ಬೆಂಗಳೂರು, ಜ.16: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಕರ್ನಾಟಕ ಕಾಂಗ್ರೆಸ್ ನಾಯಕರಲ್ಲಿನ ದ್ವಂದ್ವ ನಿಲುವು ಬಹಿರಂಗವಾಗಿದೆ. ಕಟೌಟ್ ಹಾಕಬೇಕಾ ಎಂದ ವ್ಯಕ್ತಿಗೆ ಏನೂ ಹೇಳದೆ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ತೆರಳಿದ್ದಾರೆ. ಇತ್ತ, ಸ್ವಪಕ್ಷದ ಶಾಸಕರಾದ ಎಂ. ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅವರು ತಮ್ಮ ಕಚೇರಿ ಮುಂದೆ ಮಂದಿರ ಲೋಕಾರ್ಪಣೆಗೆ ಶುಭಕೋರಿ ಕಟೌಟ್ ಹಾಕಿ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರು ನಗರದ ಷೇಷಾದ್ರಿಪುರಂನಲ್ಲಿ ಇಂದು ಜನಸ್ಪಂದನ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರಲ್ಲಿ ವ್ಯಕ್ತಿಯೊಬ್ಬರು ರಾಮ ಮಂದಿರದ ಕಟೌಟ್ ಹಾಕಲು ಅನುಮತಿ ಕೇಳಿದ್ದಾರೆ. ಕಟೌಟ್ನ ಫೋಟೋ ನೀಡಿ 40 ಅಡಿ ಎತ್ತರದ ಕಟೌಟ್ನಲ್ಲಿ ನಿಮ್ಮ ಹೆಸರು ಹಾಕುತ್ತೇವೆ, ಶಾಸಕರ ಹೆಸರು ಹಾಕುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ ಫೋಟೋ ನೋಡಿದ ಡಿಕೆ ಶಿವಕುಮಾರ್, ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.
ಇದನ್ನೂ ಓದಿ: ನಿವೃತ್ತಿ ವೇತನ ನೀಡಲು ಲಂಚ ಕೇಳಿದ ಅಧಿಕಾರಿ ಅಮಾನತಿಗೆ ಆದೇಶಿಸಿದ ಡಿಸಿಎಂ ಡಿಕೆ ಶಿವಕುಮಾರ್
ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ವಿಜಯನಗರ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಾಕೃಷ್ಣ ಅವರು ತಮ್ಮ ಕಚೇರಿ ಮುಂದೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಕಟೌಟ್ ಹಾಕಿ ಅಚ್ಚರಿ ಮೂಡಿಸಿದ್ದಾರೆ.
ಮೂಡಲಪಾಳ್ಯ ಸರ್ಕಲ್ ಹಾಗೂ ಮಾಗಡಿ ರೋಡ್ನ ಟೋಲ್ ಗೇಟ್ ಸರ್ಕಲ್ನಲ್ಲಿ ಶ್ರೀರಾಮನ ಕಟೌಟ್ ತಲೆ ಎತ್ತಿವೆ. ಕಟೌಟ್ನಲ್ಲಿ ಶ್ರೀರಾಮ, ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಭವ್ಯ ಮಂದಿರದ ಚಿತ್ರ ಕಾಣಬಹುದು. ಅಷ್ಟು ಮಾತ್ರವಲ್ಲದೆ, ಕಟೌಟ್ಗಳಿಗೆ ವಿದ್ಯುತ್ ದೀಪಾಲಂಕಾರವೂ ಮಾಡಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಶ್ರಿರಾಮ ಕಾರ್ಯಕ್ರಮದಿಂದ ದೂರ ಉಳಿಯುವ ಸಂದೇಶ ನೀಡಿದ್ದರು. ರಾಜ್ಯದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಯಡವಟ್ಟು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಿಕ ಯೂಟರ್ನ ಹೊಡೆದಿದ್ದರು.
ವರದಿ: ಶಾಂತಮೂರ್ತಿ, ಟಿವಿ9 ಬೆಂಗಳೂರು
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ