30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು

| Updated By: ಸಾಧು ಶ್ರೀನಾಥ್​

Updated on: Feb 27, 2024 | 12:37 PM

ಚಿಕ್ಕೋಡಿ ತಾಲೂಕಿನ ಗೌಡೇನವಾಡಿ ಗ್ರಾಮದಲ್ಲಿ - 30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು. ಶಾಸಕ ಗಣೇಶ್ ಹುಕ್ಕೇರಿಗೂ ಮನವಿ ಮಾಡಿದ್ದರೂ ಈ ವರೆಗೂ ನೀರು ಕೊಡಿಸುವ ಕೆಲಸ ಆಗಿಲ್ಲ.

30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು
ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು
Follow us on

ಅದು ಕೃಷ್ಣಾ ನದಿಯ ಕೂಗಳತೆ ದೂರದಲ್ಲಿರುವ ಗ್ರಾಮ. ಇನ್ನೂರು ಮನೆಗಳಿರುವ ತೋಟದೂರಿನಲ್ಲಿ ಬೇಸಿಗೆ ಮುನ್ನವೇ ನೀರಿಗಾಗಿ (drinking water) ಹಾಹಾಕಾರ ಶುರುವಾಗಿದೆ. ಜೀವ ಜಲಕ್ಕಾಗಿ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಬಾವಿಗಿಳಿದು ನೀರು‌ ತುಂಬ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ (Chikodi) ನೀರಿಗಾಗಿ ಜನ ಪರಿತಪ್ಪಿಸುತ್ತಿರುವುದು ಹೇಗೆ? ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ… ಮೂವತ್ತು ಅಡಿ ಆಳದ ಬಾವಿಗೆ ಜೀವ ಕೈಯಲ್ಲಿ, ಡೊಂಕದಲ್ಲಿ (ಸೊಂಟ) ಕೊಡ ಹಿಡಿದು ಇಳಿಯುತ್ತಿರುವ ಮಹಿಳೆಯರು, ಅಳಿದುಳಿದ ನೀರನ್ನೇ ತುಂಬಿ ಕಿಮೀ ಗಟ್ಟಲೆ ಹೊತ್ತು ತರುತ್ತಿರುವ ಜನ. ನೀರು ಕೊಡದ ಜನಪ್ರತಿನಿಧಿ ಅಧಿಕಾರಿಗಳ ವಿರುದ್ಧ ವೃದ್ಧರ ಆಕ್ರೋಶ. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೌಡೇನವಾಡಿ ಗ್ರಾಮದಲ್ಲಿ.

ಹೌದು ಇಲ್ಲಿ ಕೊಳಾಯಿ ವ್ಯವಸ್ಥೆ ಇಲ್ಲ. ಬೋರ್ ವೆಲ್ ನಿಂದ ಜನ ನೀರು ಕುಡಿಯುತ್ತಾರೆ. ಆದ್ರೇ ಇದೀಗ ಬೋರ್ ವೆಲ್ ಬತ್ತಿ ಹೋಗಿದ್ದರಿಂದ ನೀರಿಗಾಗಿ ಪರಿತಪ್ಪಿಸುವ ಸ್ಥಿತಿ ನಿರ್ಮಾಣ ಆಗಿದೆ. ಊರಿನಿಂದ ಎರಡು ಕಿಮೀ ದೂರದಲ್ಲಿರುವ ಬಾವಿಯೊಂದಕ್ಕೆ‌ ಹೋಗಿ ನೀರು ತರುವ ಸ್ಥಿತಿ ಇದೆ.‌ ನಿತ್ಯ ಮನೆಗೆ ಒಬ್ಬರಂತೆ ನೀರು ತರುವ ಕೆಲಸವನ್ನೇ ಇಲ್ಲಿ ಮಾಡಬೇಕಾಗಿದೆ. ಇನ್ನು ಬಾವಿಯಲ್ಲೂ ನೀರು ಬತ್ತುವ ಹಂತಕ್ಕೆ ಬಂದಿದ್ದು ಅಳಿದುಳಿದ ನೀರನ್ನೇ ತಂದು ಜನ ಕುಡಿಯುತ್ತಿದ್ದಾರೆ. ಇಷ್ಟೆ ಆಗಿದ್ರೆ ಓಕೆ ಆದ್ರೇ ಇಲ್ಲಿ ತಮ್ಮ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ನೀರು ತರ್ತಿರುವುದು ಬರಗಾಲದ ಭೀಕರತೆ ಹೇಳುತ್ತಿದೆ. ಮೂವತ್ತು ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ. ಇದರಿಂದ ಜೀವ ಭಯದಲ್ಲೇ ಕೊಡಗಳನ್ನ ಹಿಡಿದು ಕೆಳಗಿಳಿದು ಬಿಂದಿಗೆ ತುಂಬಿಕೊಂಡು ಮೇಲೆ ಬರಬೇಕು. ಸ್ವಲ್ಪ ಯಾಮಾರಿದ್ರೂ ಕಾಲು ಜಾರಿದ್ರೂ ಅನಾಹುತವೇ ಆಗುತ್ತೆ. ಇದು ಗೊತ್ತಿದ್ರೂ ಹನಿ ನೀರಿಗಾಗಿ ಜನ ಅದನ್ನ ಲೆಕ್ಕಿಸದೆ ಬಾವಿಗಿಳಿದು ನೀರು ತರ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಲಕ್ಷಾಮ; ನೀರಿಲ್ಲದೆ ಕಂಗಾಲಾದ ಕೆಂಗೇರಿಯ ಲಗ್ಜುರಿ ಅಪಾರ್ಟ್ಮೆಂಟ್​ನ 2,800 ಕುಟುಂಬಗಳು

ಇನ್ನು ಜೀವ ಕೈಯಲ್ಲಿ ಹಿಡಿದು ಬಾವಿಗಿಳಿದು ನೀರು ತರುವುದು ಒಂದು ಕಡೆಯಾದ್ರೇ ಹೀಗೆ ಬಾವಿಯಿಂದ ನೀರು ಮೇಲೆ ತಂದು ಎರಡು ಕಿಮೀ ನಡೆದುಕೊಂಡು ಬರುವುದು ಮತ್ತೊಂದು ಕಡೆ. ಹೌದು ಊರಿಂದ ಎರಡು ಕಿಮೀ ದೂರದಲ್ಲಿ ಒಂದೇ ಬಾವಿಯಿದ್ದು ಹೀಗಾಗಿ ನಿತ್ಯ ನಡೆದುಕೊಂಡು ಹೋಗಿಯೇ ನೀರು ತರ್ತಾರೆ ಗ್ರಾಮದ ಜನ‌. ಮಕ್ಕಳು, ಮಹಿಳೆಯರು, ವಯಸ್ಸಾದವರು ಸೇರಿದಂತೆ ಎಲ್ಲರೂ ಇಡೀ ದಿನ ನೀರು ತುಂಬಬೇಕು. ಇನ್ನೂ ಈ ಗ್ರಾಮದಿಂದ ಕೃಷ್ಣಾ ನದಿ ಐದು ಕಿಮೀ ದೂರದಲ್ಲಿದ್ದು ಅಲ್ಲಿಂದ ನೀರು ತಂದು ಕೊಡುವ ಕೆಲಸ ಕೂಡ ಆಗಿಲ್ಲ. ಚುನಾವಣೆ ಬಂದಾಗ ವೋಟ್ ಕೇಳಲು ಬರುವ ಜನಪ್ರತಿನಿಧಿಗಳು ಆಮೇಲೆ ಇತ್ತ ತಲೆಯೂ ಹಾಕುವುದಿಲ್ಲ. ಶಾಸಕ ಗಣೇಶ್ ಹುಕ್ಕೇರಿಗೂ ಮನವಿ ಮಾಡಿದ್ದರೂ ಈ ವರೆಗೂ ನೀರು ಕೊಡಿಸುವ ಕೆಲಸ ಆಗಿಲ್ಲ. ಟ್ಯಾಂಕರ್ ದಿಂದಾದ್ರೂ ನೀರು ಬಿಡಿಸಿ ಅಂತಾ ಜನ ಸರ್ಕಾರಕ್ಕೆ, ‌ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಇನ್ನೂ ಬೇಸಿಗೆ ಆರಂಭ ಆಗಿಲ್ಲ ಆದ್ರೆ ಅದಾಗಲೇ ನೀರಿಗಾಗಿ ಗಡಿ ಭಾಗದಲ್ಲಿ ಜನ ಕಷ್ಟಪಡುತ್ತಿದ್ದಾರೆ. ಕೃಷ್ಣಾ ನದಿ ನೀರು ತಂದು ಈ ಗ್ರಾಮದ ಜನರಿಗೆ ಕುಡಿಸುವ ಕೆಲಸ ಆಗಬೇಕಿದೆ. ಇನ್ನೂ ಜಿಲ್ಲಾಡಳಿತ ಕೂಡ ಇತ್ತ ಗಮನ ಹರಿಸಿ ಕೊನೆ ಪಕ್ಷ ಟ್ಯಾಂಕರ್ ದಿಂದ ಆದ್ರೂ ಇವರಿಗೆ ನೀರು ಕುಡಿಸುವ ಕೆಲಸ ಮಾಡಲಿ ಆಗುವ ಅನಾಹುತ ತಪ್ಪಿಸಲಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ