ಬೆಂಗಳೂರು: ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ವಿವಿಯಲ್ಲಿ ಪಿಎಚ್ಡಿ ಸಂಶೋಧಕರಾಗಿದ್ದ ರೋಹಿತ್ ವೇಮುಲ 2016ರ ಜನವರಿಗೆ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವಿಗೆ ಕಾರಣ ಕಂಡು ಹಿಡಿಯುವ ಸಂಬಂಧ ತನಿಖೆಗಳೂ ನಡೆದಿದ್ದವು. ಇಂದು ಈ ರೋಹಿತ್ ವೇಮುಲ ಸಾವಿನ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತೆ ಮಾತನಾಡಿದ್ದಾರೆ. ರೋಹಿತ್ ವೇಮುಲ ಸತ್ತಿದ್ದು ಪ್ರೀತಿಯಲ್ಲಿ ವಿಫಲವಾಗಿದ್ದಕ್ಕೆ ಎಂದು ಹೇಳಿದ್ದಾರೆ.
ಇಂದು ರಾಜ್ಯ ರೈತಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಟಿ ರವಿ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪ್ರತಿಪಕ್ಷಗಳು ಹೇಗೆ ಹೊಟ್ಟೆಕಿಚ್ಚು ಪಡುತ್ತಿವೆ ಎಂಬ ಬಗ್ಗೆ ವಿವರಿಸಿದರು. ಅದಕ್ಕೆ ಉದಾಹರಣೆಯಾಗಿ ಈ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನೂ ಉಲ್ಲೇಖಿಸಿದ್ದಾರೆ. ಹೈದರಾಬಾದ್ನಲ್ಲಿ ರೋಹಿತ್ ವೇಮುಲಾ ಪ್ರೀತಿ ವಿಚಾರದಲ್ಲಿ ನಿರಾಸೆಯುಂಟಾಗಿ ಆತ್ಮಹತ್ಯೆ ಮಾಡಿಕೊಂಡರು. ಆ ಸಾವಿನ ಕೇಸ್ನ್ನೂ ನರೇಂದ್ರ ಮೋದಿ ತಲೆಗೆ ಕಟ್ಟಲು ಪ್ರಯತ್ನ ಪಟ್ಟರು. ಅಂದರೆ ಪ್ರಧಾನಿ ಮೋದಿ ವಿರುದ್ಧ ಅದೆಷ್ಟರ ಮಟ್ಟಿಗೆ, ದ್ವೇಷ ಹೊಟ್ಟೆಕಿಚ್ಚು ಇದೆ ಎಂಬುದನ್ನು ಯೋಚನೆ ಮಾಡಿ. ಆದರೆ ನಂತರ ಅದು ಫೇಲ್ ಆಯ್ತು ಎಂದು ಹೇಳಿದರು.
ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ದಿನದಿನಕ್ಕೂ ಒಂದೊಂದು ಟ್ವಿಸ್ಟ್ ಸಿಗುತ್ತಿತ್ತು. ಆತನನ್ನು ಹಾಸ್ಟೆಲ್ನಿಂದ ಹೊರಹಾಕಿದ್ದಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವೇಮುಲಾ ಸ್ನೇಹಿತರು ಹೇಳಿದ್ದರು. ಆದರೆ ಸಾವಿನ ಬಗ್ಗೆ ತನಿಖೆ ನಡೆಸಲು ಮಾನವಸಂಪನ್ಮೂಲ ಇಲಾಖೆ ನೇಮಿಸಿದ್ದ ತನಿಖಾ ಆಯೋಗ ಈ ಆರೋಪವನ್ನು ತಳ್ಳಿಹಾಕಿತ್ತು. ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳಲು ಆತನ ವೈಯಕ್ತಿಕ ಸಮಸ್ಯೆಗಳೇ ಕಾರಣ ಎಂದಿತ್ತು. ಆದರೆ ರೋಹಿತ್ ವೇಮುಲಾ ಒಬ್ಬ ದಲಿತ ಎಂಬ ಕಾರಣಕ್ಕೆ ಆತನನ್ನು ಹೀಗೆ ನಡೆಸಿಕೊಳ್ಳಲಾಗಿದೆ. ಈ ದೇಶದಲ್ಲಿ ದಲಿತರಿಗೆ ರಕ್ಷಣೆ, ಹಕ್ಕುಗಳಿಗೆ ಬೆಲೆಯಿಲ್ಲ. ಕೇಂದ್ರ ಸರ್ಕಾರ ದಲಿತ ವಿರೋಧಿ ಎಂಬಿತ್ಯಾದಿ ಆರೋಪಗಳು ಕೇಳಿಬಂದಿದ್ದವು. ವಿಚಾರವನ್ನಿಟ್ಟುಕೊಂಡು ಆಗಷ್ಟೇ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಮೋದಿ ಸರ್ಕಾರವನ್ನು ದೂಷಿಸುವ ಕೆಲಸಗಳೂ ನಡೆದಿದ್ದವು.
Published On - 1:42 pm, Mon, 21 June 21