ಅಂದು ದಿಲ್ಲಿಯಲ್ಲಿ ಆಗಿದ್ದೇನು? ಇಂದು ಕರ್ನಾಟಕದಲ್ಲಿ ಆಗುತ್ತಿರುವುದೇನು? “ಡಿಸಿಎಂ”ಬಿಕ್ಕಟ್ಟಿನ ವಿಶ್ಲೇಷಣೆ!
ಕರ್ನಾಟಕದಲ್ಲಿ ಈಗಾಗಲೇ ಓರ್ವ ಡಿಸಿಎಂ ಇದ್ದಾರೆ. ಅದು ಕೂಡಾ ಹೇಳಿ ಕೇಳಿ ಡಿ.ಕೆ.ಶಿವಕುಮಾರ್. ಹೀಗಿದ್ದರೂ ಸಹ ಮೂರು ಡಿಸಿಎಂ ಬೇಕು ಎನ್ನುವ ಕೂಗು ಆಗಾಗ ಕುಲುಮೆಯಲ್ಲಿ ಹೊಗೆ ಹಾಕಿದಾಗ ಏಳೋ ಬೆಂಕಿಯಂತೆ ಎದ್ದು ತಣ್ಣಗಾಗ್ತಿತ್ತು. ಇದಕ್ಕೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀರು ಹಾಕಿ ಹಾರಿಸಲು ಪ್ರಯತ್ನಿಸಿದ್ದಾರೆ. ಆದರೂ ಸಹ ಡಿಸಿಎಂ ಕಿಡಿ ಮೇಲೇಳುತ್ತಲೇ ಇದೆ. ಇನ್ನು ಈ ಡಿಸಿಎಂ ಬಿಕ್ಕಟ್ಟಿನ ಬಗ್ಗೆ ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರ ವಿಶ್ಲೇಷಿಸಿ ಬರೆದಿದ್ದು ಅದು ಈ ಕೆಳಗಿನಂತಿದೆ.
ಕರ್ನಾಟಕದಲ್ಲಿ ಹೆಚ್ಚುವರಿ ಉಪ ಮುಖ್ಯಮಂತ್ರಿ (DCM) ಸ್ಥಾನಗಳಿಗೆ ಸಂಬಂಧಿಸಿದ ವಿವಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjuna Kharge) ಸ್ಪಷ್ಟನೆ ನೀಡಿದ ನಂತರವೂ ತಣ್ಣಗಾಗಿಲ್ಲ.ಪರಸ್ಪರ ಹೇಳಿಕೆಗಳು ಇನ್ನೂ ಮುಂದುವರಿದಿವೆ. ಡಿಸಿಎಂ ಹುದ್ದೆಯ ಆಕಾಂಕ್ಷಿಗಳನ್ನು ಆತಂಕದ ಸ್ಥಿತಿಯಲ್ಲಿ ಇರಿಸುವ ಬದಲು ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಹೊಸ ಡಿಸಿಎಂ ಹುದ್ದೆಗಳ ಸೃಷ್ಟಿ ಸಾಧ್ಯವೇ ಅಥವಾ ಇಲ್ಲವೇ ಎಂದು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಸ್ಪಷ್ಟಪಡಿಸುವ ಅಗತ್ಯವಿದೆ.
ಈಗಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು ವಿಶೇಷ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಅವರೊಬ್ಬ ಯುದ್ಧಕಾಲದ ಕಮ್ಯಾಂಡರ್ ಆಗಿದ್ದರು. ಆ ಪಾತ್ರವನ್ನು ಅವರು ಪರಿಣಾಮಕಾರಿಯಾಗಿಯೇ ನಿರ್ವಹಿಸಿದರು. ಪಕ್ಷದ ಸಂಘಟನೆಗೆ ಹೊಸ ಉತ್ಸಾಹವನ್ನು ತುಂಬಿ ಚುನಾವಣೆಯಲ್ಲಿ ಗೆಲವಿನತ್ತ ಮುನ್ನಡೆಸಿದರು. ಪಕ್ಷದ ಅಧ್ಯಕ್ಷರಾಗಿ ರಾಜ್ಯದಲ್ಲಿ ಬಹುತೇಕ ಸಂದರ್ಭಗಳಲ್ಲಿ ಅನುಸರಿಸಿರುವ ಸಂಪ್ರದಾಯ ಮತ್ತು ಪರಂಪರೆಯಂತೆ ಅವರೇ ಮುಖ್ಯಮಂತ್ರಿಗಳಾಗಿ ಸ್ವಾಭಾವಿಕವಾಗಿ ಆಯ್ಕೆಯಾಗಬೇಕಿತ್ತು.ಆದರೆ ಚುನಾವಣೆ ನಂತರ ಏನು ನಡೆಯಿತು ಎನ್ನುವುದು ಎಲ್ಲರಿಗೂ ಗೊತ್ತು.
ಇದನ್ನೂ ಓದಿ: 3 ಡಿಸಿಎಂ ಡಿಶುಂ ಡಿಶುಂಗೆ ಕೊನೆಗೂ ಬಿತ್ತು ಫುಲ್ ಸ್ಟಾಪ್: ಎಲ್ಲಾ ಗೊಂದಲಗಳಿಗೆ ಸುರ್ಜೆವಾಲ ತೆರೆ
ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ್ ಹೀಗೆ ಇಬ್ಬರು ನಾಯಕರೂ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಆರಂಭಿಸಿದಾಗ ಅದು ದೊಡ್ಡ ಬಿಕ್ಕಟ್ಟಿನ ಸ್ವರೂಪವನ್ನು ಪಡೆದುಕೊಂಡಿತು.ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ನಿಗದಿಯಾಗಿದ್ದ ಪ್ರಮಾಣ ವಚನ ಸಮಾರಂಭವನ್ನು ಒಂದು ದಿನ ಮುಂದೂಡಬೇಕಾದ ಮುಜುಗರದ ಸನ್ನಿವೇಶವನ್ನು ಕೂಡಾ ಪಕ್ಷ ಎದುರಿಸಬೇಕಾಯಿತು. ಅಂತಿಮವಾಗಿ ಶಿವಕುಮಾರ್ ದೆಹಲಿ ವರಿಷ್ಠರ ಸಲಹೆ ಮೇರೆಗೆ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಿಂದ ಹಿಂದಕ್ಕೆ ಸರಿದುಕೊಂಡರು. ಅವರ ಈ ತ್ಯಾಗಕ್ಕೆ ಪ್ರತಿ ಫಲವಾಗಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಸ್ಥಾನಮಾನವನ್ನು ಕಾಪಾಡುವ ದೃಷ್ಟಿಯಿಂದ ಅವರನ್ನು ಉಪ ಮುಖ್ಯಮಂತ್ರಿಯಾಗಿ ಮಾಡಲಾಯಿತು .ಅಂದರೆ ಅವರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಒಂದೇ ಡಿಸಿಎಂ ಹುದ್ದೆಯನ್ನು ಸೃಷ್ಟಿಸಲಾಯಿತು.
ಶಿವಕುಮಾರ್ ಒಬ್ಬ ಸಾಮಾನ್ಯ ಮಂತ್ರಿ ಅಥವಾ ಶಾಸಕರಲ್ಲ.ಅವರನ್ನು “ಮುಖ್ಯಮಂತ್ರಿ ಹುದ್ದೆಗಾಗಿ ಕಾಯುತ್ತಿರುವ ನಾಯಕ” ಎಂದೇ ಎಲ್ಲರೂ ಭಾವಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೆಚ್ಚುವರಿ ಡಿಸಿಎಂಗಳನ್ನು ಸೃಷ್ಟಿಸುವುದು ಅವರ ಸ್ಥಾನಮಾನ ಮತ್ತು ಅಧಿಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಒಂದು ವೇಳೆ ಲೋಕ ಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕೆಂದರೂ ಡಿ.ಕೆ.ಶಿವಕುಮಾರ್ ಅವರ ಈ ವಿಶೇಷ ಪ್ರಕರಣ ಅಡ್ಡಿಯಾಗುತ್ತಿದೆ.
ಬಹಳ ಹಿಂದೆ ಮುಖ್ಯಮಂತ್ರಿ ಸ್ಥಾನದಿಂದ ಎಸ್.ಬಂಗಾರಪ್ಪನವರು ನಿರ್ಗಮಿಸಿದ ನಂತರ ಆ ಸ್ಥಾನವನ್ನು ತುಂಬಲು ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು.ಅವರೇ ನೂತನ ಮುಖ್ಯಮಂತ್ರಿ ಎನ್ನುವುದು ಬಹುತೇಕ ಜನರು ನಿರೀಕ್ಷಿಸಿದ್ದರು. ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆಗಾಗಿ ಸಭೆ ಸೇರುತ್ತಿದ್ದಂತೆ ಇತ್ತ ಕೃಷ್ಣ ಅವರ ನಿವಾಸವನ್ನು ಶಿಷ್ಟಾಚಾರ ಮತ್ತು ಭದ್ರತಾ ಪಡೆಗಳು ತಮ್ಮ ಸುಪರ್ದಿಗೆ ಪಡೆದಿದ್ದವು. ಮುಖ್ಯಮಂತ್ರಿಯವರ ಕಾರಿನ ಬೆಂಗಾವಲು ಪಡೆಯೂ ಕೃಷ್ಣ ಅವರ ನಿವಾಸವನ್ನು ತಲುಪಿತ್ತು. ಆದರೆ ವಿಶಿಷ್ಟ ರಾಜಕೀಯ ಒತ್ತಡದಿಂದಾಗಿ ವೀರಪ್ಪ ಮೊಯ್ಲಿ ನೂತನ ಮುಖ್ಯಮಂತ್ರಿಯಾಗಿ ಬಿಟ್ಟರು.ಇದರಿಂದ ಕೆರಳಿದ ಕೃಷ್ಣ ಅವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆಗ ವರಿಷ್ಠರು ಕೃಷ್ಣ ಅವರು ಉಪ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳುವಂತೆ ಮನವೊಲಿಸಬೇಕಾಯಿತು.
ಕೃಷ್ಣ ಅವರು ರಾಜ್ಯದ ಮೊದಲ ಉಪ ಮುಖ್ಯಮಂತ್ರಿ.ಆದರೆ ಸಂವಿಧಾನದಲ್ಲಿ “ಉಪ ಮುಖ್ಯಮಂತ್ರಿ”ಎನ್ನುವ ಸ್ಥಾನಮಾನವೇ ಇಲ್ಲ.ಹಾಗೆ ನೋಡಿದರೆ ಅವರು ಇತರೆ ಮಂತ್ರಿಗಳಿಗೆ ಸರಿ ಸಮಾನರು.ಆದರೆ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರು ಉಪ ಮುಖ್ಯಮಂತ್ರಿಯಾಗಿರುವ ಎಸ್.ಎಂ.ಕೃಷ್ಣ ಅವರ ಘನತೆ,ಗೌರವ ಮತ್ತು ಸ್ಥಾನಮಾನವನ್ನು ಕಾಪಾಡಲು ಎಲ್ಲಾ ರೀತಿಯ ಎಚ್ಚರಿಕೆ ವಹಿಸಿದ್ದರು.ಉದಾಹರಣೆಗೆ ನೂತನ ಉಪ ಮುಖ್ಯಮಂತ್ರಿಯವರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆ. ಎ.ಎಸ್ .ಬದಲು ಐ .ಎ .ಎಸ್ .ಅಧಿಕಾರಿಯನ್ನು ನೇಮಿಸಿಕೊಳ್ಳಲು ಅನುಮೋದನೆ ನೀಡಿದ್ದರು.
ಅದೇ ರೀತಿ ಈಗಿನ ರಾಜಕೀಯ ಸನ್ನಿವೇಶದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆಯೇ ತಮ್ಮ ಡೆಪ್ಯೂಟಿಯಾಗಿರುವ ಡಿ.ಕೆ.ಶಿವಕುಮಾರ್ ಅವರ ಸ್ಥಾನಮಾನದ ರಕ್ಷಣೆಯ ಹೊಣೆಯಿದೆ.ಆದರೆ ಸಿದ್ದರಾಮಯ್ಯನವರ ಕೆಲವು ಬೆಂಬಲಿಗ ಸಚಿವರು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ನಿರಂತರವಾಗಿ ಪಟ್ಟು ಹಿಡಿದಿದ್ದರೂ ಅವರು ಜಾಣ ಮೌನವನ್ನೇ ತಾಳಿದ್ದಾರೆ.ಅವರ ಮೌನ ನಿಗೂಢವಾಗಿದೆ.ಎರಡನೇ ಬಾರಿಗೆ ಭಾರೀ ಜನಮನ್ನಣೆಯೊಂದಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರದ್ದು ಈಗ ಮಾಗಿದ ವ್ಯಕ್ತಿತ್ವ.ಅವರು ಅಗ್ಗದ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಜನರು ಭಾವಿಸುವಂತೆ ಆಗಬಾರದು. ಆದ್ದರಿಂದ ಅವರು ಕೂಡಲೇ ತಮ್ಮ ಮೌನವನ್ನು ಮುರಿದು ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿರುವ ಸಚಿವರಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಬೇಕೆಂದು ಜನರು ನಿರೀಕ್ಷಿಸಿದರೆ ಅದು ಸಹಜವೇ ಆಗಿದೆ. ಒಂದು ವೇಳೆ ಹೆಚ್ಚುವರಿ ಡಿಸಿಎಂ ಹುದ್ದೆಗಳು ಸೃಷ್ಟಿಯಾದರೆ ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ?ಎನ್ನುವುದು ಮುಂದಿನ ಕುತೂಹಲ.
ಲೇಖನ: ಸಿ.ರುದ್ರಪ್ಪ
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Tue, 16 January 24