ಪತ್ರಿಕೆ ಓದಲು ಶೆಡ್ ನಿರ್ಮಾಣ, ಹೊಸ ಕಟ್ಟಡಕ್ಕಿಲ್ಲ ಅನುದಾನ: ಇದು ರಾಮನಗರದ ದುಸ್ಥಿತಿ
ರಾಮನಗರವು ಜಿಲ್ಲಾ ಕೇಂದ್ರವಾಗಿ ದಶಕವೇ ಕಳೆದಿದೆ. ಜಿಲ್ಲೆಯಲ್ಲಿ ಆಸಕ್ತ ಓದುಗರಿಗಾಗಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಬೇಕು ಎಂಬುದು ಬಹುದಿನದ ಬೇಡಿಕೆ. ಆದರೆ ಇದಕ್ಕೆ ಇನ್ನೂ ಅವಕಾಶ ಕೂಡಿ ಬಂದಿಲ್ಲ.

ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಸುಸಜ್ಜಿತವಾದ ಜಿಲ್ಲಾ ಗ್ರಂಥಾಲಯ ನಿರ್ಮಾಣದ ಕನಸು ಇನ್ನೂ ಮರೀಚಿಕೆಯಾಗಿದ್ದು, ಹಳೆಯ, ಇಕ್ಕಟ್ಟಾದ ಕಟ್ಟಡದಲ್ಲೇ ಆಸಕ್ತರ ಜ್ಞಾನಾರ್ಜನೆ ಮುಂದುವರಿದಿದೆ.
ರಾಮನಗರವು ಜಿಲ್ಲಾ ಕೇಂದ್ರವಾಗಿ ದಶಕವೇ ಕಳೆದಿದೆ. ಜಿಲ್ಲೆಯಲ್ಲಿ ಆಸಕ್ತ ಓದುಗರಿಗಾಗಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಬೇಕು ಎಂಬುದು ಬಹುದಿನದ ಬೇಡಿಕೆ. ಆದರೆ ಇದಕ್ಕೆ ಇನ್ನೂ ಅವಕಾಶ ಕೂಡಿ ಬಂದಿಲ್ಲ. ಸದ್ಯ, ಇಕ್ಕಟಾದ ಸ್ಥಳದಲ್ಲೇ ಗ್ರಂಥಾಲಯ ನಡೆಯುತ್ತಿದೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳು ಓದಲು ಸ್ಥಳಾವಕಾಶದ ಕೊರತೆಯಿಂದಾಗಿ ಪಕ್ಕದ ಪ್ರವಾಸಿ ಮಂದಿರಕ್ಕೆ ತೆರಳುತ್ತಿದ್ದಾರೆ. ನಿಂತು ಪತ್ರಿಕೆಗಳನ್ನು ಓದಲೂ ಇಲ್ಲಿ ಜಾಗದ ಕೊರತೆ ಇದೆ. ಹೀಗಾಗಿ ದಿನಪತ್ರಿಕೆ ಓದಲು ಅಧಿಕಾರಿಗಳು ಆವರಣದಲ್ಲಿ ಶೆಡ್ ನಿರ್ಮಿಸಿ ಕೈತೊಳೆದುಕೊಂಡಿದ್ದಾರೆ.
ಗ್ರಂಥಾಲಯಕ್ಕೆ ಬರುವ ಹೊಸ ಪುಸ್ತಕಗಳನ್ನು ಇಡಲೂ ಸಹ ಜಾಗ ಇಲ್ಲದಂತೆ ಆಗಿದೆ. ಹೀಗಾಗಿ ಬಂದಿರುವ ಹೊಸ ಪುಸ್ತಕಗಳನ್ನೂ ಮೂಟೆ ಕಟ್ಟಿ ಇಡಲಾಗುತ್ತಿದೆ. ಇಲ್ಲಿ ಶೌಚಾಲಯ ಕೂಡ ಇಲ್ಲ. ಇನ್ನು ಸುಮಾರು 10 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಸರ್ಕಾರವು ಮುಂದಾಗಿದ್ದು, ಕಳೆದ ವಿಧಾನಸಭೆ ಚುನಾವಣೆಗೂ ಮುನ್ನವೇ ಈ ಯೋಜನೆಗೆ ಅನುಮೋದನೆ ದೊರೆತಿತ್ತು. ನಂತರದಲ್ಲಿ ವಿಧಾನಸಭೆ ಚುನಾವಣೆ, ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಆಗಿರಲಿಲ್ಲ. ಅದಾದ ಬಳಿಕವೂ ಅನುದಾನ ತರಲು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಆಸಕ್ತಿ ತೋರಿಲ್ಲ.
ಸದ್ಯ ಪ್ರವಾಸಿ ಮಂದಿರದ ಎದುರಿನ ಕಟ್ಟಡದಲ್ಲಿ ಜಿಲ್ಲಾ ಗ್ರಂಥಾಲಯವು ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿಯೇ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ. ಹಳೆಯ ಕಟ್ಟಡವನ್ನು ನೆಲಸಮ ಮಾಡಿ ಅಲ್ಲಿ ಮೂರು ಅಂತಸ್ತಿನ ಹೊಸ ಕಟ್ಟಡದ ನಿರ್ಮಾಣ ಕಾರ್ಯವು ನಡೆಯಲಿದೆ. 300 ಮಂದಿ ಕೂರಬಹುದಾದ ಸಭಾಂಗಣ, ಮೊದಲ ಮಹಡಿಯಲ್ಲಿ ಪುಸ್ತಕಗಳ ಪರಾಮರ್ಶೆ ಮತ್ತು ಕೊಡು–ಕೊಳ್ಳುವಿಕೆ ವಿಭಾಗ, ಮಕ್ಕಳ ಗ್ರಂಥಾಲಯ ಇರಲಿದೆ. ಎರಡನೇ ಮಹಡಿಯು ಡಿಜಿಟಲ್ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರವನ್ನು ಹೊಸ ಕಟ್ಟಡ ಒಳಗೊಳ್ಳಲಿದೆ. ಮೂರನೇ ಮಹಡಿಯು ಕಚೇರಿ ಕಾರ್ಯಗಳಿಗೆ ಮೀಸಲಾಗಿದೆ. ಆದರೆ ಅನುದಾನ ಬಿಡುಗಡೆಗೆ ಮಾತ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ.
ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯರಾದ ರಮೇಶ್, ಜಿಲ್ಲಾ ಗ್ರಂಥಾಲಯದಲ್ಲಿ ಪುಸ್ತಕ ಓದಲು ಬಂದರೆ ಸ್ಥಳದ ಕೊರತೆ ಇದೆ. ಪೇಪರ್ ಗಳನ್ನು ಓದಲು ಸ್ಥಳವಿಲ್ಲ. ಪುಸ್ತಕಗಳನ್ನ ಪಡೆದು ಬೇರೆ ಸ್ಥಳ ಹಾಗೂ ಮನೆಯಲ್ಲಿ ಕುಳಿತು ಓದುವ ಪರಿಸ್ಥಿತಿ ಇದೆ. ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ರೆ ಸಾಕಷ್ಟು ಒಳ್ಳೇಯದು ಆಗಲಿದೆ ಎಂದುಅಭಿಪ್ರಾಯಪಟ್ಟರು.