ಯಾವುದೇ ಡ್ಯಾಂ ಸುತ್ತಮುತ್ತ ರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು: ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ್

| Updated By: shivaprasad.hs

Updated on: Jul 09, 2021 | 1:43 PM

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಜಿಲ್ಲೆಗೆ ಪ್ರಸ್ತಾಪಿಸಲಾಗಿರುವ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಬಂದಿದ್ದೆ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಕೆಆರ್​ಎಸ್ ಸುತ್ತಮುತ್ತ ಅಕ್ರಮ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಬೇಕು ಎಂದೂ ಪ್ರತಿಕ್ರಿಯಿಸಿದ್ದಾರೆ.

ಯಾವುದೇ ಡ್ಯಾಂ ಸುತ್ತಮುತ್ತ ರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು: ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ್
ಮಾಜಿ ಸಚಿವ ಎಂ.ಬಿ.ಪಾಟೀಲ್ (ಫೈಲ್ ಚಿತ್ರ)
Follow us on

ಬೆಂಗಳೂರು: ಯಾವುದೇ ಡ್ಯಾಂ ಸುತ್ತಮುತ್ತ ರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು ಎಂದು ರಾಜ್ಯದ ಮಾಜಿ ನೀರಾವರಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಮಾಜಿ ಸಚಿವ ಎಂ.ಬಿ. ಪಾಟೀಲ್ ಈ ಹೇಳಿಕೆ ನೀಡಿದ್ದಾರೆ. ಕೆಆರ್ಎಸ್ ಡ್ಯಾಂನಿಂದ ಸುರಕ್ಷಿತ ಅಂತರದಲ್ಲಿ ಗಣಿಗಾರಿಕೆ ನಡೆಯಬೇಕು. ಡ್ಯಾಂ ಸುತ್ತಮುತ್ತ, ನಿಗದಿತ ವ್ಯಾಪ್ತಿಯ ಒಳಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅದರಿಂದ ನಿಜವಾಗಿಯೂ ಅಣೆಕಟ್ಟಿಗೆ ತೊಂದರೆ ಆಗುತ್ತದೆ. ಅದನ್ನು ಸರ್ಕಾರ ತಡೆಗಟ್ಟುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.

ಅಂಬರೀಶ್ ಕಾಲದಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂಬ ಜೆಡಿಎಸ್ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ಅಂಬರೀಶ್ ನನ್ನ ಸ್ನೇಹಿತ, ಇಬ್ಬರ ನಡುವೆ ಒಳ್ಳೆಯ ಸ್ನೇಹ ಇತ್ತು. ಸುಮಲತಾ ಅವರ ಬಗ್ಗೆಯೂ ಅಪಾರ ಗೌರವ ಇದೆ. ಅಕ್ರಮ ಗಣಿಗಾರಿಕೆ ವಿಚಾರವಾಗಿ ನನಗೆ ಗೊತ್ತಿಲ್ಲ. ಆದರೆ ಕೆಆರ್ಎಸ್ ಸೇರಿದಂತೆ ರಾಜ್ಯದ ಹಲವು ಡ್ಯಾಂಗಳ ಆಧುನೀಕರಣಕ್ಕೆ ನಾನು‌ ಜಲಸಂಪನ್ಮೂಲ ಸಚಿವನಾಗಿದ್ದಾಗ ಅನುಮತಿ ಸಿಕ್ಕಿತ್ತು. ಉಮಾ ಭಾರತಿ ಅವರು ಕೇಂದ್ರ ಜಲಸಂಪನ್ಮೂಲ ಸಚಿವೆಯಾಗಿದ್ದರು. ಆಗ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಡ್ಯಾಂಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಯಾವುದೇ ಡ್ಯಾಂ ಸುತ್ತಮುತ್ತ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು; ನಡೆಯುತ್ತಿದ್ದರೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಯೋಜನೆ ಮಂಜೂರಾತಿಗಾಗಿ ಸಿಎಂ ಬಳಿ ಬಂದಿದ್ದೆ: ಎಂ ಬಿ ಪಾಟೀಲ್

ವಿಜಯಪುರ ಜಿಲ್ಲೆಯಲ್ಲಿ 143 ಕೋಟಿ ನೀರಾವರಿ ಯೋಜನೆ ಮುಂದುವರೆದ ಭಾಗ ಹಾಗೇ ಇತ್ತು. ಹತ್ತಾರು ಕೆರೆಗಳಿಗೆ ನೀರು ಕೊಡಲು ಪ್ರಸ್ತಾವನೆ ಆಗಿತ್ತು. ಅದನ್ನು ಆರ್ಥಿಕ ಇಲಾಖೆಯಿಂದ ಅಪ್ರೂವಲ್ ಮಾಡಿಸಿಕೊಡಲು ಕೇಳಿ ಬಂದಿದ್ದೆ. ರಾಜಕೀಯ ವಿಚಾರ ಯಾವುದೇ ಚರ್ಚೆಯಾಗುವ ಪ್ರಮೇಯ ಇಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

(If there is any illegal mining happening near KRS it should be stopped says former water resource minister MB Patil)