ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಸೈಲ್ ಕಣ್ಣೀರಿಡುತ್ತ ಜಡ್ಜ್ ಮುಂದೆ ಹೇಳಿದ್ದೇನು..?
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ದೋಷಿ ಎಂದು ನ್ಯಾಯಾಲಯ ಆದೇಶ ಹೊರಸಿತ್ತು, ಇದೀಗ ಇಂದು ಶಿಕ್ಷೆ ಪ್ರಮಾಣದ ಬಗ್ಗೆ ವಿಚಾರಣೆ ನಡೆದ ವೇಳೆ ಸತೀಶ್ ಸೈಲ್, ಜಡ್ಜ್ ಮುಂದೆ ಆರೋಗ್ಯ ಸಮಸ್ಯೆ ಮುಂದಿಟ್ಟು ಕಣ್ಣೀರಿಟ್ಟರು. ಹಾಗಾದ್ರೆ, ಕೋರ್ಟ್ಗೆ ಸೈಲ್ ಮನವಿ ಮಾಡಿದ್ದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಅಕ್ಟೋಬರ್ 25): ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. 2010 ರಲ್ಲಿ ಅರಣ್ಯಪ್ರದೇಶಗಳಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಲೋಕಾಯುಕ್ತ ಹಾಗೂ ಅರಣ್ಯಾಧಿಕಾರಿಗಳು ನೂರಾರು ಕೋಟಿ ಬೆಲೆ ಬಾಳುವ ಅಕ್ರಮ ಅದಿರನ್ನು ಜಪ್ತಿ ಮಾಡಿದ್ದರು. ಹೀಗೆ ಜಪ್ತಿ ಮಾಡಿದ್ದ ಅದಿರಿನ 24 ಗುಡ್ಡೆಗಳನ್ನು ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಿಡಲಾಗಿತ್ತು. ಸೀಜ್ ಆಗಿದ್ದ ಅದಿರು 8ಲಕ್ಷ ಮೆಟ್ರಿಕ್ ಟನ್ ಅದಿರಿನ ಪೈಕಿ 6 ಲಕ್ಷ ಮೆಟ್ರಿಲ್ ಟನ್ ನಾಪತ್ತೆಯಾಗಿತ್ತು. ಈ ಪ್ರಕರಣ ಸಂಬಂದ ನಿನ್ನೆ 400 ಪುಟಗಳ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ಕೋರ್ಟ್, ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ಆದೇಶ ನೀಡಿತ್ತು. ಇಂದು(ಅಕ್ಟೋಬರ್ 25) ಶಿಕ್ಷೆ ಪ್ರಮಾಣದ ಬಗ್ಗೆ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್ ನಾಳೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ವಿಚಾರಣೆ ವೇಳೆ ಕಣ್ಣೀರು ತುಂಬಿಕೊಂಡ ಸತೀಶ್ ಸೈಲ್, ತಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನಗೂ ಆರೋಗ್ಯದ ಸಮಸ್ಯೆಯಿದೆ. ಹೀಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಇನ್ ಜೈಲ್: ಶಾಸಕ ಸ್ಥಾನ ಅನರ್ಹ ಭೀತಿ!
ಸತೀಶ್ ಸೈಲ್ ಪರ ವಕೀಲರ ವಾದವೇನು?
ಇನ್ನು ಸತೀಶ್ ಸೈಲ್ ಪರ ವಕೀಲ ವಾದ ಮಂಡಿಸಿದ ವಕೀಲ ಮೂರ್ತಿ ಡಿ ನಾಯ್ಕ್ , ಸತೀಶ್ ಸೈಲ್‌ರದ್ದು ವೈಯಕ್ತಿಕವಾಗಿ ಯಾವುದೇ ಪಾತ್ರವಿಲ್ಲ. ಅವರ ಕಂಪನಿಯ ಮೂಲಕ ಅದಿರಿನ ಸಾಗಾಟವನ್ನಷ್ಟೇ ಮಾಡಲಾಗಿದೆ. ಅದಿರು ರಫ್ತಿನಿಂದ ಬಂದ ಹಣಕ್ಕೆ ಆದಾಯ ತೆರಿಗೆ ಪಾವತಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ. ಶಾಸಕ ಸತೀಶ್ ಸೈಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳ್ಳತನ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಗರಿಷ್ಟ ಶಿಕ್ಷೆ 3 ವರ್ಷ ಶಿಕ್ಷೆಗೆ ಮಾತ್ರ ಅವಕಾಶವಿದೆ. ಹೀಗಾಗಿ 3 ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.
ಅಷ್ಟೇ ಅಲ್ಲದೇ ಸತೀಶ್ ಸೈಲ್ ಆರೋಗ್ಯಕ್ಕೆ ಸಂಬಂಧಿಸಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಇನ್ನು ಗುರುವಾರ ಸತೀಶ್ ಸೈಲ್ ಅವರನ್ನು ಕಸ್ಟಡಿಗೆ ಪಡೆಯದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಒಮ್ಮೆ ತೀರ್ಪು ನೀಡಿದ ಮೇಲೆ ಇದಕ್ಕೆ ಅವಕಾಶ ಇಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಬೇಲೆಕೇರಿ ಅದಿರು ಸಾಗಾಟ ಪ್ರಕರಣ: 6 ಕೇಸ್ನಲ್ಲೂ ಕೈ ಶಾಸಕ ಸತೀಶ್ ಸೈಲ್ ದೋಷಿ!
ಆದ್ರೆ, ಅದಿರು ಕಳ್ಳತನದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸಿಬಿಐ ಪರ ವಕೀಲರು ವಾದಿಸಿದ್ರು. ದಂಡ ಮತ್ತು ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ಎರಡು ಕಡೆ ವಾದ ಕೇಳಿದ ಕೋರ್ಟ್, ನಾಳೆಗೆ(ಅಕ್ಟೋಬರ್ 26) ಆದೇಶ ಕಾಯ್ದಿರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:00 pm, Fri, 25 October 24