ಬೇರೆ ಸಿಎಂಗಳ ತರ ಸಿದ್ದರಾಮಯ್ಯ ಆಸ್ತಿ ಮಾಡಲು ಮುಂದಾಗಿದ್ರೆ ಅರ್ಧ ಬೆಂಗಳೂರು ಅವರದ್ದೇ ಇರ್ತಿತ್ತು: ಶಾಸಕ ಬಾಲಕೃಷ್ಣ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2024 | 5:13 PM

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಶಾಸಕ ಹೆಚ್​ಸಿ ಬಾಲಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಬೇರೆ ಮುಖ್ಯಮಂತ್ರಿಗಳ ರೀತಿ ಬೆಂಗಳೂರಲ್ಲೇ ಸಾಕಷ್ಟು ಆಸ್ತಿ ಮಾಡಬಹುದಿತ್ತು. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಗೆ ಧನ್ಯವಾದ ಹೇಳುತ್ತೇನೆ. ಅವರಂತೆ ಎಲ್ಲಾ ರಾಜಕಾರಣಿಗಳು ಪಾಲಿಸಿದರೆ ಉತ್ತಮ ಎಂದಿದ್ದಾರೆ.

ರಾಮನಗರ, ಅಕ್ಟೋಬರ್​ 02: ಸಿಎಂ ಸಿದ್ದರಾಮಯ್ಯ (Siddaramaiah) ಬೇರೆ ಮುಖ್ಯಮಂತ್ರಿಗಳ ರೀತಿ ಆಸ್ತಿ ಮಾಡಲು ಮುಂದಾಗಿದ್ದರೆ ಅರ್ಧ ಬೆಂಗಳೂರು ಅವರದ್ದೇ ಇರ್ತಿತ್ತು ಎಂದು ಕಾಂಗ್ರೆಸ್ ಶಾಸಕ ಹೆಚ್​ಸಿ ಬಾಲಕೃಷ್ಣ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಮನಸ್ಸು ಮಾಡಿದ್ದರೆ ಬೆಂಗಳೂರಲ್ಲೇ ಸಾಕಷ್ಟು ಆಸ್ತಿ ಮಾಡಬಹುದಿತ್ತು. ಈ 14 ಸೈಟ್​​ ಇಟ್ಟುಕೊಂಡು ವಿಪಕ್ಷದವರು ಅಲ್ಲಾಡಿಸುತ್ತಾ ಕೂತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರ ಪತ್ನಿ ಪಾರ್ವತಿಗೆ ಧನ್ಯವಾದ ಹೇಳಿದ ಶಾಸಕ 

ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್ ವಾಪಸ್​ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಮುಡಾ ಹಗರಣ ಸಂಬಂಧಿಸಿದಂತೆ ಯಾರ ಯಾರ ಮೇಲೆ ಆರೋಪಗಳಿದೆಯೋ ಎಲ್ಲರೂ ಸೈಟ್​ಗಳನ್ನ ವಾಪಸ್​ ನೀಡಲಿ. ದೇಶ ಇನ್ನೂ ಸುಭಿಕ್ಷವಾಗಲಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಗೆ ಧನ್ಯವಾದ ಹೇಳುತ್ತೇನೆ. ಸಿಎಂ ಪತ್ನಿಯಂತೆ ಎಲ್ಲಾ ರಾಜಕಾರಣಿಗಳು ಪಾಲಿಸಿದರೆ ಉತ್ತಮ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಡಿ ಪ್ರಕರಣ ದಾಖಲಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್ ವಾಪಸ್ ಕೊಡಲು ಇದೆ ಬಲವಾದ ಕಾರಣ

ವಿರೋಧ ಪಕ್ಷಗಳಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ವಿಪಕ್ಷಗಳಿಗೆ ಬೇರೆ ಕೆಲಸ ಇಲ್ಲ, ಬೆಳಗ್ಗೆ ಎದ್ದರೆ ರಾಜೀನಾಮೆ ಅಂತಾರೆ. ಮುಡಾ ಸೈಟ್ ಹಿಂದಿರುಗಿಸಿದ ಮಾತ್ರಕ್ಕೆ ತಪ್ಪನ್ನು ಒಪ್ಪಿಕೊಂಡಿಲ್ಲ. ಸಾರ್ವಜನಿಕವಾಗಿ ಬಂದಿರುವ ಕಳಂಕ ನಿವಾರಣೆಗೆ ಸೈಟ್ ಹಿಂದಿರುಗಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ ಎಂಟ್ರಿ: ಮೊದಲ ಸಮನ್ಸ್​ ಜಾರಿ, ಯಾರಿಗೆ ಗೊತ್ತಾ?

ಸಿದ್ದರಾಮಯ್ಯನವರ 60 ವರ್ಷ ರಾಜಕೀಯದಲ್ಲಿ ಕಳಂಕ ಬಂದಿಲ್ಲ. ನನ್ನಿಂದ ಕಳಂಕ ಬಂದಿದೆ ಅಂತಾ ಭಾವಿಸಿಕೊಂಡು ವಾಪಸ್ ನೀಡಿದ್ದಾರೆ. ಅವರ ವ್ಯಕ್ತಿತ್ವಕ್ಕಿಂತ ಈ ಆಸ್ತಿ ದೊಡ್ಡದಲ್ಲ ಅಂತ ವಾಪಾಸ್ ಕೊಟ್ಟಿದ್ದಾರೆ. ಸೈಟ್ ಮಂಜೂರು ಮಾಡಿರೋದು ಬಿಜೆಪಿ ಸರ್ಕಾರದಲ್ಲಿ. ಕಪ್ಪು ಚುಕ್ಕೆ ಹೋಗಲಾಡಿಸಿಕೊಳ್ಳಬೇಕು ಎಂದು ಒಳ್ಳೆ ಹೆಜ್ಜೆ ಇಟ್ಟಿದ್ದಾರೆ. ಸಿಎಂ ಹಾದಿಯಲ್ಲಿ ಎಲ್ಲರೂ ಅನುಸರಿಸಿದರೆ ರಾಜಕಾರಣಿಗಳಿಗೆ ಮಾದರಿ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:10 pm, Wed, 2 October 24