Hubballi Ankola Railway Line Project: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಿದೆ ರೈಲ್ವೆ

|

Updated on: Sep 01, 2023 | 5:25 PM

ಹುಬ್ಬಳ್ಳಿ-ಅಂಕೋಲಾ ನಡುವೆ ಹೊಸ ಬ್ರಾಡ್ ಗೇಜ್ ರೈಲು ಮಾರ್ಗ ನಿರ್ಮಾಣಕ್ಕಾಗಿ ಕಾರವಾರ, ಯಲ್ಲಾಪುರ ಮತ್ತು ಧಾರವಾಡ ವಿಭಾಗಗಳ 595.64 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅರ್ಜಿದಾರರು, ಪ್ರಸ್ತಾವನೆಯನ್ನು ಪ್ರಶ್ನಿಸಿದ್ದರು. ಹೀಗಾಗಿ ಹೊಸ ಪ್ರಸ್ತಾವನೆ ಸಲ್ಲಿಸುವುದಾಗಿ ರೈಲ್ವೆ ಇಲಾಖೆ ಹೇಳಿದೆ.

Hubballi Ankola Railway Line Project: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಿದೆ ರೈಲ್ವೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್ 01: ರಾಷ್ಟ್ರೀಯ ವನ್ಯಜೀವಿ ಮಂಡಳಿ ರಚಿಸಿರುವ ಸಮಿತಿಯ ಶಿಫಾರಸಿನಂತೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ (Hubballi Ankola Railway Line Project) ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವುದಾಗಿ ರೈಲ್ವೆ ಇಲಾಖೆ ಕರ್ನಾಟಕ ಹೈಕೋರ್ಟ್‌ಗೆ (Karnataka High Court) ತಿಳಿಸಿದೆ. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ತೆಗೆದುಕೊಂಡ ನಿರ್ಧಾರದ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠವು ವಿಲೇವಾರಿ ಮಾಡಿದೆ. ರೈಲ್ವೆ ಇಲಾಖೆ ಸಲ್ಲಿಸಿದ ಅಫಿಡವಿಟ್ ಅನ್ನು ದಾಖಲಿಸಿಕೊಂಡ ನಂತರ ಪೀಠವು ಅರ್ಜಿಗಳ ವಿಲೇವಾರಿ ಮಾಡಿದೆ.

ಹುಬ್ಬಳ್ಳಿ-ಅಂಕೋಲಾ ನಡುವೆ ಹೊಸ ಬ್ರಾಡ್ ಗೇಜ್ ರೈಲು ಮಾರ್ಗ ನಿರ್ಮಾಣಕ್ಕಾಗಿ ಕಾರವಾರ, ಯಲ್ಲಾಪುರ ಮತ್ತು ಧಾರವಾಡ ವಿಭಾಗಗಳ 595.64 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅರ್ಜಿದಾರರು, ಪ್ರಸ್ತಾವನೆಯನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯ ಸಾಧಕ ಬಾಧಕ ಬಗ್ಗೆ ಮೌಲ್ಯಮಾಪನಕ್ಕೆ ಹೈಕೋರ್ಟ್ ಸೂಚನೆ

ಹೈಕೋರ್ಟ್ ನೀಡಿದ ನಿರ್ದೇಶನಗಳನ್ನು ಅನುಸರಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಸಮಿತಿಯನ್ನು ರಚಿಸಲಾಗಿದೆ ಎಂದು ರೈಲ್ವೆ ತನ್ನ ಅಫಿಡವಿಟ್‌ನಲ್ಲಿ ಸಲ್ಲಿಸಿದೆ. ಸಮಿತಿಯು ತಾನು ಮಾಡಿದ ಶಿಫಾರಸುಗಳಿಗೆ ಅನುಗುಣವಾಗಿ ಯೋಜನೆಯ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ರೈಲ್ವೆಗೆ ಸೂಚಿಸಿತ್ತು. ಅದರಂತೆ ರೈಲ್ವೆ ಇಲಾಖೆಯು ಹೈಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿತ್ತು.

ಉತ್ತರ ಕರ್ನಾಟಕ ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾಗಿರುವ ಈ ರೈಲು ಮಾರ್ಗದ ಪ್ರಸ್ತಾವನೆಯನ್ನು 1998ರಲ್ಲೇ ಮೊದಲು ಸಲ್ಲಿಸಲಾಗಿತ್ತು. ಅಂದಿನಿಂದಲೂ ಯೋಜನೆಗೆ ಪರಿಸರವಾದಿಗಳು ಹಾಗೂ ವನ್ಯಜೀವಿ ಸಂರಕ್ಷಕರ ವಿರೋಧವಿದೆ. ಒಂದೊಮ್ಮೆ ಯೋಜನೆ ಜಾರಿಯಾದರೆ ಉತ್ತರ ಕನ್ನಡದ ಪಶ್ಚಿಮ ಘಟ್ಟದ ಭಾಗದಲ್ಲಿ 2.2 ಲಕ್ಷ ಮರಗಳ ಮಾರಣಹೋಮವಾಗಲಿದೆ ಎನ್ನಲಾಗಿದೆ. ಹಲವಾರು ದಶಕಗಳ ಬೇಡಿಕೆಯಾಗಿರುವ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗದ ಯೋಜನೆಗೆ ಪರಿಸರವಾದಿಗಳು ನಿರಂತರವಾಗಿ ವಿರೋಧ ಮಾಡುತ್ತಲೇ ಬಂದಿದ್ದಾರೆ. ಅತ್ತ ಈ ಯೋಜನೆ ಮಾಡಲೇಬೇಕು ಅಂತಾ ಅಂಕೋಲಾ ಜನರು ನಿರಂತರವಾಗಿ ಹೋರಾಟ ಮಾಡುತ್ತಲೇ ಇದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ