AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದ್ದು-ಮುಚ್ಚಿ ರಥ ಎಳೆಯುವ ಭಕ್ತರು; ಅಧಿಕಾರಿಗಳಿಗೆ ಸಂಕಟ ತಂದಿಡುತ್ತಿವೆ ಜಾತ್ರೆಗಳು

ಕೆಲ ಗ್ರಾಮಗಳ ಗ್ರಾಮಸ್ಥರು ಅಧಿಕಾರಿಗಳ ಮಾತಿಗೆ ಸ್ಪಂದಿಸಿದರೆ ಕೆಲವೆಡೆ ಅಧಿಕಾರಿಗಳ ಕಣ್ಣುತಪ್ಪಿಸಿ, ಕದ್ದುಮುಚ್ಚಿ ತೇರು ಎಳೆಯಲಾಗುತ್ತಿದೆ.

ಕದ್ದು-ಮುಚ್ಚಿ ರಥ ಎಳೆಯುವ ಭಕ್ತರು; ಅಧಿಕಾರಿಗಳಿಗೆ ಸಂಕಟ ತಂದಿಡುತ್ತಿವೆ ಜಾತ್ರೆಗಳು
ಕಲಬುರಗಿ ಜಿಲ್ಲೆಯಲ್ಲಿ ನಡೆದ ಜಾತ್ರೆಯ ದೃಶ್ಯ
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 07, 2020 | 8:46 PM

Share

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೇರಟಗಿ ಗ್ರಾಮದಲ್ಲಿ ಭಾನುವಾರ (ಡಿ.6) ನಡೆದ ರಥೋತ್ಸವದಲ್ಲಿ ಓರ್ವ ವ್ಯಕ್ತಿಗೆ ರಥದ ಗಾಲಿ ತಗುಲಿ ಗಾಯವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅನುಮತಿಯಿಲ್ಲದಿದ್ದರೂ ರಥೋತ್ಸವ ನಡೆಸಿದ ಗ್ರಾಮಸ್ಥರ ವಿರುದ್ಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುವುದು ವಾಡಿಕೆ. ಆದರೆ ಕೊರೊನಾದಿಂದಾಗಿ ಈ ವರ್ಷ ಜಾತ್ರೆ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಗ್ರಾಮಕ್ಕೆ ಭೇಟಿ ನೀಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ರಥೋತ್ಸವ ನಡೆಸದಂತೆ ಜನರಿಗೆ ಸೂಚನೆ ನೀಡಿದ್ದರು.

ಆದರೆ, ಡಿ.6ರ ನಸುಕಿನ ನಾಲ್ಕು ಗಂಟೆಗೆ ಗ್ರಾಮದ ದೇವಸ್ಥಾನದ ಬಳಿ ಸೇರಿದ ಜನರು, ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದೆ ಇಲ್ಲದೆ ಇರುವದನ್ನು ಗಮನಿಸಿ ರಥೋತ್ಸ ನಡೆಸಿದ್ದಾರೆ. ಕದ್ದುಮುಚ್ಚಿ ರಥ ಎಳೆಯುವಾಗ ಗ್ರಾಮದ ಓರ್ವ ವ್ಯಕ್ತಿಗೆ ರಥದ ಗಾಲಿ ತಗುಲಿ ಗಾಯವಾಯಿತು.

ಜಾತ್ರೆ ನಡೆಸಿ ಜೈಲುಪಾಲಾಗಿದ್ದರು ಈ ಹಿಂದೆ ಆಳಂದ ತಾಲೂಕಿನ ಭೂಸನೂರು ಮತ್ತು ಚಿತ್ತಾಪುರ ತಾಲೂಕಿನ ರೇವೂರು ಗ್ರಾಮ ಸೇರಿದಂತೆ ಅನೇಕ ಕಡೆ ಕದ್ದುಮುಚ್ಚಿ ರಥೋತ್ಸವ ನಡೆಸಲಾಗಿತ್ತು. ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ, ಜನರ ಮನವೊಲಿಸಿ, ರಥವನ್ನು ಎಳೆಯದಂತೆ ಸೂಚನೆ ನೀಡಿ ಬಂದ ಮೇಲೆಯೂ ಗ್ರಾಮಸ್ಥರು ಮಧ್ಯರಾತ್ರಿ ಅಥವಾ ನಸುಕಿನಲ್ಲಿ ರಥೋತ್ಸವ ನಡೆಸುತ್ತಿದ್ದರು. ಇಂಥ ಪ್ರಕರಣಗಳು ಬೆಳಕಿಗೆ ಬಂದಾಗ ಗ್ರಾಮಸ್ಥರ ಮೇಲೆ ದೂರು ದಾಖಲಾಗುತ್ತಿತ್ತು. ಅನೇಕರು ಜೈಲು ಪಾಲಾಗಿದ್ದರು.

ಅಧಿಕಾರಿಗಳು, ಪೊಲೀಸರಿಗೆ ಸಂಕಟ

ಜಿಲ್ಲೆಯಲ್ಲಿ ಎಲ್ಲಿಯೇ ಜಾತ್ರೆ, ರಥೋತ್ಸವ ನಡೆದರೂ ಆ ಭಾಗದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್​ ಸಿಬ್ಬಂದಿಯನ್ನು ಹೊಣೆ ಮಾಡಲಾಗುವುದು ಎಂದು ಜಿಲ್ಲಾಡಳಿತ ಈ ಹಿಂದೆ ಘೋಷಿಸಿತ್ತು. ಜಾತ್ರೆ ನಡೆಯಬೇಕಿರುವ ಗ್ರಾಮಗಳಿಗೆ ಅಧಿಕಾರಿಗಳು ಹತ್ತಾರು ಬಾರಿ ಭೇಟಿ ನೀಡಿ ತೇರು ಎಳೆಯದಂತೆ ಮನವೊಲಿಸಲು ಯತ್ನಿಸುತ್ತಿದ್ದಾರೆ.

ಕೆಲ ಗ್ರಾಮಗಳ ಗ್ರಾಮಸ್ಥರು ಅಧಿಕಾರಿಗಳ ಮಾತಿಗೆ ಸ್ಪಂದಿಸಿದರೆ ಕೆಲವೆಡೆ ಅಧಿಕಾರಿಗಳ ಕಣ್ಣುತಪ್ಪಿಸಿ, ಕದ್ದುಮುಚ್ಚಿ ತೇರು ಎಳೆಯಲಾಗುತ್ತಿದೆ. ಇಂಥ ಘಟನೆಗಳು ಬೆಳಕಿಗೆ ಬಂದಾಗ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯನ್ನೇ ಮೇಲಧಿಕಾರಿಗಳು ಅಮಾನತು ಮಾಡಿದ್ದಾರೆ.

ಜಾತ್ರೆಗಳಲ್ಲಿ ಸಾವಿರಾರು ಜನರು ಸೇರುತ್ತಾರೆ. ಇಂಥ ಕಡೆ ಕೊರೊನಾ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎನ್ನುವ ಕಾರಣಕ್ಕೆ ಕಳೆದ ಮಾರ್ಚ್ ತಿಂಗಳಿದ ಇಲ್ಲೀವರೆಗೆ ಜಾತ್ರೆಗಳಿಗೆ ಸರ್ಕಾರ ಅವಕಾಶ ನೀಡಿರಲಿಲ್ಲ. ಸಾಂಕೇತಿಕವಾಗಿ ಐದಾರು ಜನರು ಸೇರಿಕೊಂಡು ದೇವರ ಪೂಜೆ ಮಾಡಿ, ಐದಾರು ಹೆಜ್ಜೆ ರಥ ಎಳೆಯಲು ಮಾತ್ರ ಅವಕಾಶವಿದೆ.

ಈ ಜಾತ್ರೆಯಲ್ಲಿ ಬಳೆ ಸದ್ದು ಕೇಳುವಂತಿಲ್ಲ.. ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ No Entry