ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ, ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ ಕಾರ್ಯಕ್ರಮ
ಲಕ್ಷದೀಪದ ಅಂಗವಾಗಿ ಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳವು ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳು ಕೋವಿಡ್ ನಿಯಮಾನುಸಾರ ಜರಗಲಿವೆ.

ದಕ್ಷಿಣ ಕನ್ನಡ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಈಗ ಲಕ್ಷದೀಪೋತ್ಸವದ ಸಂಭ್ರಮ. ಪ್ರತಿವರ್ಷ ಲಕ್ಷಾಂತರ ಭಕ್ತರು ದೀಪೋತ್ಸವವನ್ನ ಕಣ್ತುಂಬಿಕೊಳ್ಳಲು ಮಂಜುನಾಥನ ಸನ್ನಿಧಿಯತ್ತ ಹೆಜ್ಜೆ ಹಾಕುತ್ತಾರೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಜನಸಂಖ್ಯೆ ತಗ್ಗಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ನಡುವೆ ಲಕ್ಷದೀಪದ ಸಮಭ್ರಮ ಭಕ್ತಾಭಿಮಾನಿಗಳಲ್ಲಿ ಮನೆಮಾಡಿದ್ದು ಮಂಜುನಾಥನ ನಾಮಜಪ ಮೊಳಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳ ದೇವಾಲಯ ಅದೆಷ್ಟೋ ಭಕ್ತರ ಪಾಲಿಗೆ ಕಷ್ಟಗಳನ್ನು ನಿವಾರಿಸುವ ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಈಗ ಲಕ್ಷ ದೀಪೋತ್ಸವದ ಸಂಭ್ರಮ ಮನೆಮಾಡಿದ್ದು, ಇಡೀ ಧರ್ಮಸ್ಥಳವೇ ದೀಪಗಳಿಂದ ಸಿಂಗಾರಗೊಂಡಿದೆ. ಒಟ್ಟು 5 ದಿನಗಳ ಕಾಲ ದೀಪೋತ್ಸವದ ನಡೆಯಲಿದ್ದು, ಡಿ. 14 ರಂದು ಸಂಪನ್ನಗೊಳ್ಳಲಿದೆ. ಕಾರ್ತಿಕ ಮಾಸದ ಈ ವಿಶೇಷ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.

ಅಲಂಕಾರಗೊಂಡ ಧರ್ಮಸ್ಥಳ ಕ್ಷೇತ್ರದ ದ್ವಾರ
ದೇವಸ್ಥಾನ, ಹೆಗ್ಗಡೆಯವರ ಬೀಡಿನ ಮನೆ, ಪ್ರವೇಶ ದ್ವಾರ, ಉದ್ಯಾನ, ವಸತಿಛತ್ರಗಳು, ಬಾಹುಬಲಿ ಬೆಟ್ಟ ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ. ಅಂತಿಮವಾಗಿ ಡಿ.14ರ ಸೋಮವಾರ ರಾತ್ರಿ ಶ್ರೀಮಂಜುನಾಥ ಸ್ವಾಮಿಗೆ ಲಕ್ಷ ದೀಪೋತ್ಸವದ ವಿಶೇಷ ಪೂಜೆ ನಡೆಯಲಿದೆ. ಡಿ. 14 ರಂದು ರಾತ್ರಿ 2 ಗಂಟೆಗೆ ಆರಂಭವಾಗುವ ರಥೋತ್ಸವ ಮುಂಜಾನೆ 6.30 ಕ್ಕೆ ಮುಕ್ತಾಯವಾಗಲಿದೆ.

ಮಂಜುನಾಥ ಸ್ವಾಮಿಯ ಉತ್ಸವ

ಬೆಳಕಿನಿಂದ ಕಂಗೊಳಿಸುತ್ತಿರುವ ಕ್ಷೇತ್ರದ ದಾರಿಯ ಇಕ್ಕೆಲಗಳು

ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿರುವ ದೇವಾಲಯದ ಆವರಣ
ಲಕ್ಷದೀಪದ ಅಂಗವಾಗಿ ಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳವೂ ಪ್ರತೀ ವರ್ಷದಂತೆ ಇರಲಿದ್ದು ಎಲ್ಲಾ ಕಾರ್ಯಕ್ರಮಗಳೂ ಕೋವಿಡ್ ನಿಯಮಾನುಸಾರ ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸುಗಮ ಸಂಗೀತ, ರಾಮಕಥಾ ನೃತ್ಯರೂಪಕ ನಡೆಯಲಿದೆ.
ದೀಪೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾದ್ಯತೆಯಿದ್ದು, ಆನ್ ಲೈನ್ ನಲ್ಲಿ ಲಕ್ಷದೀಪವನ್ನು ವೀಕ್ಷಿಸಿ, ಕೊರೊನ ನಿಯಮಗಳನ್ನು ಪಾಲಿಸಿ ಅಂತಾ ಭಕ್ತರಿಗೆ ಕ್ಷೇತ್ರದ ವತಿಯಿಂದ ಮನವಿ ಮಾಡಲಾಗಿದೆ. ಕಳೆದ ಭಾರೀ 2000 ಜನ ಕಲಾವಿದರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಸೇವೆ ನೀಡಿದ್ದರು. ಆದರೆ ಈ ವರ್ಷ ಕೊರೊನ ಕಾರಣದಿಂದ ಕಲಾವಿದರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
-ಪೃಥ್ವಿರಾಜ್ ಬೊಮ್ಮನಕೆರೆ
Published On - 6:19 am, Sun, 13 December 20