ಬೆಂಗಳೂರು, ಮೇ 27: ರಾಜ್ಯದಲ್ಲಿ ರಸ್ತೆ ಅಪಘಾತಗಳು ದಿನದಿಂದ ಹೆಚ್ಚುತ್ತಿವೆ. ಸಂಚಾರಿ ನಿಯಮಗಳನ್ನು ಪಾಲಿಸಿ, ಅತಿ ವೇಗದಿಂದ ವಾಹನ ಚಲಾಯಿಸದಿರಿ ಎಂದು ಟ್ರಾಫಿಕ್ ಪೊಲೀಸರು (Traffic Police) ಅರಿವು ಮೂಡಿಸುತ್ತಿದ್ದರೂ, ಕೆಲ ಸವಾರರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘತಕ್ಕೆ 51 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (Alok Kumar) ತಿಳಿಸಿದ್ದಾರೆ.
ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಬಗ್ಗೆ ಟ್ವೀಟ್ ಮಾಡಿದ ಅವರು, “ಭಾನುವಾರ ಹಾಸನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 51 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ ಹಲವು ಪ್ರಕರಣಗಳು ಅತಿ ವೇಗ ಹಾಗೂ ಅಜಾಗರೂಕ ಚಾಲನೆಯಿಂದ ಸಂಭವಿಸಿದೆ. ರಸ್ತೆ ಸುರಕ್ಷತೆಗೆ ಎಲ್ಲ ಪಾಲುದಾರರಿಂದ ಜವಾಬ್ದಾರಿಯುತ ನಡವಳಿಕೆಯ ಅಗತ್ಯವಿದೆ” ಎಂದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ
6 persons killed in Hassan car accident
In last 24 hrs 51 lives lost in road accidents , one of the highest toll in recent past
Many of these caused due to rash & reckless driving
“#Roadsafety needs responsible behaviour from all the stakeholders” pic.twitter.com/JHYy1vC3CJ
— alok kumar (@alokkumar6994) May 26, 2024
ಕಳೆದ ವರ್ಷ 2023 ರಲ್ಲಿ, ರಾಜ್ಯಾದ್ಯಂತ ಪ್ರತಿದಿನ ಸರಾಸರಿ 34 ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ವಾರಾಂತ್ಯದಲ್ಲಿ ಹೆಚ್ಚಿನ ಅಪಘಾತಗಳು ವರದಿಯಾಗಿವೆ. ಈ ಬಗ್ಗೆ ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮಾತನಾಡಿ, ಅಧಿಕಾರಿಗಳು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ. ಹೆಚ್ಚಿನ ಅಪಘಾತಗಳು ಕಳಪೆ ಸವಾರಿ/ಚಾಲನಾ ಕೌಶಲ್ಯ ಇಲ್ಲದಿರುವುದರಿಂದ ಆಗುತ್ತವೆ. ಚಾಲಕರನ್ನು ಪರೀಕ್ಷಿಸಲು ಆರ್‌ಟಿಒ ನಿಯಮಗಳು ಕಠಿಣವಾಗಿರಬೇಕು ಎಂದು ಹೇಳಿದರು.
ಭಾನುವಾರ ಬೆಳ್ಳಂಬೆಳಗ್ಗೆ ಹಾಸನ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿ NH 75ನಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಮಗು ಸೇರಿದಂತೆ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕಾರಳ್ಳಿ ಗ್ರಾಮದ ನಾರಾಯಣಪ್ಪ, ಸುನಂದಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂದರಹಳ್ಳಿ ಗ್ರಾಮದ ನೇತ್ರಾ ಹಾಗೂ ರವಿಕುಮಾರ್ ದಂಪತಿ ಹಾಗೂ ಪುತ್ರ ಚೇತನ್ ಮೃತ ದುರ್ದೈವಿಗಳು.
ಪಾಶ್ವವಾಯುಗೆ ತುತ್ತಾಗಿದ್ದ ನಾರಾಯಣಪ್ಪ ಅವರಿಗೆ ಚಿಕಿತ್ಸೆ ಕೊಡಿಸಲೆಂದು KA-53-C. 1419 ನಂಬರ್ನ ಇಟಿಯೋಸ್ ಬಾಡಿಗೆ ಕಾರು ಮಾಡಿಕೊಂಡು ಮಂಗಳೂರಿಗೆ ಹೋಗಿದ್ದರು. ಚಿಕಿತ್ಸೆ ಪಡೆದು ವಾಪಸ್ಸು ಬೆಂಗಳೂರಿನ ಕಡೆಗೆ ಬರುವಾಗ ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್ಗೆ ಹಾರಿ ಕಂಟೇನರ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ.
ಇನ್ನು ಮೇ 23ರ ರಾತ್ರಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 6 ಜನ ಗಾಯಗೊಂಡಿದ್ದರು. ಅಜಾಗರೂಕ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 am, Mon, 27 May 24