ಹಾಸನ: ಪ್ರೀತಿ ಕುರುಡು ಅನ್ನುತ್ತಾರೆ. ಪ್ರೀತಿಯಲ್ಲಿ ಮುಳುಗಿದವರಿಗೆ ತಮ್ಮ ಲೋಕ ಹೊರತುಪಡಿಸಿ ಮತ್ತೊಂದು ಲೋಕವಿದೆ ಎಂಬ ಪರಿಜ್ಞಾನವೂ ಇರುವುದಿಲ್ಲ. ಅಭಿಮಾನ ಮೈದುಂಬಿದಾಗ ರಾಜಕೀಯ ಕಾರ್ಯಕರ್ತರೂ ಹೆಚ್ಚೂಕಡಿಮೆ ಹೀಗೆಯೇ ಆಗಿರುತ್ತಾರೆ. ಇಂಥದ್ದೊಂದು ಅಪರೂಪದ ಪ್ರಕರಣಕ್ಕೆ ಹಾಸನ ಜಿಲ್ಲೆ ಸಾಕ್ಷಿಯಾಗಿದೆ. ಶಾಸಕರನ್ನು ನೋಡಲು ಹೋಗಿ ಹಲ್ಲುಉದುರಿಸಿಕೊಂಡ ಅಭಿಮಾನಿಯೊಬ್ಬರು, ದಯಮಾಡಿ ಹಲ್ಲುಕಟ್ಟಿಸಿಕೊಡಿ ಸ್ವಾಮಿ ಎಂದು ಅದೇ ಶಾಸಕರಿಗೆ ಮನವಿ ಪತ್ರ ಬರೆದಿದ್ದಾರೆ.
ಶ್ರವಣಬೆಳಗೊಳ ಕ್ಷೇತ್ರದ ಕೊನ್ನಘಟ್ಟದ ಗ್ರಾಮದ ಅಣ್ಣಪ್ಪ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ಹೀಗೊಂದು ಪತ್ರ ಬರೆದಿದ್ದಾರೆ. ಹಾಸನ ಜಿಲ್ಲೆಯ ಹಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿರುವ ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
‘ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೆನೆ. ನನ್ನ ಪಕ್ಷಕ್ಕಾಗಿ ನನ್ನ ಪ್ರಾಣವನ್ನೂ ಕೊಡಲು ತಯಾರಿದ್ದೇನೆ. ಕೆಲ ವರ್ಷಗಳ ಹಿಂದೆ ನಾನು ಬಸ್ಸಿನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ನೀವು ನಿಂತುಕೊಂಡಿದ್ದನ್ನು ನೋಡಿದೆ. ನಿಮ್ಮನ್ನು ಭೇಟಿಯಾಗುವ ಆತುರದಲ್ಲಿ ಬಸ್ಸಿನಿಂದ ನೆಗೆದೆ. ನಿಮಗೂ ಈ ವಿಷಯ ಗೊತ್ತಿದೆ. ನಾನು ಕೆಳಗೆ ಬಿದ್ದಾಗ ನನ್ನ ಹಲ್ಲುಗಳು ಮುರಿದವು. ಆದ್ದರಿಂದ ನನಗೆ ಹಲ್ಲು ಕಟ್ಟಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ’ ಎಂದು ಅಣ್ಣಪ್ಪ ಮನವಿ ಪತ್ರ ಬರೆದಿದ್ದಾರೆ.
ಜೆಡಿಎಸ್ ಪಕ್ಷದ ಕಟ್ಟಾ ಅಭಿಮಾನಿಯಾಗಿರುವ ಅಣ್ಣಪ್ಪ ತಮ್ಮ ಎದೆಯ ಮೇಲೆ CM ಕುಮಾರಸ್ವಾಮಿ ಎಂದು ಹಚ್ಚೆಯನ್ನೂ ಹಾಕಿಸಿಕೊಂಡಿದ್ದಾರೆ. ತಮ್ಮ ಊರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಾಸಕರು ಬಂದಿದ್ದಾಗ ಹಲ್ಲು ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಲ್ಲುಗಳು ಹಳದಿಯಾಗಿದೆ ಎಂಬ ಚಿಂತೆ ಯಾಕೆ? ಬಿಳಿಬಿಳಿ ಸ್ವಚ್ಛ ಹಲ್ಲಿಗಾಗಿ ಮನೆಯಲ್ಲೇ ಹೀಗೆ ಮಾಡಬಹುದು
ಇದನ್ನೂ ಓದಿ: ಪ್ರಿಯ ಕಿನ್ನರಿ.. ಹಲ್ಲು ಮುರಿದು ಹೋಗಿದ್ದಕ್ಕೆ ಪ್ರತಿಯಾಗಿ ಉಡುಗೊರೆ ಕೊಡು.. ಎಲ್ಲರ ಮನಗೆದ್ದ ಚೆಂದದ ಪತ್ರ!
Published On - 10:29 pm, Tue, 30 March 21