ಪಶ್ಚಿಮಘಟ್ಟದ ಸಂರಕ್ಷಣೆಯ ಉದ್ದೇಶದಿಂದ ತಯಾರಾಗಿರುವ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯ ವಿರುದ್ಧವಾಗಿ ಇತ್ತೀಚೆಗಷ್ಟೇ ಕೇರಳದ ಎನ್ ಜಿ ಒ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕದ ಮಲೆನಾಡು ಭಾಗದಲ್ಲಿಯೂ ವರದಿ ಜಾರಿಗೊಳಿಸಬಾರದೆಂದು ಪ್ರತಿಭಟನೆಗಳು ನಡೆದಿದ್ದವು. ಆದರೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರದೇ ನಿರ್ಲಕ್ಷಿಸಿದ ಪರಿಣಾಮ ಏನಾಯಿತು ಎಂಬುದರ ವಿವರ ಈಗ ಬೆಳಕಿಗೆ ಬಂದಿದೆ.
ಕಳೆದ ಎರಡು ಮೂರು ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಅನುಭವಿಸುತ್ತಿರುವ ನೋವಿಗೂ, ಕಸ್ತೂರಿ ರಂಗನ್ ವರದಿಗೂ ಸಂಬಂಧವಿದೆ ಎನ್ನಲಾಗುತ್ತಿದೆ. ಹಾಗಾದರೆ ಆ ನೋವೇನು? ಕಸ್ತೂರಿ ರಂಗನ್ ವರದಿ ಜಾರಿಯಾಗಿದ್ದರೆ ಕರ್ನಾಟಕ ಆ ನೋವಿನಿಂದ ಪಾರಾಗಲು ಸಾಧ್ಯವಾಗುತ್ತಿತ್ತಾ? ಎಂಬಿತ್ಯಾದಿ ವಿವರಗಳನ್ನು ಟಿವಿ9 ಡಿಜಿಟಲ್ನಿಮಗಾಗಿ ತೆರೆದಿಡುತ್ತಿದೆ.
ಭೂ ಕುಸಿತ ಎಂಬ ಶಬ್ದ ಕಿವಿಗೆ ಬಿದ್ದರೆ ಕನ್ನಡಿಗರ ಹೃದಯವೇ ಕಂಪಿಸುತ್ತದೆ. ಕಳೆದ ಎರಡು ಮೂರು ವರ್ಷಗಳಿಂದ ನಿರಂತರವಾಗಿ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಒಂದಾದ ಮೇಲೊಂದರಂತೆ ಸಂಭವಿಸುತ್ತಿರುವ ಘನಘೋರ ಭೂ ಕುಸಿತ ಪ್ರಕರಣಗಳು ಮಲೆನಾಡಿನ ಜನರ ನೆಮ್ಮದಿಯನ್ನೇ ಕಸಿದುಕೊಂಡಿವೆ. ಈ ಬಾರಿ ಭಾಗಮಂಡಲ ಪ್ರದೇಶದಲ್ಲಿ ಬ್ರಹ್ಮಗಿರಿ ಗುಡ್ಡ ಕುಸಿದು ತಲಕಾವೇರಿ ದೇವಸ್ಥಾನದ ಅರ್ಚಕರ ಕುಟುಂಬವೇ ಮಣ್ಣುಪಾಲಾಗಿ ಹೋಯಿತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕಿಲೋಮೀಟರ್ಗಟ್ಟಲೆ ಮಣ್ಣಿನ ಹೊಳೆ ಹರಿದು ತಮ್ಮೂರನ್ನೇ ಗುರುತಿಸಲಾಗದಂತಹ ಪರಿಸ್ಥಿತಿಗೆ ಅಲ್ಲಿಯ ಜನರು ಮೂಕಸಾಕ್ಷಿಯಾಗಿದ್ದರು.
ಕಳೆದ ವರ್ಷ ಚಾರ್ಮಾಡಿ ತಪ್ಪಲಿನಲ್ಲಿಯೂ ಇಂತಹದ್ದೇ ಭೂ ಕುಸಿತ ಸಂಭವಿಸಿ ಹಲವು ಕುಟುಂಬಗಳು ಮನೆ, ಮಠ, ಜಮೀನುಗಳನ್ನು ಕಳೆದುಕೊಂಡು ಬರಿಗೈಯಲ್ಲಿ ತಮ್ಮ ಭವಿಷ್ಯದ ಕುರಿತು ಯೋಚಿಸುವ ದುಸ್ಥಿತಿ ಎದುರಾಗಿತ್ತು. ಇಂತಹ ಪ್ರಕರಣಗಳಿಗೆ ಕಾರಣವಾದ ಅಂಶವೊಂದು ಈಗ ಬೆಳಕಿಗೆ ಬಂದಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿದ ಜಾಗಗಳಲ್ಲಿಯೇ ಹೆಚ್ಚು ಭೂಕುಸಿತ ಸಂಭವಿಸಿರುವುದು ಈ ಘಟನೆಗಳಿಗೆ ಹೊಸ ತಿರುವು ನೀಡಿದೆ.
ಪಶ್ಚಿಮ ಘಟ್ಟದ ಪ್ರದೇಶಗಳನ್ನು ಮೂರು ವಲಯಗಳಾಗಿ ವಿಂಗಡಿಸಿ ಅವುಗಳ ಸಂರಕ್ಷಣೆಗಾಗಿ ಆ ಭೂ ಪ್ರದೇಶಗಳನ್ನು ವೈಜ್ಞಾನಿಕವಾಗಿ ಬಳಕೆ ಮಾಡಬೇಕು ಹಾಗೂ ಅಲ್ಲಿಗೆ ಮಾರಕವಾಗುವಂತಹ ಅಭಿವೃದ್ಧಿ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕು ಎಂಬುದೇ ಕಸ್ತೂರಿ ರಂಗನ್ ವರದಿಯ ಮೂಲ ಆಶಯ ಎಂದು ತಜ್ಞರು ಪ್ರತಿಪಾದಿಸುತ್ತಾ ಬಂದಿದ್ದಾರೆ.
ಆದರೆ, ವರದಿ ಜಾರಿಯಾದರೆ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಮರಳುಗಾರಿಕೆ, ಕ್ವಾರಿ, ಅಣೆಕಟ್ಟು ನಿರ್ಮಾಣ, ಜಲ ವಿದ್ಯುತ್, ಪವನ ವಿದ್ಯುತ್ ಯೋಜನೆ, ಕೈಗಾರಿಕೆಗಳನ್ನು ನಿಷೇಧಿಸಲಾಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶಗಳಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ರಾಸಾಯನಿಕ ಬಳಕೆ, ಕಲ್ಲು, ಸಿಮೆಂಟ್ ಬಳಕೆ, ಜನವಸತಿ ನಿರ್ಮಾಣ, ಕಟ್ಟಡ ನಿರ್ಮಾಣ ಕಾರ್ಯಗಳನ್ನು ಮಾಡುವಂತಿಲ್ಲ. ಈ ವರದಿ ಜಾರಿಯಿಂದ ಕಾಲಕ್ರಮೇಣ ತಮ್ಮ ಜಮೀನು, ಜಾಗಗಳನ್ನು ಕಳೆದುಕೊಂಡು ಊರು ತೊರೆಯಬೇಕಾಗುತ್ತದೆ ಎಂಬ ಭಯ ಆ ಭಾಗದ ನಿವಾಸಿಗಳದ್ದು. ಪರಿಸರ ತಜ್ಞರು, ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಸ್ಥಳೀಯ ನಿವಾಸಿಗಳ ನಡುವಿನ ಸಮನ್ವಯ ಕೊರತೆ ಹಾಗೂ ರಾಜಕೀಯ ಪ್ರೇರಿತ ಹೋರಾಟಗಳ ಪರಿಣಾಮವಾಗಿ ಇಂದಿಗೂ ಅಲ್ಲಿಯ ಜನರಿಗೆ ಕಸ್ತೂರಿ ರಂಗನ್ ವರದಿಯ ಕುರಿತಾಗಿ ಸ್ಪಷ್ಟ ವಿವರ ಸಿಕ್ಕಿಲ್ಲ.
ಈಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ನಿರಂತರವಾಗಿ ನಡೆದ ಗುಡ್ಡ ಅಗೆಯುವ ಮತ್ತು ಕಾಡು ನಿರ್ನಾಮ ಮಾಡುವ ಕೃತ್ಯಗಳೇ ಕರ್ನಾಟಕದಲ್ಲಿ ನಿರಂತರವಾಗಿ ಸಂಭವಿಸಿದ ಭೂ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ ಬಹುಮುಖ್ಯವಾಗಿ ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟ ಕೊಡಗಿನ ಪುಷ್ಪಗಿರಿ, ತಲಕಾವೇರಿ, ಬ್ರಹ್ಮಗಿರಿ.
ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ, ದಿಡುಪೆ, ಎಳನೀರು. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ, ಕಳಸ ಸುತ್ತಮುತ್ತಲಿನ ಜಾಗ. ಶಿವಮೊಗ್ಗ ಜಿಲ್ಲೆಯ ಸಾಗರ, ನಗರ, ಹೊಸನಗರ, ಕೊಡಚಾದ್ರಿ, ಲಿಂಗನಮಕ್ಕಿ ಹಿನ್ನೀರು ಪ್ರದೇಶ, ತೀರ್ಥಹಳ್ಳಿ ತಾಲ್ಲೂಕಿನ ಕೆಲವು ಜಾಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಾನಳ್ಳಿ, ಜಡ್ಡಿಗದ್ದೆ ಭಾಗಗಳಲ್ಲಿ ಅತಿ ಹೆಚ್ಚಿನ ಅನಾಹುತಗಳು ಜರುಗಿವೆ. ಒಂದುವೇಳೆ ಈ ಪ್ರದೇಶಗಳನ್ನು ಸೂಕ್ಷ್ಮ ವಲಯಗಳೆಂದು ಗುರುತಿಸಿ ಮಾನವ ಹಸ್ತಕ್ಷೇಪವನ್ನು ತಪ್ಪಿಸಿದ್ದರೆ, ಜೆಸಿಬಿ, ಹಿಟಾಚಿ ಯಂತ್ರಗಳ ಕೆಲಸವನ್ನು ತಡೆದಿದ್ದರೆ ಇಷ್ಟು ದೊಡ್ಡ ಮಟ್ಟದ ಅನಾಹುತ ಆಗುತ್ತಿರಲಿಲ್ಲ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗುತ್ತಿದೆ.
ಕಸ್ತೂರಿ ರಂಗನ್ ವರದಿಯಲ್ಲಿ ಏನಿದೆ? ತಜ್ಞರು ಏನ್ ಹೇಳ್ತಾರೆ?
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅಡಿಕೆ ತೋಟಗಳನ್ನು ಕಾಡುಗಳೆಂದು ಪರಿಗಣಿಸಲಾಗುತ್ತದೆ, ಕಾಡಿನಂಚಿನ ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ, ಸ್ಥಳೀಯ ಅಭಿವೃದ್ಧಿಗಳನ್ನೂ ತಡೆ ಹಿಡಿಯಲಾಗುತ್ತದೆ ಎಂಬ ಸುಳ್ಳು ಭಯವನ್ನು ಜನರಲ್ಲಿ ಬಿತ್ತಲಾಗಿದೆ. ಒಂದರ್ಥದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅರ್ಥೈಸಿಕೊಂಡಿದ್ದಕ್ಕಿಂತ ತಪ್ಪು ತಿಳುವಳಿಕೆಯನ್ನು ಹರಡಿದ್ದೇ ಹೆಚ್ಚು. ಪಶ್ಚಿಮ ಘಟ್ಟದ ಶಿಖರ ಪ್ರದೇಶಗಳನ್ನು ಅತಿ ಸೂಕ್ಷ್ಮ ಪ್ರದೇಶಗಳನ್ನು ಘೋಷಿಸಿ ಅವುಗಳನ್ನು ಸಂರಕ್ಷಿಸಬೇಕು ಎಂಬ ಉದ್ದೇಶ ಹೊಂದಿದ್ದ ವರದಿಗೆ ರಾಜಕೀಯ ಬೆರೆಸಿ ವಿರೋಧ ಒಡ್ಡಲಾಯಿತು. ಆದರೆ, ನಾವಿದನ್ನ ರಾಜಕೀಯವಾಗಿ ನೋಡುವ ಬದಲು ನಮ್ಮ ಮಲೆನಾಡಿನ ಉಳಿವಿನ ದೃಷ್ಟಿಯಲ್ಲಿ ನೋಡಬೇಕು. ವರದಿಯಲ್ಲಿ ಉಲ್ಲೇಖಿಸಿರುವಂತೆ ಅತಿ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್, ಹೋಟೆಲ್ಗಳಂತಹ ವಾಣಿಜ್ಯ ಉದ್ದೇಶಗಳಿಗೆ ಭೂಮಿ ಬಳಸಬಾರದೇ ವಿನಃ ಕೃಷಿ ಕೆಲಸ ಮಾಡುವಂತಿಲ್ಲ, ಊರಿನ ರಸ್ತೆ ನಿರ್ಮಾಣ ಮಾಡುವಂತಿಲ್ಲ ಎಂಬ ನಿಯಮಗಳೇನೂ ಇಲ್ಲ. ಆದರೆ, ಎಲ್ಲೆಂದರಲ್ಲಿ ಭೂಮಿ ಅಗೆಯುವುದನ್ನು, ರಸ್ತೆ ನಿರ್ಮಿಸುವುದನ್ನು ತಡೆದು ಶಿಸ್ತಬದ್ಧವಾಗಿ ಭೂಮಿ ಬಳಕೆ ಮಾಡಲು ನಿರ್ದೇಶಿಸಿರುವುದು ನಿಜ ಮತ್ತು ಅದು ಅನಿವಾರ್ಯ ಕೂಡ. ಜೊತೆಗೆ ಈ ವರದಿ ಜಾರಿಯಾದರೂ ಜನರ ಪಾರಂಪರಿಕ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬುದು ಬಹುಮುಖ್ಯ ಅಂಶ.
ಈ ವರದಿಯಲ್ಲಿ ಪಂಚಾಯತ್ ವ್ಯವಸ್ಥೆಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು ಇಡೀ ರಾಜ್ಯಕ್ಕೆ ಒಂದೇ ನಿಯಮ ಎಂದು ಎಲ್ಲೂ ಹೇಳಿಲ್ಲ. ಆಯಾ ಊರಿನ ಅವಶ್ಯಕತೆಗಳನ್ನು ಪರಿಶೀಲಿಸಿ ಪಂಚಾಯತಿ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳುವ ಬಹುದೊಡ್ಡ ಅವಕಾಶವಿದೆ. ಇದನ್ನು ಜನರು ಸೂಕ್ಷ್ಮವಾಗಿ ಗಮನಿಸಬೇಕು. ಒಂದುವೇಳೆ, ಯಾವುದೇ ರಾಜಕೀಯ ಬೆರಸದೆ ಕಸ್ತೂರಿ ರಂಗನ್ ವರದಿ ಜಾರಿಯತ್ತ ಗಮನ ಹರಿಸಿದ್ದರೆ ಇಷ್ಟೊತ್ತಿಗೆ ಅನೇಕ ಪ್ರಯೋಜನಗಳಾಗುತ್ತಿತ್ತು.
ದುರಂತವೆಂದರೆ ಕರ್ನಾಟಕದಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಭೂ ಕುಸಿತ ಸಂಭವಿಸಿದ ಬಹುಪಾಲು ಪ್ರದೇಶ ಕಸ್ತೂರಿ ರಂಗನ್ ವರದಿಯಲ್ಲಿ ಅತಿ ಸೂಕ್ಷ್ಮ ಎಂದು ಗುರುತಿಸಿದ ಪ್ರದೇಶಗಳೇ ಆಗಿವೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ, ಪ್ರವಾಹಗಳನ್ನ ತಡೆಯಬೇಕೆಂದರೆ ಅಲ್ಲಿನ ಭೂ ಪ್ರದೇಶವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಅವಶ್ಯಕ ಹಾಗೂ ಅದಕ್ಕಾಗಿ ಕಸ್ತೂರಿ ರಂಗನ್ ವರದಿಯಲ್ಲಿನ ಮಾರ್ಗಸೂಚಿಗಳು ಉಪಯುಕ್ತವಾಗಿವೆ ಎಂಬುದು ನಿಸ್ಸಂದೇಹ. ಈಗ ಘಟಿಸಿರುವ ಅನಾಹುತಗಳಿಂದಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಿಮ ಘಟ್ಟದ ಉಳಿವು ಕಷ್ಟಕರವಾಗಲಿದೆ.
-ಕೇಶವ ಎಚ್. ಕೊರ್ಸೆ
ನಿರ್ದೇಶಕರು, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರ
ಕಸ್ತೂರಿ ರಂಗನ್ ವರದಿಯ ವಿರುದ್ಧದ ಕೂಗು ಅರ್ಥಹೀನವಾಗಿದ್ದು. ಜನರಿಗೆ ಈ ವರದಿಗಳಲ್ಲಿನ ಅಂಶಗಳ ಕುರಿತು ಸ್ಪಷ್ಟತೆ ನೀಡಬೇಕಾಗಿದೆ. ಸುಸ್ತಿರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ತಯಾರಿಸಿರುವ ಈ ವರದಿಗಳು ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸುವ ಸದುದ್ದೇಶವನ್ನು ಹೊಂದಿವೆಯೇ ವಿನಃ ಯಾವುದೇ ರೀತಿಯಲ್ಲೂ ಮಾರಕವಾಗಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಾತ್ರ ಪಶ್ಚಿಮ ಘಟ್ಟ, ಮಲೆನಾಡು ಭಾಗವನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ಇನ್ನಾದರೂ ಅರ್ಥೈಸಿಕೊಳ್ಳಬೇಕು. -ಅನಂತ್ ಹೆಗಡೆ ಆಶೀಸರ,
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರು
ವರದಿ : ಸ್ಕಂದ ಆಗುಂಬೆ
Published On - 1:48 pm, Thu, 12 November 20