಮಾಡಾಕೂ ಬರೂದಿಲ್ಲ; ಮಳಿ, ಗಾಳಿ ಎದ್ದು ಕೊಂಬಿ ಮುರ್ದ್ ಲೈನ್ ಮ್ಯಾಲ ಬಿದ್ರ ಆಗ ಆಯಾ ಏರಿಯಾದ ಫೀಡ್ರು ಟ್ರಿಪ್ ಆಗಿ, ಕರೆಂಟ್ ಆಫ್ ಆಗ್ತದ ಅಷ್ಟ.

ಆಗ ನಾ ಲೈನ್ಮನ್​ ಆಗಿ ಕೆಲ್ಸಕ್ ಸೇರಿ ವರ್ಸಾಗಿತ್ತು. ಅದು ಮಳಿಗಾಲ ಬ್ಯಾರೆ; ಆಗಂತೂ ನಾವು ಯಾವಾಗಲೂ ಒದ್ದಿ ಬಟ್ಟಿ ಮ್ಯಾಲ ಇರ್ಬೇಕಾಗಿ‌ ಬರ್ತದ, ಎಷ್ಟೋ ಸಲ ನೆಗ್ಡಿ, ಚಳಿ ‌ಜ್ವರ ಬಂದ್ ಮೂಲಿ ಹಿಡೀತೀವಿ, ಇದ್ಯಾರ್ ಕಣ್ಗೂ ಕಾಣ್ದಂತದ್ದು; ಯಾಕಂದ್ರ ನೀವ್ಯಾರೂ ಆಗ ಹೊಸ್ಲು ದಾಟಿನೇ ಬರೋದಿಲ್ಲಲ್ಲ! ಆವತ್ತೊಂದಿನಾ ಬೆಳಗ್ಗೆ ಹೋಗಿ ಮಾಮೂಲಿ ಕೆಲ್ಸ ಮುಗಸ್ಕಂಡು,  ಮನಿಗಿ ಆಗ್ತಾನಾ ಬಂದು ಚಾವು ಕುಡೀತಾ ಕುಂತಿದ್ದೆ; ಕೂಡ್ಲೇ ಜೆಇ ಫೋನ್ ಬಂತು, “ನೋಡ್ರೀ ಹೂಡಿ ಲೈನ್ ಫಾಲ್ಟ್ ಆಗೇತಿ, ಆಫೀಸತ್ರಾ ಜಲ್ದಿ ಬನ್ನಿ” ಅಂತಾ. ಆಗ ನಾನಿನ್ನೂ ಡ್ರಸ್ ಕಳ್ಚಿರ್ಲಿಲ್ಲ, ಬೈಕ್ ಏರಿ ಹೋದೆ. ಉಳ್ದಾ ನಮ್ ಕೊಲೀಗ್ಸು ಜಯಣ್ಣ, ಸ್ವಾಮಿಯಣ್ಣ, ಮಂಜಣ್ಣ,‌ ಮುನ್ಯಣ್ಣ, ಕಿರಣ, ಕ್ರಿಷ್ಣ ಎಲ್ರೂ ಬಂದಿದ್ರು, ನಮ್ ಡಿಪಾರ್ಟ್ಮೆಂಟ್ ಟೀಟಿ ಗಾಡಿ ಹತ್ತಿ ಹೊಂಟಾಗ ಉಣ್ಣೋ ಹೊತ್ತಾಗಿತ್ತನ್ಸುತದಾ ಆಗ್ಲೇ ಹೊಟ್ಟಿ ಗಾರು ಗಾರಂತಿದ್ವು. ಈ ಟ್ರಾನ್ಸ್ಮಿಷನ್ ಲೈನ್ ಟವರ್​ರ್ಗೋಳಾಗ ಫಾಲ್ಟ್ ನೋಡ್ಕೆಂತಾ ನೋಡ್ಕೆಂತಾ ಹೊಂಟ್ವಿ.

lineman

ಲೈನ್ಮನ್​ ದುರಾಹ ಅವರು ನಂಬಿದ ಪುಸ್ತಕ ಜಗತ್ತು ಮತ್ತು ಮಣ್ಣು

ನಿಮಗಿನ್ನೊಂದ್ ಮಾತ್ ಹೇಳೂದ ಮರ್ತೆ. ನಮಗ ಈ ಸಮಸ್ಯಿ ಕೆಲ್ಸ ಮಾಡೋದಲ್ಲ, ಈ ಲೈನ್ ಫಾಲ್ಟ್ ಹುಡ್ಕೋದು. ಅದ್ಕೇ ಬಾಳ ಟೇಮು ಹಿಡಿತದಾ. ಅಂತೂ ಸಿಕ್ತು ನೋಡ್ರೀ ಅವ್ನೌನಾ, ಹುಡಕ್ಕೋಂತ್ ಹೋದಮ್ಯಾಲ ಸಿಗಾಕನ ಬೇಕು. ಹೂಡಿ ಕೆರಿ ಏರಿ ಮ್ಯಾಗಿದ್ದ ಮಸಣ್ದಾಗಿನ ಟವರ್ನ್ಯಾಗ ಜಂಪ್ ಕಟ್ಟಾಗಿ ಬಿದ್ದಿತ್ತು. ಇಲ್ಲಿ ಆಫ್ ಆತಂದ್ರಾ ಇಡೀ ಅರ್ಧ ಬೆಂಗ್ಳೂರಗೇ ಸಪ್ಲೈನೇ ನಿಲ್ತದ. ಆಗ ಹೆಚ್ಚೂ ಕಡ್ಮಿ ಹನ್ನಂದ್ರ ಮ್ಯಾಲಾನಾ ನಿಮ್ಷದ ಮುಳ್ಳಿತ್ತು. ‘ಏನಾರ ತಿನ್ಕಂಡ್ ಕೆಲ್ಸಕ್ಕಿಳಿಯೋಣ’ ಅಂತಾ ನಂಜಪ್ಪ ಮೇಸ್ತ್ರೀ ಅಂದ್ರು, ಒಂದಿಬ್ರೂ ಏನಾರಾ ತರ್ತೀವಂತಾ ಹೋದ್ರು ಊಟ ಸಿಗ್ಲಿಲ್ಲ, ನಿಮ್ಗೂ ಗೊತ್ತಲಾ ಆಗ ನಮ್ ರೇಟಿನ್ಯಾಗ ಸಿಗೋದಿಲ್ಲಂತ. ಬಿಸ್ಕೇಟ್, ಬಾಳೆಣ್ಣು ಇಡ್ಕಂಡ್ ಬಂದ್ರೂ ತಿಂದು, ಅಲ್ಲೇ ಮಸ್ಣಾ ಕಾಯ್ತಿದ್ದವ್ನಾ ಎಬ್ಸಿ ನೀರ ಇಸ್ಕಂಡ್ ಕುಡ್ದುವೀ. ಆದ್ರ ಬಾಳ ಸಂಕ್ಟಾಗಿದ್ರಂದ್ರ ಅವ್ನ್ ಗುಡಸಲ್ಗೇ ಲೈಟಿರ್ಲಿಲ್ಲ ಪಾಪ. ಚಿಮಣಿ ದೀಪ್ದಾಗ ಬದ್ಕು ದೂಡ್ತಿದ್ದ. ನಮಿಗ ಬೆಳ್ಕಿದ್ದೂ ಒಬ್ರ ಇದ್ವಂದ್ರ ಜಲ್ಮಾ ಹೊಯ್ದಾಡ್ತದ. ಇಂವಾ ಗ್ರೇಟ್, ಜಗತ್ತಿ‌ನ ಕಣ್ಗೆ ಇವ್ನೂ ಹೆಣ ಆಗಿ ಎಷ್ಟೋ ಶತಮಾನ ಕಳ್ದವಲ್ಲಾ ಅನ್ನಿಸ್ತು.

ಬಂದು ಕೆಲ್ಸಕ್ಕ ಅಣಿಯಾದ್ವಿ, ಅಷ್ಟೊತ್ಗೆ ಏಡಬ್ಲಿಯೋರು ಎಲ್.ಸಿ (ಲೈನ್ ಕ್ಲಿಯರ್) ತಗಂಡಿದ್ರು, (ಈ ಲೈನ್ ಎರ್ಡ್ ಕಡಿ ಹೋಗ್ತದ ಒಂದು ಎಚ್ಚಸ್ಸಾರು ಇನ್ನೊಂದು ಇಪಿಐಪಿ, ಹಿಂಗಿದ್ದಾಗ ರಾತ್ರಿ ೧೨ರ ಮ್ಯಾಲನ ಎಲ್.ಸಿ ಗೆ ಪರ್ಮಿಶನ್ ಸಿಗೂದು. ಆಗ್ಯೆಲ್ಲಾ ಮಲ್ಗಿರ್ತಾರ, ನಾವು ಆಗ ಕೆಲ್ಸಾ ಮಾಡ್ಬೇಕಂದ್ರ ಇನ್ನೊಂದು ಕಡಿ ಶೇ ೩೦ ಭಾಗ ಬೆಂಗ್ಳೂರಗೆ ಕರೆಂಟ್ ಆಫ್ ಮಾಡ್ಕಳ್ಳಲೇಬೇಕು, ಬ್ಯಾರೇ ಮೂಲ ಇಲ್ಲ) ಸೇಫ್ಟಿ ಬೆಲ್ಟ್ ಹಾಕ್ಕಂಡ್, ತಲೀಗೆ ಹೆಲ್ಮೆಟ್ ಏರ್ಸಿಕಂಡ್, ದೊಡ್ಡ ಸೈಜು ಒಂದು ಸ್ಪ್ಯಾನರ್ ಸೆಟ್, ಕ್ರಿಂಪಿಂಗ್ ಟೂಲ್, ಹಗ್ಗ, ಏಣಿ, ಸುತ್ಗೆ ಎಲ್ರೂ ತಗಂಡ್ ಟವರ್ ಮೇಲೇರಿದ್ವಿ, ಸುತ್ಲೂ ಕತ್ಲು, ಆ ಟವರ್ ಲೈನ್ ಫಾಲ್ಟ್ ಆತಂದ್ರ ಅರ್ಧಾ ಬೆಂಗಳೂರಿಗೇ ಕರೆಂಟ್ ಸಪ್ಲೈ ನಿಲ್ತದ ಅಂದಿದ್ನಲ್ರೀ, ಹಂಗಾಗಿ ಸೇಫ್ ಝೋನ್ ಕ್ರಿಯೇಟ್ ಮಾಡ್ಕಂಡ್ವಿ, ಇದ್ದ ಒಂದೇ ಟಾರ್ಚು, ಸಾಯೋಂಗಿತ್ತು. ಅಂತೂ ಫೋನ್ ಬೆಳಕಿನ್ಯಾಗ ಕ್ಲಾಂಪ್ ಹಾಕಿ ಕೆಳಗಿಳ್ಯೋತ್ಗೆ ಎರ್ಡರ ಮೇಲಾಗಿತ್ತು, ಅಷ್ಟೊತ್ತಾಗಾಗ್ಲೇ ನಮ್ ಜೆಇ ಗೆ ಮ್ಯಾಲಿಂದ ಮ್ಯಾಲ ಫೋನ್ ಬಂದು, ರೀ ನಾನು ಈ ಇಂತಿಂತಾ ಏರ್ಯಾದ ಬಿಬಿಎಂಪಿ ಮೆಂಬರು, ಹಲೋ‌ ನಾನ್ರೀ ಎಮ್ಮೆಲ್ಲೆ ಕಡ್ಯೋನು, ಇವತ್ತೊಂದು ಫಂಕ್ಷನ್ನಿತ್ತಂತ ಒಬ್ನು, ನಾವ್ ಸರ್ಯಾಗಿ ಬಿಲ್ಲು ಕಟ್ದುದ್ರೂನು ನಿಮ್ಗೆ ಸರ್ಯಾಗಿ ಕರೆಂಟ್ ಕೊಡ್ಲಿಕ್ಕಾಗಲ್ಲಲ್ಲಂತಾ ಮತ್ತೊಬ್ನೂ ಬೈದಾಡಿ, ಗೊಣ್ಗಾಡಿದ್ರಂತ ಅನ್ಸತದ… ಅವ್ರ ಮಾರಿ‌ ನೋಡಿದ್ರ ತಿಳೀತಿತ್ತು.

ಆಮ್ಯಾಲ ಅಲ್ಲಿದ್ದ ಗೋರಿಗಳ ಮ್ಯಾಲ‌ ಕುಂತು ಸುಸ್ತು ಕಳ್ಕೊಂಡ್ವಿ. ಆಮ್ಯಾಲ್ ಏನ್ ಮಾಡೂದು? ಹಗರ್ಕ ನಾನು ಒಂದೊಂದ್ ಗೋರಿ ಮ್ಯಾಗ ಸತ್ತೋರ ಹುಟ್ಟಿದ ದಿನಾ, ಸತ್ತ ದಿನಾನ ಬ್ಯಾಟ್ರಿ ನೋಡ್ಕೊಂತ ಹೋದೆ. ಅಲ್ಲೀತನಕ ನನ್ ಒಳಗಿದ್ದ ಹೆದರ್ಕೀನ ಅಲ್ಲೇ ಹೂತು ಬಂದ್ಬಿಟ್ಟೆ!

lineman

ಮುದ್ದಿ ತಿರವಾಕೂ ಸೈ ಟರ್ ಬ್ಯಾ…. ಕೂ ಸೈ

ಎಲ್.ಸಿ ರಿಟನ್ನಾದ ಮ್ಯಾಲ ಲೈನು ಚಾರ್ಜ್ ಆಯ್ತು, ಮತ್ತ ಎಲ್ಲಾ ಸಾಮಾನು ಗಾಡ್ಯಾಗ ಏರ್ಕಂಡ್ ಮನಿ ದಾರಿ ಹಿಡ್ದುವಿ, ಕೆಲವ್ರು ಅಲ್ಲಲೇ ಮನಿ ಸಮೀಪಂತಾ ಇಳ್ಕಂಡ್ರು, ನಾವ್ ಹುಡ್ರೆಲ್ಲಾ ಆಫೀಸಿಗಿ ಬಂದು ಸಾಮಾನು ಇಳ್ಸಿ, ಮನಿಗಿ ಹೋದ್ವಿ ಎಲ್ಲಾ ನಿದ್ದಿ ಹೋಗಿದ್ರು, ಹೊಟ್ಟಿ ಗುರ್ರಂತಿತ್ತು, ಇದ್ದದ್ದು ತಿನ್ಕಂಡ್ ಹಾಸ್ಗಿ ಹಿಡ್ದುನಿ, ಬೆಳಗ್ಗಿ ಎಚ್ರಾದಾಗ ಹತ್ತೂವರೀ.

ಆತ್ಮೀಯರ ನೋಡ್ರೀ ನಮ್ಗೂ ನಿಮ್ಮಂಗ ಮನಿ, ಹೆಂಡ್ತಿ, ಮಕ್ಳು, ಬದ್ಕು ಅದ. ಈ ಕೆಲ್ಸದ ಬಗ್ಗೆ ಮತ್ ಹೇಳೂದೇನಿಲ್ಲ. ಯಾಕಂದ್ರ ಇದು ಒಂದ ಶಬ್ದದ ಕೆಲಸ; ಡೇಂಜರ್. ಯಾಮಾರಿದ್ರ ಸಾಬಿ ಅಂಗ್ಡೀ ರೋಸ್ಟ್ ಕೋಳಿಗಳು ಎದ್ಕೂ ಬ್ಯಾಡಾ ಹಂಗಾಗಿರ್ತೇವಿ, ಕರೆಂಟ್ ಹೋದ್ರ ಸೀದಾ ಆಫೀಸ್ ನಂಬರ್ಕ ಫೋನ್ ಹಚ್ರೀ, ದಯ್ಮಾಡಿ ಲೈನ್ಮನ್​ಗೋಳಿಗೆ ಮಾಡ್ಬಾಡ್ರೀ, ಕೆಲ್ಸದಾಗಿರ್ತಾರ. ಅವ್ರ ಜೀವ ರಕ್ಷಣಾ ನಿಮ್ ಕೈಲೂ ಅದ ತಿಳೀರಿ, ನಾವೂ ನಿಮ್ಮಂಗ ಮನ್ಷಾರಿದ್ದೀವಿ. ಅರ್ಥ ಮಾಡ್ಕೋತೀರಿ ಅನ್ಕಂತೀನಿ, ಮತ್ತೆ ಸಿಗೂಣಂತ.

ಇಂತಿ ನಿಮ್ಮವ ಲೈನ್ಮನ್

national lineman appreciation day special writeup by lineman dhuraha

ಇದನ್ನೂ ಓದಿ : ಹುಟ್ಟಿಸಿದವರನೆಲ್ಲ ಓದಿಸುತ್ತೇನೆಂದು ಬರೆದುಕೊಟ್ಟಿದ್ದೇನೇನು? ಅಪ್ಪ ಅಪರಿಚಿತನೇ ಆಗಿಬಿಟ್ಟ

Published On - 11:08 pm, Sun, 18 April 21