ಬೆಂಗಳೂರು, ಅಕ್ಟೋಬರ್ 06: ಈಗಾಗಲೇ ಹಾಲು, ಅಡುಗೆ ಎಣ್ಣೆ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆಗಳಲ್ಲಿ ಏರಿಕೆ ಆಗಿದೆ. ಇದರ ಮಧ್ಯೆ ಇದೀಗ ಟೊಮೆಟೊ (Tomato) ಬೆಲೆ ಏರಿಕೆಯಾಗುತ್ತಿದ್ದು, ಬೆಲೆ ಕೇಳಿ ಗ್ರಾಹಕರು ಶಾಕ್ಗೆ ಒಳಗಾಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮೊದಲೇ ರೋಸಿ ಹೋಗಿದ್ದು, ಇದೀಗ ಟೊಮೆಟೊ ಬೆಲೆ ಏರಿಕೆಗೆ ಕಂಗಾಲಾಗಿದ್ದಾರೆ.
ಬೆಲೆ ಏರಿಕೆಯ ಬಿಸಿಯಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ. ಈ ಮಧ್ಯೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಹಬ್ಬಗಳಿಗೆ ಅನಿವಾರ್ಯವಾಗಿ ತರಕಾರಿಗಳನ್ನ ಖರೀದಿ ಮಾಡಲೇಬೇಕಾಗಿದೆ. ಹೀಗಾಗಿ ಇಂದು ತರಕಾರಿಗಳನ್ನ ಖರೀದಿ ಮಾಡಬೇಕು ಅಂತ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು ಟೊಮೆಟೊ ಬೆಲೆ ಕೇಳಿ ಸುಸ್ತಾಗಿ ಹೋಗಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ಡಿಮ್ಯಾಂಡ್ ಹೆಚ್ಚಿಸಿಕೊಂಡ ಕೆಂಪು ಸುಂದರಿ; ಕೋಲಾರದಲ್ಲಿ ಟೊಮೇಟೊ ಬೆಲೆ ದಿಢೀರ್ ಏರಿಕೆ
ಹೌದು. ಮಳೆಯ ಕಾರಣದಿಂದಾಗಿ ಟೊಮೆಟೊ ಬೆಲೆ ಮತ್ತೆ ಏರಿಯಾಗುತ್ತಿದ್ದು, 50 ರೂ. ಗಡಿ ಮುಟ್ಟಿದೆ. ಮಳೆಯ ಕಾರಣದಿಂದಾಗಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಾಗದ ಪರಿಣಾಮ ಬೆಲೆಯಲ್ಲಿ ಏರಿಕೆ ಆಗಿದೆ. ಅಂದಹಾಗೇ ಪ್ರತಿವರ್ಷ ಕೋಲಾರದಲ್ಲಿ ಟೊಮೆಟೊ ಬೇಡಿಕೆ ಇರುತ್ತಿತ್ತು. ಬೇಡಿಕೆಗೆ ತಕ್ಕಂತೆ ಬೆಲೆಯೂ ಇರ್ತಿತ್ತು. ಹಾಗಾಗಿ ಹೆಚ್ಚು ರೈತರು ಟೊಮೆಟೊ ಬೆಳೆಯುತ್ತಿದ್ದರು.
ಅಲ್ಲದೇ ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಮಂಡ್ಯ, ಮೈಸೂರು, ಚಳ್ಳಕೆರೆ ಕೆಲವು ಕಡೆ ಟೊಮೆಟೊ ಬೆಳೆಯುವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಈ ವರ್ಷದ ರೋಗ ಬಾಧೆ, ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದಾಗಿ ಇಳುವರಿ ಕುಸಿತವಾಗಿದೆ. ಅಲ್ಲದೇ ರೈತರು ಟೊಮೆಟೊ ಬದಲು ಬೇರೆ ಬೇರೆ ತರಕಾರಿಗಳನ್ನ ಬೆಳೆಯಲು ಮುಂದಾಗಿದ್ದಾರೆ. ಹೀಗಾಗಿ ಎಪಿಎಂಸಿ ಬರುವ ಟೊಮೆಟೊ ಬೆಲೆಯಲ್ಲಿ ಕುಸಿತವಾಗಿದೆ.
ಈ ಹಿಂದೆ ಎಪಿಎಂಸಿಗೆ ಒಂದು ದಿನಕ್ಕೆ 40 ಸಾವಿರ ಟೊಮೆಟೊ ಬಾಕ್ಸ್ಗಳು ಬರುತ್ತಿದ್ದವು. ಇದೀಗ 20 ಬಾಕ್ಸ್ ಗಳು ಮಾತ್ರ ಬರುತ್ತಿದ್ದು, ಸಗಟು ಬೆಲೆಯು ಜಾಸ್ತಿಯಾಗಿದೆ. ಅಲ್ಲದೇ ಸದ್ಯ ಕರ್ನಾಟಕಕ್ಕೆ 40 ರಷ್ಟು ಟೊಮೆಟೊ ಪೂರೈಕೆ ಕಡಿಮೆಯಾಗಿದ್ದು, ಬಾಂಬೆ, ಕೊಲ್ಕತ್ತಾ, ಗುಜರಾತ್ಗೆ ಹೆಚ್ಚು ಹೋಗುತ್ತಿದೆ. ಈ ಹಿಂದೆ ಮಹಾರಾಷ್ಟ್ರ, ನಾಸಿಕ್, ಕರಾಡ ಸೇರಿ ವಿವಿಧ ಭಾಗಗಳಿಂದ ಟೊಮೆಟೊ ಬರುತ್ತಿತ್ತು. ಆದರೆ ಈ ವರ್ಷ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದ ಪರಿಣಾಮ ಟೊಮೆಟೊ ಇಳುವರಿ ಕಡೆಮೆ ಇದೆ. ಹೀಗಾಗಿ ಟೊಮೆಟೊ ಬೆಲೆ ಏರಿಕೆಯಾಗಿದೆ ಅಂತ ಹೋಲ್ ಸೇಲ್ ವ್ಯಾಪಾರಸ್ಥರಾದ ಅಪ್ರಜ್ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನೂರರ ಗಡಿ ದಾಟಿದ ಟೊಮೆಟೊ ಬೆಲೆ, ಇನ್ನು ಮೂರು ತಿಂಗಳಲ್ಲಿ ಈರುಳ್ಳಿ ಬೆಲೆಯೂ ಏರಿಕೆ
ಇನ್ನು ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ 50 ರಿಂದ 60 ರೂ ಇದ್ರೆ, ಮನೆಯ ಸುತ್ತ- ಮುತ್ತಲಿನ ಅಂಗಡಿಗಳಲ್ಲಿ ಕೆಜಿ ಗೆ 70 ರಿಂದ 80 ರೂಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ದುಬಾರಿಯಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇದು ಗ್ರಾಹಕರಿಗೆ ತುಂಬ ಹೊಡೆತ ಬೀಳಲಿದೆ. ಟೊಮೆಟೊ ಇಲ್ಲದೇ ಯಾವ ಅಡುಗೆಯು ಆಗೋದಿಲ್ಲ. ಅನಿವಾರ್ಯವಾಗಿ ಬೆಲೆ ಜಾಸ್ತಿಯಾದರೂ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಹಕರಾದ ಕಮಲಾಕ್ಷಿ ಎಂಬುವವರು ಹೇಳುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.