ಕೇವಲ ಅರ್ಧ ಗಂಟೆಯಲ್ಲಿ ಬೆಂಗಳೂರು ಚೆನ್ನೈ ಪ್ರಯಾಣ! ಹೈಪರ್​ಲೂಪ್ ಟೆಸ್ಟ್ ಟ್ರಾಕ್ ಅಭಿವೃದ್ಧಿಪಡಿಸಿದ ಐಐಟಿ ಮದ್ರಾಸ್

|

Updated on: Feb 26, 2025 | 12:20 PM

ಐಐಟಿ ಮದ್ರಾಸ್‌ನ ತಜ್ಞರು ಅಭಿವೃದ್ಧಿಪಡಿಸಿರುವ ಹೈಪರ್‌ಲೂಪ್ ಟೆಸ್ಟ್​ ಟ್ರಾಕ್​ನಿಂದ ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವಿನ ಪ್ರಯಾಣ ಕೇವಲ 30 ನಿಮಿಷಗಳಿಗೆ ಇಳಿಕೆಯಾಗುವ ನಿರೀಕ್ಷೆ ಇದೆ. ರೈಲ್ವೆ ಸಚಿವಾಲಯದ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, 422 ಮೀಟರ್‌ಗಳ ಪರೀಕ್ಷಾ ಹಳಿಯನ್ನು ನಿರ್ಮಿಸಲಾಗಿದೆ. ಇದರ ವಿಶೇಷವೇನು? ರೈಲ್ವೆ ಸಚಿವರು ನೀಡಿದ ಮಾಹಿತಿ ಏನು ಎಂಬ ವಿವರ ಇಲ್ಲಿದೆ.

ಕೇವಲ ಅರ್ಧ ಗಂಟೆಯಲ್ಲಿ ಬೆಂಗಳೂರು ಚೆನ್ನೈ ಪ್ರಯಾಣ! ಹೈಪರ್​ಲೂಪ್ ಟೆಸ್ಟ್ ಟ್ರಾಕ್ ಅಭಿವೃದ್ಧಿಪಡಿಸಿದ ಐಐಟಿ ಮದ್ರಾಸ್
ಹೈಪರ್​ಲೂಪ್ ಟೆಸ್ಟ್ ಟ್ರಾಕ್
Image Credit source: Twitter
Follow us on

ಬೆಂಗಳೂರು, ಫೆಬ್ರವರಿ 26: ಬೆಂಗಳೂರಿನಿಂದ ಚೆನ್ನೈಗೆ ಸುಮಾರು 325 ಕಿಲೋಮೀಟರ್ ದೂರದ​​ ಪ್ರಯಾಣವನ್ನು ಕೇವಲ ಅರ್ಧ ಗಂಟೆಯಲ್ಲಿ ಮಾಡುವಂತಿದ್ದರೆ ಹೇಗಿರಬಹುದು? ಇದು ಕೇವಲ ಕನಸಿನಲ್ಲಿ ಮಾತ್ರ ಸಾಧ್ಯ ಅಂತೀರಾ? ಖಂಡಿತಾ ಇಲ್ಲ. ಉಭಯ ನಗರಗಳ ಮಧ್ಯೆ ಕೇವಲ ಅರ್ಧ ಗಂಟೆಯಲ್ಲಿ ಪ್ರಯಾಣಿಸುವ ದಿನ ಸದ್ಯದಲ್ಲೇ ಬಂದರೂ ಬರಬಹುದು. ಐಐಟಿ ಮದ್ರಾಸ್ ತಂತ್ರಜ್ಞರು ಹೈಪರ್​ಲೂಪ್ ಟೆಸ್ಟ್ ಟ್ರಾಕ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಎಲ್ಲವೂ ಅಂದುಕೊಂಡಂತೆಯೇ ಆದರೆ ಚೆನ್ನೈ – ಬೆಂಗಳೂರು ಮಧ್ಯೆ ಅರ್ಧ ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ.

ರೈಲ್ವೆ ಸಚಿವಾಲಯದ ಸಹಯೋಗದೊಂದಿಗೆ ಐಐಟಿ ಮದ್ರಾಸ್, ಭಾರತದ ಮೊದಲ ಹೈಪರ್‌ಲೂಪ್ ಪರೀಕ್ಷಾ ಹಳಿಯನ್ನು ಅಭಿವೃದ್ಧಿಪಡಿಸಿದೆ.

ಹೈಪರ್‌ಲೂಪ್ ವ್ಯವಸ್ಥೆಯು ಪ್ರಯಾಣಿಕರನ್ನು ಕಡಿಮೆ ಒತ್ತಡದ ವ್ಯವಸ್ಥೆಯ (ಪಾಡ್ ಅಥವಾ ಟ್ಯೂಬ್ ಮಾದರಿಯ ಸಾಧನ) ಮೂಲಕ ಗಂಟೆಗೆ 1,000 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಾಗಿಸುವ ಗುರಿಯನ್ನು ಹೊಂದಿದೆ. ಈ ತಂತ್ರಜ್ಞಾನದ ಸಹಾಯದಿಂದ ಕೇವಲ 30 ನಿಮಿಷಗಳಲ್ಲಿ 350 ಕಿ.ಮೀ ಪ್ರಯಾಣ ಸಾಧ್ಯವಿದೆ.

ಈ ವಿಚಾರವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್ ಸಂದೇಶದಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘‘ಸರ್ಕಾರ-ಶೈಕ್ಷಣಿಕ ಸಹಯೋಗವು ಭವಿಷ್ಯದ ಸಾರಿಗೆಯಲ್ಲಿ ನಾವೀನ್ಯತೆಗೆ ಚಾಲನೆ ನೀಡುತ್ತಿದೆ’’ ಎಂದು ಉಲ್ಲೇಖಿಸಿದ್ದಾರೆ.

ಅಶ್ವಿನಿ ವೈಷ್ಣವ್ ಎಕ್ಸ್ ಸಂದೇಶ


ಈ ಯೋಜನೆಯನ್ನು ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ರೈಲ್ವೆ ಸಚಿವಾಲಯದ ಫಂಡ್​ನೊಂದಿಗೆ ಹಮ್ಮಿಕೊಳ್ಳಲಾಗಿದೆ. 422 ಮೀಟರ್‌ಗಳ ಮೊದಲ ಪಾಡ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇನ್ನಷ್ಟು ಸಮಯ ಬೇಕಾಗಲಿದೆ. ಮೊದಲ ಎರಡು ಹಂತದ ಫಂಡ್ (ತಲಾ ಒಂದು ದಶಲಕ್ಷ ಡಾಲರ್) ಈಗಾಲೇ ಬಿಡುಗಡೆ ಮಾಡಲಾಗಿತ್ತು. ಇದೀಗ ಹೈಪರ್‌ಲೂಪ್ ಯೋಜನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಕ್ಕಾಗಿ ಒಂದು ಮಿಲಿಯನ್ ಡಾಲರ್‌ಗಳ ಅನುದಾನದ ಮೂರನೇ ಕಂತನ್ನು ಐಐಟಿ ಮದ್ರಾಸ್‌ಗೆ ನೀಡುವ ಸಮಯ ಬಂದಿದೆ ಎಂದು ವೈಷ್ಣವ್ ಹೇಳಿದ್ದಾರೆ.

ತಂತ್ರಜ್ಞಾನವನ್ನು ಸಂಪೂರ್ಣವಾಗಿ ಪರೀಕ್ಷಿಸಿ ಸಿದ್ಧವಾದ ನಂತರ ಭಾರತೀಯ ರೈಲ್ವೆ ಮೊದಲ ವಾಣಿಜ್ಯ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದಕ್ಷಿಣ ಭಾರತದ ಅತಿ ದೊಡ್ಡ ಬೆಂಗಳೂರು -ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂಚಾರ ಮುಕ್ತ

ಹೈಪರ್‌ಲೂಪ್ ದೀರ್ಘ ದೂರಗಳಿಗೆ ವಿನ್ಯಾಸಗೊಳಿಸಲಾದ ಹೈ-ಸ್ಪೀಡ್ ಪ್ರಯಾಣ ವ್ಯವಸ್ಥೆಯಾಗಿದೆ. ಇದರಲ್ಲಿ ನಿರ್ವಾತ ಕೊಳವೆಗಳ ಮೂಲಕ ಚಲಿಸುವ ವಿಶೇಷ ಪಾಡ್​ಗಳನ್ನು ಬಳಸಲಾಗುತ್ತದೆ. ಇದು ರೈಲುಗಳು ಅಸಾಧಾರಣ ವೇಗದಲ್ಲಿ ಸಂಚರಿಸಲು ಅನುವು ಮಾಡಿಕೊಡುತ್ತದೆ.

ವಿಮಾನಕ್ಕಿಂತಲೂ ಹೆಚ್ಚಿನ ವೇಗ!

ಹೈಪರ್‌ಲೂಪ್ ತಂತ್ರಜ್ಞಾನದಲ್ಲಿ ವಿಮಾನಕ್ಕಿಂತ ಎರಡು ಪಟ್ಟು ವೇಗದಲ್ಲಿ ಸಂಚರಿಸಬಹುದಾಗಿದೆ. ಕಡಿಮೆ ವಿದ್ಯುತ್ ಬಳಕೆ ಮತ್ತು 24 ಗಂಟೆಗಳ ಕಾರ್ಯಾಚರಣೆಗೆ ಶಕ್ತಿ ಸಂಗ್ರಹಣೆಯೊಂದಿಗೆ ಇದು ಕಾರ್ಯಾಚರಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ