ಬೆಂಗಳೂರು: ಸಿಎಂ ನನ್ನನ್ನು ಬಿಟ್ಟು ಸಂಪುಟ ರಚಿಸಲ್ಲವೆಂಬ ನಂಬಿಕೆ ಇದೆ ಎಂದು ದೆಹಲಿಯಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ಸದ್ಯ ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಹೊಸ ಸಂಪುಟದಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ ಎಂಬ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಗೂ ಮತ್ತೊಂದೆಡೆ ಹಲವರಿಗೆ ಸಚಿವ ಸ್ಥಾನ ಕೈತಪ್ಪುವ ಆತಂಕ ಎದುರಾಗಿದೆ. ಇದರ ನಡುವೆ ದೆಹಲಿಯಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ತಮಗೆ ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ನಲ್ಲಿ ಸ್ಥಾನ ಸಿಗುವ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಹಿಂದೆ 4 ಬಾರಿ ಮಂತ್ರಿಯಾಗಿದ್ದೇನೆ. ಮುಂದೆಯೂ ಸಚಿವ ಆಗುತ್ತೇನೆ ಎಂಬ ನಂಬಿಕೆ ಇದೆ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜಗದೀಶ್ ಶೆಟ್ಟರ್ ಹೇಳಿಕೆ ಅವರ ವೈಯಕ್ತಿಕ. ನಾನೂ ಪಕ್ಷದಲ್ಲಿದ್ದೇನೆ, ಹೈಕಮಾಂಡ್ ಭೇಟಿಯಾಗುವೆ ಎಂದು ಹೇಳಿದ್ದಾರೆ.
ದೆಹಲಿಗೆ ಮಾಜಿ ಸಚಿವ ಉಮೇಶ್ ಕತ್ತಿ ಆಗಮಿಸಿದ್ದು ಖಾಸಗಿ ಕಾರ್ಯಕ್ರಮಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗುವ ನಂಬಿಕೆ ಇದೆ. ನಾನು ಸಚಿವನಾಗದಿದ್ದರೂ ಶಾಸಕನಾಗಿ ಕೆಲಸ ಮಾಡ್ತೇನೆ. ಹೈಕಮಾಂಡ್ ಭೇಟಿಗೆ ನಾನು ಸಮಯವನ್ನು ಕೇಳಿದ್ದೇನೆ. ಅಮಿತ್ ಶಾ, ನಡ್ಡಾ, ಸಂತೋಷ್ ಭೇಟಿಗೆ ಸಮಯ ಕೇಳಿರುವೆ. ಸಮಯ ನೀಡಿದರೆ ವರಿಷ್ಠರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.