
ಬೆಂಗಳೂರು, ನವೆಂಬರ್ 09: ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಭೂಮಿಯಿಂದ ಚಂದ್ರನಲ್ಲಿಗೆ ಹೋಗಬಹುದಂತೆ. ಅದೇ ರೀತಿಯಾಗಿ 142 ಕೋಟಿ ಜನ ಮನಸ್ಸು ಮಾಡಿದರೆ ನಾಳೆ ಬೆಳಗ್ಗೆಯೇ ಹಿಂದೂ ರಾಷ್ಟ್ರ (hindu rashtra) ಆಗಬಹುದು. ಯಾರೂ ಸಹ ಎಷ್ಟು ದಿನ ಬೇಕು ಅಂತ ಹೇಳಿ ಕೊಡುವುದಿಲ್ಲ, ಮುಂದೊಂದು ದಿನ ಹಿಂದೂ ರಾಷ್ಟ್ರ ಆಗಿಯೇ ಆಗುತ್ತದೆ ಈ ಪ್ರಯತ್ನದಲ್ಲಿ ನಾವು ಇದ್ದೇವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆ ನಗರದ ಹೊಸಕೆರೆಹಳ್ಳಿಯ PES ಕಾಲೇಜು ಸಭಾಂಗಣದಲ್ಲಿ ನಡೆದ ನವ ಕ್ಷಿತೀಜ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಬಲಿಷ್ಠ ಭಾರತ ಕಟ್ಟುವುದೇ ಗುರಿ. ಅದಕ್ಕಾಗಿ ಹಿಂದೂ ಸಮಾಜವನ್ನು ತಯಾರು ಮಾಡುತ್ತಿದ್ದೇವೆ, ಹಿಂದೂ ಸಮಾಜ ಕಟ್ಟುವುದೇ ಗುರಿ ಎಂದು ಹೇಳಿದರು.
ಇದನ್ನೂ ಓದಿ: ಭಗವಾ ಧ್ವಜ ಹಿಂದೂ ಧರ್ಮದ ಪ್ರತೀಕ: RSS ತ್ರಿವರ್ಣಧ್ವಜವನ್ನೂ ಒಪ್ಪಿಕೊಂಡಿದೆ; ಮೋಹನ್ ಭಾಗವತ್
ಯಾವುದೇ ಧರ್ಮ, ಜಾತಿಯವರಿರಲಿ, ಭಾರತ ಮಾತೆಯ ಪುತ್ರರಾಗಿ, ಹಿಂದೂಗಳಾಗಿ ಕೆಲಸ ಮಾಡಬೇಕು. ಎಲ್ಲಾ ಧರ್ಮದವರಿಗೂ ಸಂಘದಲ್ಲಿ ಅವಕಾಶವಿದೆ. ಸಂಘದಿಂದ ಯಾರಿಗೂ ಯಾವುದೇ ನಿರೀಕ್ಷೆ ಇರಬಾರದು. ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘ ಏನೂ ಮಾಡುವುದಿಲ್ಲ. ಹಿಂದೂಸ್ಥಾನಿ, ಹಿಂದೂ ರಾಷ್ಟ್ರ ಸಂಘದ ಈ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದರು.
ಸ್ವಯಂ ಸೇವಕರಿಗೆ ಎಲ್ಲಾ ರಾಜಕೀಯ ಪಕ್ಷಗಳ ಬಾಗಿಲು ಬಂದ್ ಆಗಿತ್ತು, ಹಾಗಾಗಿ ಬಿಜೆಪಿಗೆ ಹೋದರು. ಬೇರೆ ಪಕ್ಷಗಳಲ್ಲಿ ಸ್ವಯಂ ಸೇವಕರು ಯಾಕಿಲ್ಲ ಎಂದು ಆ ಪಕ್ಷದವರನ್ನೇ ಕೇಳಿ. ನಾವು ರಾಷ್ಟ್ರ ನೀತಿಯನ್ನು ಬೆಂಬಲಿಸುತ್ತೇವೆ ಹೊರತು ರಾಜನೀತಿಯನ್ನಲ್ಲ. ದೇಶದ ಗಡಿ ಬಂದ್ ಮಾಡಿದ್ದಕ್ಕೆ ಮಣಿಪುರದಲ್ಲಿ ಗಲಾಟೆ ಸೃಷ್ಟಿಯಾಯಿತು. ಆದರೆ ನಮ್ಮಲ್ಲಿನ ಕೆಲವರು ಅದನ್ನ ಬೇರೆ ರೀತಿಯಲ್ಲಿ ಬಿಂಬಿಸಿದರು. ಭಾರತದ ಗಡಿ ನಿರ್ಮಾಣ ಅಸ್ವಾಭಾವಿಕವಾಗಿದೆ. ಬಾಂಗ್ಲಾದಲ್ಲಿ ಅಡುಗೆಮನೆಯಾದರೆ, ಭಾರತದಲ್ಲಿ ಬಾತ್ ರೂಮ್ ಆಗಿದೆ. ಪೆನ್ ತೆಗೆದುಕೊಂಡು ಗೆರೆ ಎಳೆದಿದ್ದೇನೆ ಎಂದು ಗಡಿ ರೇಖೆ ಬರೆದ ವ್ಯಕ್ತಿಯೇ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ ಲವ್ ಜಿಹಾದ್ಗೆ ಬಲಿಯಾಗಬೇಕಾಗುತ್ತೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ರಾಜಕಾರಣಿಗಳು ಜಾತಿ ಜಾತಿಗಳ ವಿಭಜನೆ ಮಾಡುತ್ತಾರೆ. ನಾವೆಲ್ಲಾ ಒಂದೇ ಎಂದು ನೀವ್ಯಾಕೆ ಹೇಳಲ್ಲ? ಭಾರತೀಯ ನಾಗರಿಕರೆಲ್ಲರೂ ಇದನ್ನು ವಿರೋಧಿಸಬೇಕು. ಒಂದೇ ಶತಮಾನದಲ್ಲಿ ಮೂರು ಖಂಡ ಮತಾಂತರವಾಗಿದೆ, ಆದರೆ ಭಾರತ ಹಾಗಾಗಿಲ್ಲ. ಐನೂರು ವರ್ಷ ನಮ್ಮನ್ನು ಆಳಿದರೂ, ಮತಾಂತರಿಗಳು ಇಂದಿಗೂ ಮೈನಾರಿಟಿ ಆಗಿದ್ದಾರೆ. ಒಂದು ಜಾತಿ ಒಂದು ಕೆಲಸ ಎಂಬ ಪದ್ದತಿ ಬೆಳೆದು ಬಂದಿದೆ. ಆದರೆ ಈಗ ಯಾರು ಬೇಕಾದರೂ ಯಾವುದೇ ಕೆಲಸ ಮಾಡಬಹುದು. ಸಂಘದಲ್ಲಿ ಜಾತಿ ಉಲ್ಲೇಖ ಮಾಡಲ್ಲ, ನಮ್ಮ ಜಾತಿಯನ್ನೇ ಮರೆಯುತ್ತೇವೆ. ರಾಜಕೀಯ ಕಾರಣದಿಂದ ಜಾತಿ, ಅಸ್ಪೃಶ್ಯತೆ ಇಂದಿಗೂ ಇದೆ. ಮೀಸಲಾತಿ ಮುಂದುವರೆಯಬೇಕು. ಅಸ್ಪೃಶ್ಯತೆ, ಅಸಮಾನತೆ ಎಲ್ಲಾ ಮೊದಲು ದೂರವಾಗಬೇಕು ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Sun, 9 November 25