ಹೆಚ್​ಎಂಟಿ ಪುನಶ್ಚೇತನಕ್ಕೆ ಭಾರಿ ಬಂಡವಾಳ ಹೂಡಲಿದೆ ಕೇಂದ್ರ: ಪ್ರಧಾನಿ ಮೋದಿ ಜತೆ ಕುಮಾರಸ್ವಾಮಿ ಮಾತುಕತೆ

| Updated By: Ganapathi Sharma

Updated on: Sep 11, 2024 | 7:38 AM

ಒಂದು ಕಾಲದ ಪ್ರಸಿದ್ಧ ಹೆಚ್​ಎಂಟಿ ವಾಚ್ ಬ್ರ್ಯಾಂಡ್​ ಅನ್ನು ಹೇಗಾದರೂ ಮಾಡಿ ಪುನಶ್ಚೇತನ ಮಾಡಬೇಕೆಂಬ ಜಿದ್ದಿಗೆ ಬಿದ್ದಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್​ಡಿ ಕುಮಾರಸ್ವಾಮಿ ಇದೀಗ ಆ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ್ದು, ಕಂಪನಿಯಲ್ಲಿ ಕೇಂದ್ರದಿಂದ ಭರ್ಜರಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.

ಹೆಚ್​ಎಂಟಿ ಪುನಶ್ಚೇತನಕ್ಕೆ ಭಾರಿ ಬಂಡವಾಳ ಹೂಡಲಿದೆ ಕೇಂದ್ರ: ಪ್ರಧಾನಿ ಮೋದಿ ಜತೆ ಕುಮಾರಸ್ವಾಮಿ ಮಾತುಕತೆ
ಹೆಚ್​ಎಂಟಿ ಪುನಶ್ಚೇತನಕ್ಕೆ ಭಾರಿ ಬಂಡವಾಳ ಹೂಡಲಿದೆ ಕೇಂದ್ರ: ಪ್ರಧಾನಿ ಮೋದಿ ಜತೆ ಕುಮಾರಸ್ವಾಮಿ ಮಾತುಕತೆ
Follow us on

ಬೆಂಗಳೂರು, ಸೆಪ್ಟೆಂಬರ್ 11: ಕರ್ನಾಟಕದ ಹೆಚ್​ಎಂಟಿ ವಾಚ್ ಬ್ರ್ಯಾಂಡ್​ ಅನ್ನು ಹೇಗಾದರೂ ಮಾಡಿ ಪುನಶ್ಚೇತನ ಮಾಡಿ ರಾಜ್ಯದ ಪ್ರಸಿದ್ಧ ಬ್ರ್ಯಾಂಡೊಂದರ ಪುನರುತ್ಥಾನ ಮಾಡಲೇಬೇಕೆಂದು ಟೊಂಕ ಕಟ್ಟಿದಂತಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್​ಡಿ ಕುಮಾರಸ್ವಾಮಿ ಇದೀಗ ಮತ್ತೊಂದು ಶುಭ ಸುದ್ದಿ ನೀಡಿದ್ದಾರೆ. ಹೆಚ್​ಎಂಟಿ ವಾಚ್ ತಯಾರಿಕಾ ಸಂಸ್ಥೆಗೆ ಕೇಂದ್ರ ಸರ್ಕಾರ ಭಾರಿ ಬಂಡವಾಳ ಹೂಡುವಂತೆ ಮಾಡುವಲ್ಲಿ ಅವರು ಬಹುತೇಕ ಯಶಸ್ವಿಯಾಗಿದ್ದಾರೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ.

ಹೆಚ್​ಎಂಟಿ ವಾಚ್ ತಯಾರಿಕಾ ಕಂಪನಿ ಪುನಶ್ಚೇತನಕ್ಕೆ 6,500 ಕೋಟಿ ರೂಪಾಯಿಗೂ ಹೆಚ್ಚ ಹಣ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಇದರೊಂದಿಗೆ ಈ ಬ್ರ್ಯಾಂಡ್​ಗೆ ಮರುಜೀವ ಕೊಡಲು ಕುಮಾರಸ್ವಾಮಿ ರೂಪುರೇಷೆ ಸಿದ್ಧಪಡಿಸಿದ್ದಾರೆ.

ಹೆಚ್​ಎಂಟಿ ಪುನಶ್ಚೇತನಕ್ಕೆ ಹೆಚ್​ಡಿಕೆ ಐಡಿಯಾಗಳೇನು?

ಹೆಚ್​ಎಂಟಿ ಪುನಶ್ಚೇತನಕ್ಕೆ ಕುಮಾರಸ್ವಾಮಿ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ ತಂತ್ರಜ್ಞಾನ ಬಳಸಿ ಹೊಸ ಮಾದರಿ ವಾಚ್ ತಯಾರಿಕೆಗೆ ಪ್ಲಾನ್ ರೂಪಿಸಲಾಗಿದೆ. ಇದರೊಂದಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡಿಂಗ್​​ಗೆ ಕೂಡ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಸ್ಥಳೀಯ ತಂತ್ರಜ್ಞರಿಗೇ ಆದ್ಯತೆ

ಸ್ಥಳೀಯ ತಂತ್ರಜ್ಞರನ್ನೇ ಬಳಸಿ ಆಧುನಿಕ ಮಾದರಿ ವಾಚ್ ತಯಾರಿಕೆ ಒತ್ತು ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ವಿಕಸಿತ ಭಾರತ ಯೋಜನೆ ಅಡಿ ಭಾರಿ ಮೊತ್ತದ ಹಣ ಹೂಡಿಕೆಗೆ ಕೇಂದ್ರ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ತಜ್ಞರ ಜತೆ ಈಗಾಗಲೇ ಕುಮಾರಸ್ವಾಮಿ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಉದ್ಯೋಗಾವಕಾಶ

ಕೇಂದ್ರ ಸರ್ಕಾರದ ಬಂಡವಾಳ ಹೂಡಿಕೆಯಿಂದ ಕರ್ನಾಟಕದ ಯುವಕರಿಗೆ, ತಂತ್ರಜ್ಞರಿಗೂ ಉದ್ಯೋಗ ಅವಕಾಶ ದೊರೆಯಲಿದೆ. ಮಾರ್ಕೆಂಟಿಂಗ್ ಹಾಗೂ ಸೇಲ್ಸ್ ವಿಭಾಗಕ್ಕೂ ಮರು ಜೀವ ಕೊಡಲು ಚಿಂತನೆ ನಡೆಸಲಾಗಿದೆ. ಇದು ಉದ್ಯೋಗಾವಕಾಶ ಹೆಚ್ಚಿಸಲಿದೆ.

ಇದನ್ನೂ ಓದಿ: ಉಡುಗೊರೆಯಾಗಿ HMT ವಾಚ್​ನ್ನೇ ನೀಡಿ: ರಾಜ್ಯದ ಸಂಸದರಿಗೆ ಕುಮಾರಸ್ವಾಮಿ ಕರೆ

ಹೆಚ್​ಎಂಟಿ ವಾಚ್​​ಗೆ ಜಾಗತಿಕ ಮನ್ನಣೆ ದೊರಕಿಸುವ ನಿಟ್ಟಿನಲ್ಲಿ ಉತ್ಪಾದನೆ ಗುಣಮಟ್ಟಕ್ಕೆ ಒತ್ತು ನೀಡಲೂ ಕೇಂದ್ರ ಸರ್ಕಾರ ಆದ್ಯತೆ ನೀಡಲಿದೆ.

ಇದನ್ನೂ ಓದಿ: ಗೌರಿಹಬ್ಬದಂದು ಪುತ್ರ ನಿಖಿಲ್​ಗೆ ಭರ್ಜರಿ ಗಿಫ್ಟ್​ ನೀಡಿದ ಕುಮಾರಸ್ವಾಮಿ

ಗೌರಿಹಬ್ಬದಂದು ಪುತ್ರ ನಿಖಿಲ್ ಕುಮಾರಸ್ವಾಮಿಗೆ ಹೆಚ್​ಎಂಟಿ ವಾಚ್ ಉಡುಗೊರೆ ಕೊಡುವ ಮೂಲಕ ಕುಮಾರಸ್ವಾಮಿ ಗಮನ ಸೆಳೆದಿದ್ದರು. ಇಷ್ಟೇ ಅಲ್ಲದೆ, ಉಡುಗೊರೆ ನೀಡಲು ಹೆಚ್​ಎಮ್​ಟಿ ವಾಚನ್ನೇ ಆಯ್ಕೆ ಮಾಡಿ ಎಂದು ಜೆಡಿಎಸ್ ಸೇರಿದಂತೆ ಕರ್ನಾಟಕದ ಶಾಸಕರು, ಸಂಸದರಿಗೆ ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಕರೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:29 am, Wed, 11 September 24