ಕಲಬುರಗಿ: ಭೀಮಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಸದ್ದು ಕೇಳಿ ಬಂದಿದೆ. KRIDL ಹೆಸರಿನಲ್ಲಿ ಅಕ್ರಮ ಮರಳು ದಂಧೆ ಆರೋಪ ಕೇಳಿ ಬಂದಿದ್ದು ಸ್ಥಳಕ್ಕೆ ಯಾರೂ ತೆರಳದಂತೆ ದುಷ್ಕರ್ಮಿಗಳು ರಸ್ತೆ ಅಗೆದ ಘಟನೆ ನಡೆದಿದೆ.
ಕಲಬುರಗಿ ತಾಲೂಕಿನ ಪಿರೋಜಾಬಾದ್ ಬಳಿ ಅಕ್ರಮ ಮರಳು ದಂಧೆ ನಡೆಯುತ್ತಿರುವುದು ತಿಳಿಯುತ್ತಿದ್ದಂತೆ ನಿನ್ನೆ ಅಕ್ರಮ ಮರಳು ಅಡ್ಡಾಕ್ಕೆ ಭೇಟಿ ನೀಡಲು KRIDL ಅಧ್ಯಕ್ಷ ರುದ್ರೇಶ್ ತೆರಳಿದ್ದರು. ಈ ವೇಳೆ ಸ್ಥಳಕ್ಕೆ ವಾಹನ ತೆರಳದಂತೆ ದಂಧೆಕೋರರು ರಸ್ತೆ ಅಗೆದಿದ್ದಾರೆ. ಹೀಗಾಗಿ ರುದ್ರೇಶ್ 3 ಕಿ.ಮೀ. ನಡೆದು ಸ್ಥಳ ಪರಿಶೀಲಿಸಿದ್ದಾರೆ.
ಭೀಮಾ ನದಿಯಲ್ಲಿ KRIDL ಹೆಸರಿನಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಗೂ ಇನ್ನು ಮುಂದೆ ತಮ್ಮ ನಿಗಮಕ್ಕೆ ಮಂಜೂರಾದ ಮರಳಿನ ಟೆಂಡರ್ ರದ್ದತಿಗೆ KRIDL ಅಧ್ಯಕ್ಷ ರುದ್ರೇಶ್ ಚಿಂತನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾನದಿಯಲ್ಲಿ ಅಕ್ರಮ ಮರಳುಗಾರಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಸಿರು ನ್ಯಾಯಾಧಿಕರಣ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಬಾರದೆಂದು ತಡೆ ಹಾಕಿದ್ದರೂ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಲ್ಲಲ್ಲಿ ಪ್ರಭಾವಿಗಳು, ರಾಜಕಾರಣಿಗಳ ಬೆಂಬಲಿಗರು ನದಿಯಲ್ಲಿ ಮರಳನ್ನು ಕದಿಯುತ್ತಲೇ ಇದ್ದಾರೆ. ಇಂಥ ಘಟನೆಗಳಿಗೆ ಪೂರ್ಣ ವಿರಾಮ ಹಾಕಲು ಕಳೆದ ವರ್ಷವೇ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮುಂದಾಗಿದ್ದರು.
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಧಿಕಾರಿಗಳು ಸೇರಿದಂತೆ ಇತರೆ ಇಲಾಖೆ ಆಧಿಕಾರಿಗಳ ಸಭೆ ನಡೆಸಿ ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವ ಜೊತೆಗೆ ಅಕ್ರಮವಾಗಿ ಸಾಗಾಣಿಕೆ ಬಗ್ಗೆಯೂ ತೀವ್ರ ನಿಗಾ ಇಡುವಂತೆ ಸಭೆಯಲ್ಲಿ ಡಿಸಿ ವೈ.ಎಸ್.ಪಾಟೀಲ್ ಖಡಕ್ ಸೂಚನೆ ನೀಡಿದ್ದರು. ಆದ್ರೆ ಇನ್ನೂ ಕೂಡ ಈ ಅಕ್ರಮ ಮರಳು ದಂಧೆ ನಿಂತಿಲ್ಲ ಎಂಬ ಕೂಗು ಕೇಳಿ ಬಂದಿದೆ.
ಇದನ್ನೂ ಓದಿ: ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ.. ಸೂಚಿಸಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಶಾಸನ ಎಸ್.ರಾಮಪ್ಪ ಕಿಡಿ
ಭೀಮಾತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್, ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್