ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ನಲ್ಲಿ ಯಾರಿಗೆ ಸಿಗುತ್ತೆ ಚಾನ್ಸ್, ಯಡಿಯೂರಪ್ಪ ಸಂಪುಟದಲ್ಲಿದ್ದ ಹಲವರಿಗೆ ಕೈ ತಪ್ಪಲಿದೆ ಸಚಿವ ಸ್ಥಾನ
ರಾಜ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಡಿದಾಟ ಅಂತ್ಯವಾಗುತ್ತಿದ್ದಂತೆ ಸಚಿವ ಸ್ಥಾನ ಪಡೆಯೋಕೆ ಹೋರಾಟ ಶುರುವಾಗಿದೆ. ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿ ಬಂದ ಬಳಿಕ ಸಚಿವ ಸಂಪುಟ ಫೈನಲ್ ಆಗಲಿದೆ. ಇದಕ್ಕೂ ಮೊದಲೇ ಸಚಿವ ಸಂಪುಟ ಸೇರಲು ಸರ್ಕಸ್ ನಡೀತಿದೆ. ಹೀಗಾಗಿ ಬೊಮ್ಮಾಯಿ ಸಂಪುಟ ಸೇರೋದು ಯಾರು ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.
ಬೆಂಗಳೂರು: ಬಿಜೆಪಿಯಲ್ಲಿ ಸಿಎಂ ಬದಲಾವಣೆ ಆಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ(Basavaraj Bommai) ಪ್ರಮಾಣ ಸ್ವೀಕರಿಸಿದ್ದೂ ಆಗಿದೆ. ಈಗ ಅವರ ಸಂಪುಟ ಸಹೋದ್ಯೋಗಿಗಳಾಗೋರು ಯಾರು ಅನ್ನೋ ಚರ್ಚೆ ಮುನ್ನೆಲೆಗೆ ಬಂದಿದೆ. ಇವತ್ತು ಉತ್ತರ ಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳುತ್ತಿರೋ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ಹೋಗಲಿದ್ದಾರೆ. ದೆಹಲಿಗೆ ಹೋಗಿ ಅಲ್ಲಿ ಬಿಜೆಪಿ ವರಿಷ್ಠರನ್ನ ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಚರ್ಚಿಸಲಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡ ಆದಷ್ಟು ಬೇಗ ಸಚಿವ ಸಂಪುಟ ಫೈನಲ್ ಮಾಡಿ ಕೈ ತೊಳೆದುಕೊಳ್ಳಲು ಸಿದ್ಧವಾಗಿದೆ. ಇದರ ನಡುವೆ ಸಚಿವ ಸ್ಥಾನ ಪಡೆಯಲು ಹಲವರು ಪ್ರಯತ್ನ ಮುಂದುವರಿಸಿದ್ದಾರೆ. ಜೊತೆಗೆ ಯಡಿಯೂರಪ್ಪ ಸಂಪುಟದಲ್ಲಿದ್ದ ಹಲವರು ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸ್ತಿದ್ದಾರೆ.
ಬಸವರಾಜ ಬೊಮ್ಮಾಯಿ ಸಂಪುಟ( Basavaraj Bommai Cabinet) ಸೇರೋಕೆ ಪ್ರಯತ್ನಿಸ್ತಿರೋದು ಒಂದೆಡೆಯಾದ್ರೆ. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಕಂಪ್ಲೀಟ್ ಹೊಸ ಲುಕ್ ಕೊಡೋಕೆ ಮುಂದಾಗಿದೆ. ಹೀಗಾಗಿ ಬಹುತೇಕ ಹೊಸಬರಿಗೆ ಯುವ ಮುಖಗಳಿಗೆ ಮಣೆ ಹಾಕಲು ಚಿಂತನೆ ನಡೆಸಿದೆ. ಹೀಗಾಗಿ ಯಡಿಯೂರಪ್ಪ ಸಂಪುಟದಲ್ಲಿದ್ದ ಹಲವರಿಗೆ ಡ್ರಾಪ್ ಔಟ್ ಭಯ ಎದುರಾಗಿದೆ. ಅದ್ರಲ್ಲೂ ಹಿರಿಯರಿಗೆ ಸಚಿವ ಸ್ಥಾನ ಸಿಗಲ್ಲ ಅಂತಾ ಹೇಳಲಾಗ್ತಿದ್ದು ಯಾಱರು ಸಚಿವ ಸ್ಥಾನ ಕಳೆದುಕೊಳ್ಳಬಹುದು ಅನ್ನೋದನ್ನ ಇಲ್ಲಿ ಓದಿ.
ಯಾರಿಗೆ ಕಾಡ್ತಿದೆ ಭಯ? ಯಡಿಯೂರಪ್ಪ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಹಿರಿಯ ಸಚಿವ ಸುರೇಶ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್, ಸಿ.ಸಿ.ಪಾಟೀಲ್, ವಲಸೆ ಬಂದು ಸಚಿವರಾಗಿದ್ದ ಆನಂದ್ ಸಿಂಗ್, ಶ್ರೀಮಂತ ಪಾಟೀಲ್, ಕೆ.ಗೋಪಾಲಯ್ಯ, ಆರ್.ಶಂಕರ್, ಶಿವರಾಮ್ ಹೆಬ್ಬಾರ್, ಬಿಎಸ್ವೈ ಸಂಪುಟದ ಏಕೈಕ ಮಹಿಳಾ ಸಚಿವರಾಗಿದ್ದ ಶಶಿಕಲಾ ಜೊಲ್ಲೆಯನ್ನ ಕೈ ಬಿಡ್ತಾರೆ ಅಂತಾ ಹೇಳಲಾಗ್ತಿದೆ.
ಹೀಗೆ ಹಿರಿಯ ಸಚಿವರು.. ವಲಸೆ ಬಂದು ಸಚಿವರಾಗಿದ್ದೋರನ್ನ ಕೈ ಬಿಡೋ ಲಕ್ಷಣಗಳು ಕಂಡು ಬರ್ತಿದ್ರೆ. ಹೊಸ ಸಂಪುಟದಲ್ಲಿ ಪಕ್ಷ ನಿಷ್ಠರು ಮತ್ತು ಯುವ ಮುಖಗಳಿಗೆ ಮಣೆ ಹಾಕಲು ವರಿಷ್ಠರು ನಿರ್ಧರಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾಗೋ ಸಂಭಾವ್ಯರು ಯಾರು ಅನ್ನೋದನ್ನ ನೋಡೋದಾದ್ರೆ,
ಯಾರಿಗೆ ಖುಲಾಯಿಸುತ್ತೆ ಲಕ್? ಯಡಿಯೂರಪ್ಪ ಸಂಪುಟದಲ್ಲಿ ಆಗಿದ್ದ ಪ್ರಾದೇಶಿಕ ತಾರತಮ್ಯ ನಿವಾರಿಸೋ ನಿಟ್ಟಿನಲ್ಲಿ ಎಸ್.ಎ.ರಾಮದಾಸ್, ರಾಜೂ ಗೌಡ, ದತ್ತಾತ್ರೇಯ ಪಾಟೀಲ್ ರೇವೂರ್, ದಾವಣಗೆರೆಗೆ ಮಂತ್ರಿ ಸ್ಥಾನ ನೀಡಲು ರೇಣುಕಾಚಾರ್ಯ ಅಥವಾ ಮಾಡಾಳ್ ವಿರೂಪಾಕ್ಷಪ್ಪ, ಮಹಿಳಾ ಕೋಟಾದಲ್ಲಿ ರೂಪಾಲಿ ನಾಯಕ್ ಅಥವಾ ಪೂರ್ಣಿಮಾ ಶ್ರೀನಿವಾಸ್, ಕೊಡಗು ಜಿಲ್ಲೆಗೆ ಆಗಿದ್ದ ಅನ್ಯಾಯ ಸರಿಪಡಿಸಲು ಅಪ್ಪಚ್ಚು ರಂಜನ್ ಅಥವಾ ಕೆ.ಜಿ.ಬೋಪಯ್ಯಗೆ ಸಚಿವ ಸ್ಥಾನ ಸಿಗಬಹುದು. ಇವರ ಜೊತೆಗೆ ಸುನಿಲ್ ಕುಮಾರ್, ಮುನಿರತ್ನ, ಜಿ.ಹೆಚ್.ತಿಪ್ಪಾರೆಡ್ಡಿಗೆ ಈ ಬಾರಿ ಮಂತ್ರಿಯಾಗೋ ಯೋಗ ಒದಗಲಿದೆ ಅಂತಾ ಬಿಜೆಪಿ ಪಡಸಾಲೆಯಲ್ಲಿ ಜೋರು ಚರ್ಚೆ ಆಗ್ತಿದೆ.
ಸಚಿವ ಸ್ಥಾನ ಹಂಚಿಕೆಯ ಜೊತೆ ಜೊತೆಗೆ ಯಾರನ್ನ ಡಿಸಿಎಂ ಮಾಡಬೇಕು ಅಂತಲೂ ಹೈಕಮಾಂಡ್ ಲೆಕ್ಕಾಚಾರ ಹಾಕ್ತಿದೆ. ಸದ್ಯಕ್ಕಿರೋ ಮಾಹಿತಿ ಪ್ರಕಾರ ನಾಲ್ಕು ಡಿಸಿಎಂಗಳನ್ನ ನೇಮಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ. ಜಾತಿ ಲೆಕ್ಕಾಚಾರ ಮಾಡಿಕೊಂಡೇ ಹೈಕಮಾಂಡ್ ಡಿಸಿಎಂಗಳನ್ನ ನೇಮಿಸಲು ಮುಂದಾಗಿದೆ. ಹೇಗಿರುತ್ತೆ ಈ ಡಿಸಿಎಂಗಳ ಆಯ್ಕೆ ಅನ್ನೋದನ್ನ ನೋಡೋದಾದ್ರೆ,
ರಾಜ್ಯಕ್ಕೆ ನಾಲ್ವರು ಡಿಸಿಎಂ? ಜಾತಿವಾರು ಲೆಕ್ಕಾಚಾರದಲ್ಲಿ ನಾಲ್ವರು ಡಿಸಿಎಂಗಳನ್ನ ನೇಮಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ಇದರಲ್ಲಿ ಪ್ರಮುಖ ಸಮುದಾಯಗಳ ಮತಗಳನ್ನ ಸೆಳೆಯಲು ಆದ್ಯತೆ ನೀಡಿದೆ. ಇದರ ಪ್ರಕಾರ ಮೊದಲನೇ ಸೂತ್ರ ಹೇಗಿದೆ ಅಂದ್ರೆ, ತಲಾ ಒಬ್ಬ ಎಸ್ಸಿ, ಎಸ್ಟಿ, ಒಕ್ಕಲಿಗ, ಹಿಂದುಳಿದ ವರ್ಗದ ಡಿಸಿಎಂಗಳನ್ನ ಮಾಡಲು ಚಿಂತನೆ ನಡೆಸಿದೆ. ಎರಡನೇ ಸೂತ್ರದಡಿ ತಲಾ ಒಬ್ಬ ಒಕ್ಕಲಿಗ, ಎಸ್ಟಿ, ಹಿಂದುಳಿದ ವರ್ಗದ ಕೋಟಾದಲ್ಲಿ ಕುರುಬ ಸಮುದಾಯ, ಪಂಚಮಸಾಲಿ ಲಿಂಗಾಯತ ಕೋಟಾದಲ್ಲಿ ಡಿಸಿಎಂಗಳನ್ನ ಮಾಡಲು ಯೋಜಿಸಿದೆ. ಮೂರನೇ ಸೂತ್ರದಡಿ ತಲಾ ಒಬ್ಬ ಒಕ್ಕಲಿಗ, ಎಸ್ಟಿ, ಎಸ್ಸಿ ಕೋಟಾದಲ್ಲಿ ಭೋವಿ ಸಮುದಾಯ ಮತ್ತು ಹಿಂದುಳಿದ ವರ್ಗದ ಕೋಟಾದಲ್ಲಿ ಈಡಿಗ ಸಮುದಾಯದ ಡಿಸಿಎಂಗಳನ್ನ ಮಾಡಲು ಚಿಂತನೆ ನಡೆಸಿದೆ. ಇನ್ನು ನಾಲ್ಕನೇ ಸೂತ್ರ ಏನು ಅಂದ್ರೆ ತಲಾ ಒಬ್ಬ ಒಕ್ಕಲಿಗ, ಎಸ್ಟಿ, ಎಸ್ಸಿ ಎಡಗೈ ಮತ್ತು ಹಿಂದುಳಿದ ವರ್ಗದ ಕೋಟಾದಲ್ಲಿ ನೇಕಾರ ಸಮುದಾಯಕ್ಕೆ ಆದ್ಯತೆ ನೀಡಿ ಡಿಸಿಎಂ ನೇಮಕಕ್ಕೆ ಹೈಕಮಾಂಡ್ ಚಿಂತನೆ ನಡೆಸಿದೆ ಅಂತಾ ಹೇಳಲಾಗ್ತಿದೆ.
ಮುಂದಿನ ಮೂರು ದಿನಗಳಲ್ಲಿ ಸಂಪುಟ ರಚನೆಯ ಸರ್ಕಸ್ ಮುಕ್ತಾಯವಾಗಲಿದೆ. ಹೈಕಮಾಂಡ್ ಹೇಳಿದವರು ಮಂತ್ರಿಗಳಾಗ್ತಾರೆ. ಬೇರೆಯವರು ತುಟಿಕ್ ಪಿಟಿಕ್ ಅನ್ನೋ ಹಾಗಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದರ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬೊಮ್ಮಾಯಿ ಸಂಪುಟ ಸೇರಲು ನಿರಾಕರಿಸಿದ್ದಾರೆ. ಹೀಗಾಗಿ ಹಿರಿಯರು ಸಂಪುಟ ಸೇರಲು ನಿರಾಕರಿಸಿದ್ರೆ.. ಪಕ್ಷದಲ್ಲಿರೋ ಅಸಮಾಧಾನ ಶಮನಗೊಳಿಸೋ ಜೊತೆಗೆ.. ಹಿರಿಯರನ್ನ ಸಮಾಧಾನಿಸೋದು ಕೂಡ ಬೊಮ್ಮಾಯಿಗೆ ಸವಾಲಾಗೋದಂತೂ ಸುಳ್ಳಲ್ಲ.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿಗೆ ಪತ್ರದ ಮೂಲಕ ಶುಭಕೋರಿದ ಎಸ್ಎಂ ಕೃಷ್ಣ