ಮೈಸೂರು: ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಮಾತೊಂದಿದೆ. ಆದ್ರೆ, ಇತ್ತೀಚೆಗೆ ಆ ಗಾದೆ ಮಾತು ಪದೇ ಪದೇ ಸುಳ್ಳಾಗ್ತಿದೆ. ಯಾಕಂದ್ರೆ 11 ವರ್ಷ ಸಂಸಾರ ಮಾಡಿದ ಪತಿಯೊಬ್ಬ ಹೆಂಡತಿಯನ್ನೇ ಕೊಚ್ಚಿ ಹಾಕಿರೋ ಆರೋಪ ಕೇಳಿ ಬಂದಿದ್ರೆ, ಇನ್ನೊಂದು ಕಡೆ ಪ್ರೀತಿಸಿ ಮದುವೆಯಾದವನೇ ತನ್ನಾಕೆಯನ್ನ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಚಿತ್ರದುರ್ಗ ನಗರದ ಹೊರಪೇಟೆ ಬಡಾವಣೆ ನಿವಾಸಿ ಸೈಯದ್ ಮುಬಾರಕ್ ಉನ್ನಿಸಾ, ಕಳೆದ 11 ವರ್ಷದ ಹಿಂದೆ ಇಸ್ಮಾಯಿಲ್ ಜಬೀವುಲ್ಲಾ ಎಂಬುವವನನ್ನು ಮದುವೆ ಆಗಿದ್ದಳು. ಆಟೋ ಚಾಲಕನಾಗಿದ್ದ ಜಬೀವುಲ್ಲಾ, ಟೈಲ್ಸ್ ಕೆಲಸವನ್ನೂ ಮಾಡ್ತಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಗಂಡು, ಒಬ್ಬ ಹೆಣ್ಣುಮಗಳಿದ್ದಾರೆ. ಆದ್ರೆ, ದಿನಕಳೆದಂತೆ ಪತಿ ವರದಕ್ಷಿಣೆ ಕಿರುಕುಳ ನೀಡತೊಡಗಿದ್ದಾನೆ. ಉನ್ನಿಸ್ಸಾ ಕುಟುಂಬಸ್ಥರು ಆಗಾಗ ಕೈಲಾದಷ್ಟು ಹಣ ಸಹಾಯ ಮಾಡಿದ್ದಾರೆ. ಆದ್ರೂ, ಪತ್ನಿಗೆ ಹಿಂಸೆ ಕಡಿಮೆಯಾಗಿಲ್ಲ. ಪತಿ ಕಾಟಕ್ಕೆ ಬೇಸತ್ತು ಸುಮಾರು 4 ವರ್ಷ ಉನ್ನಿಸ್ಸಾ ತವರು ಮನೆಯಲ್ಲೇ ಇದ್ದಳು. ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ಸಹ ದಾಖಲಿಸಿದ್ದಳು. ಆದ್ರೆ, ಎರಡು ತಿಂಗಳ ಹಿಂದೆ ದರ್ಗಾವೊಂದರಲ್ಲಿ ಸಮಾಜದ ಮುಖಂಡರು ರಾಜಿ ಮಾಡಿಸಿದ್ದಾರೆ. ಆದ್ರೆ, ಮತ್ತೆ ಜಗಳ ಮಾಡಿ ಕೊಲೆ ಮಾಡಿದ್ದಾನೆಂಬುದು ಉನ್ನಿಸ್ಸಾ ಕುಟುಂಬಸ್ಥರ ವಾದ. ಇನ್ನು ಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ಕೋಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಜಬೀವುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಇನ್ನು ಇತ್ತ ಮೈಸೂರಿನಲ್ಲೂ ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯನ್ನ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ ಅಂದ್ಹಾಗೆ ಕಿರಣ್ ಎಂಬುವವನನ್ನ ಸಂಧ್ಯಾ(23) ನಾಲ್ಕು ವರ್ಷಗಳ ಹಿಂದೆ ಇವರು ಪ್ರೀತಿಸಿ ಮದುವೆಯಾಗಿದ್ಳು. ಮೈಸೂರಿನ ಕ್ಯಾತಮಾರನಹಳ್ಳಿಯ ಅಂಬೇಡ್ಕರ್ ಕಾಲೋನಿ ನಿವಾಸಿಗಳು. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು ದಿನಗಳೆದಂತೆ ಕಿರಣ್ ವಿಪರೀತ ಮದ್ಯ ವ್ಯಸನಿಯಾದ. ಕಿರಣ್ ದುಡಿಯಲೂ ಹೋಗದೆ ಹೆಂಡತಿಯನ್ನ ಹಣಕ್ಕೆ ಪೀಡಿಸುತ್ತಿದ್ನಂತೆ. ಎಣ್ಣೆ ಚಟ ಬಿಡಿಸಲು ಕಿರಣ್ನನ್ನು ಮದ್ಯ ವ್ಯಸನದ ಶಿಬಿರ ಸೇರಿಸಲಾಗಿತ್ತು. ಇತ್ತೀಚೆಗೆ ಸಂಬಂಧಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆ ಮನೆಗೆ ಬಂದಿದ್ದ ಕಿರಣ್ ಪತ್ನಿ ಜೊತೆ ಜಗಳ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ಸಂಧ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸದ್ಯ ಮೈಸೂರಿನ ಉದಯಗಿರಿ ಪೊಲೀಸರು ಆರೋಪಿ ಕಿರಣ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಾರೆ ಸುಖವಾಗಿ ಬಾಳಿ ಬದುಕಬೇಕಿದ್ದವರು ಯಾರದ್ದೋ ತಪ್ಪಿಗಾಗಿ ಪ್ರಾಣ ಕಳೆದುಕೊಂಡಿದ್ದು ಮಾತ್ರ ದುರಂತ.
ವರದಿ: ಚಿತ್ರದುರ್ಗದಿಂದ ಬಸವರಾಜ್ ಜೊತೆ ರಾಮ್ TV9 ಮೈಸೂರು
ಇದನ್ನೂ ಓದಿ: Taliban: ತಾಲಿಬಾನ್ಅನ್ನು ಒಪ್ಪಿಕೊಂಡು-ಅಪ್ಪಿಕೊಳ್ಳುವುದಷ್ಟೇ ಈಗ ಪ್ರಪಂಚಕ್ಕೆ ಉಳಿದಿರುವ ಮಾರ್ಗ ಎಂದ ಜನಾಬ್ ಇಮ್ರಾನ್ ಖಾನ್!