Thawar Chand Gehlot: ಕರ್ನಾಟಕದ 19ನೇ ರಾಜ್ಯಪಾಲರಾಗಿ ಜುಲೈ 11ರಂದು ಥಾವರಚಂದ್ ಗೆಹಲೋತ್ ಪದಗ್ರಹಣ
Karnataka Governor: ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಥಾವರಚಂದ್ ಗೆಹಲೋತ್ ಜುಲೈ 11ನೇ ತಾರೀಖು ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯಪಾಲರ ಪದಗ್ರಹಣ ಸಮಾರಂಭ ರಾಜಭವನದಲ್ಲಿ ನಡೆಯಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಒಕಾ ಸಮಾರಂಭದ ನೇತೃತ್ವ ವಹಿಸಲಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಥಾವರಚಂದ್ ಗೆಹಲೋತ್ ಜುಲೈ 11ನೇ ತಾರೀಖು ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯಪಾಲರ ಪದಗ್ರಹಣ ಸಮಾರಂಭ ರಾಜಭವನದಲ್ಲಿ ನಡೆಯಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಒಕಾ ಸಮಾರಂಭದ ನೇತೃತ್ವ ವಹಿಸಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಥಾವರಚಂದ್ ಗೆಹಲೋತ್ ಪ್ರಮಾಣ ವಚನ ಸ್ವೀಕರಿಸಲಿದ್ದು, 19ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜುಲೈ 6, ಮಂಗಳವಾರದಂದು ನೇಮಕಾತಿ ಆದೇಶ ಮಾಡಿದ್ದಾರೆ. ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ಅಧಿಕಾರ ಸ್ವೀಕರಿಸಲಿದ್ದು, ಉನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ಕರ್ನಾಟಕದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿರುವ ಥಾವರಚಂದ್ ಗೆಹಲೋತ್, 1948ನೇ ಇಸವಿಯ ಮೇ 18ರಂದು ಜನಿಸಿದರು. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಈಗ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಥಾವರಚಂದ್ ಗೆಹಲೋತ್ ಮೂಲತಃ ಮಧ್ಯಪ್ರದೇಶದ ನಾಗ್ಡಾದವರು. ರಾಜ್ಯಸಭೆಯ ಸದಸ್ಯರೂ ಆಗಿದ್ದ ಅವರು ಈ ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದರು. ಸಂಘ ಪರಿವಾರದ ಹಿನ್ನೆಲೆಯ ಥಾವರಚಂದ್ ಗೆಹಲೋತ್, ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಗೆಹಲೋತ್ ಅವರು ಕರ್ನಾಟಕದೊಂದಿಗೆ ಸಂಬಂಧ ಹೊಂದಿದ್ದರು ಎನ್ನುವುದು ಗಮನಾರ್ಹ.
ಪ್ರಸ್ತುತ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ವಜುಬಾಯಿ ವಾಲಾ ಅವರ ಅವಧಿ ಪೂರ್ಣಗೊಳ್ಳುತ್ತಿದ್ದು, ಆ ಸ್ಥಾನಕ್ಕೆ ಸಂಘಪರಿವಾರದ ಹಿನ್ನೆಲೆಯ ಥಾವರಚಂದ್ ಗೆಹಲೋತ್ ಆಗಮಿಸಲಿದ್ದಾರೆ. ಕರ್ನಾಟಕದ 18ನೇ ರಾಜ್ಯಪಾಲರಾಗಿದ್ದ ವಜುಬಾಯಿ ವಾಲಾ ಅವರ ಅವಧಿಯಲ್ಲಿ ರಾಜ್ಯದಲ್ಲಿ ನಾಲ್ವರು ಮುಖ್ಯಮಂತ್ರಿಗಳು (ಯಡಿಯೂರಪ್ಪ ಎರಡು ಬಾರಿ) ಕಾರ್ಯ ನಿರ್ವಹಿಸಿದ್ದಾರೆ. 2014ರ ಸೆಪ್ಟೆಂಬರ್ 1 ರಂದು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿದ್ದ ವಾಲಾ ಏಳು ವರ್ಷ ಕರ್ನಾಟಕ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ 19ನೇ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ನೇಮಕವಾಗಿದ್ದಾರೆ.
ಇದನ್ನೂ ಓದಿ: Thawar Chand Gehlot: ಸಂಘ ಪರಿವಾರ ಹಿನ್ನೆಲೆಯ ಥಾವರಚಂದ್ ಗೆಹಲೋತ್ ಈ ಹಿಂದೆಯೂ ಕರ್ನಾಟಕದೊಂದಿಗೆ ಸಂಪರ್ಕದಲ್ಲಿದ್ದರು
Published On - 1:46 pm, Fri, 9 July 21