ಕರ್ನಾಟಕದಲ್ಲಿ ರದ್ದಾಗುತ್ತಾ ಅನರ್ಹ ಬಿಪಿಎಲ್ ಕಾರ್ಡ್​? ಸ್ವಯಂ ಪ್ರೇರಿತವಾಗಿ ಎಪಿಎಲ್​​ಗೆ ಬರುವಂತೆ ಸಚಿವ ಮುನಿಯಪ್ಪ ಮನವಿ

ಕರ್ನಾಟಕದಲ್ಲಿ ಆಪರೇಷನ್ ಬಿಪಿಎಲ್ ಕಾರ್ಡ್ ಆರಂಭಗೊಂಡಿದ್ದು, ಲಕ್ಷಾಂತರ ಅನರ್ಹ ಕಾರ್ಡ್‌ಗಳನ್ನು ಪರಿಷ್ಕರಿಸಲಾಗುತ್ತಿದೆ. ಸಚಿವ ಕೆ.ಎಚ್. ಮುನಿಯಪ್ಪ ಅವರು 13 ಲಕ್ಷ ಅನರ್ಹ ಕಾರ್ಡ್‌ಗಳ ಬಗ್ಗೆ ಮಾಹಿತಿ ನೀಡಿದ್ದು, ಸ್ವಂತ ಮನೆ ಅಥವಾ ಕಾರು ಹೊಂದಿರುವವರು ಸ್ವಯಂಪ್ರೇರಿತವಾಗಿ ಬಿಪಿಎಲ್​​ನಿಂದ ಎಪಿಎಲ್​​ಗೆ ಬದಲಾಗುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​ 27: ಕರ್ನಾಟಕದಾದ್ಯಂತ ಈಗಾಗಲೇ ಆಪರೇಷನ್ ಬಿಪಿಎಲ್​ ಕಾರ್ಡ್ (BPL Ration Cards) ಶುರುವಾಗಿದೆ. ಕೇಂದ್ರ ಸರ್ಕಾರ ನೀಡಿದ ಅಂಕಿ ಅಂಶ ಮತ್ತು ರಾಜ್ಯ ಸರ್ಕಾರವೇ ಕಲೆ ಹಾಕಿರುವ ಅಂಕಿ ಅಂಶಗಳನ್ನ ಇಟ್ಕೊಂಡು ಕಾರ್ಡ್​ಗಳನ್ನ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಆಹಾರ ಸಚಿವ ಮುನಿಯಪ್ಪ (KH Muniyappa) ಯಾರ್ಯಾರಿಗೆ ಕಾರ್ಡ್ ಬೇಡ ಅಂತಾ ಹೇಳಿದ್ದಾರೆ.

ಸ್ವಯಂ ಪ್ರೇರಿತವಾಗಿ BPL ನಿಂದ APLಗೆ ಬರುವಂತೆ ಸಚಿವರ ಮನವಿ!

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬಿಪಿಎಲ್ ಕಾರ್ಡ್​ ಪರಿಷ್ಕರಣೆ ಸಂಬಂಧ ಸಚಿವ ಮುನಿಯಪ್ಪ ಉಡುಪಿಯಲ್ಲಿ ಶುಕ್ರವಾರ ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರವೇ ಕರ್ನಾಟಕದಲ್ಲಿ 7 ಲಕ್ಷ 70 ಸಾವಿರ ಅನರ್ಹ ಬಿಪಿಎಲ್​ ಕಾರ್ಡ್ ಬಗ್ಗೆ ಮಾಹಿತಿ ನೀಡಿದ್ದು, ನಾವೂ ಸಹ ಒಟ್ಟು 13 ಲಕ್ಷ ಅನರ್ಹ ಬಿಪಿಎಲ್​ ಕಾರ್ಡ್​ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ ಎಂದು ಹೇಳಿದರು. ಅಷ್ಟೇ ಅಲ್ಲ ಅಕ್ಟೋಬರ್ ಮೊದಲ ವಾರದಲ್ಲಿ ಆಪರೇಷನ್ ಬಿಪಿಎಲ್​ ಕಾರ್ಡ್ ಸಂಬಂಧ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಆಹಾರ ಇಲಾಖೆ ಅಧಿಕಾರಿಗಳ ಯಡವಟ್ಟು: ಬಿಪಿಎಲ್​​ನಿಂದ ಎಪಿಎಲ್​ ಕಾರ್ಡ್​ಗೆ ಕನ್ವರ್ಟ್, ರೇಷನ್ ಖರೀದಿಸಲಾಗದೇ ಜನ್ರು ಗೋಳಾಟ

ಇನ್ನು ಇದೇ ವೇಳೆ ಸ್ವಂತ ಮನೆ ಕಟ್ಟಿದವರಿಗೆ, ಸ್ವಂತ ಕಾರು ಹೊಂದಿದವರಿಗೆ ಬಿಪಿಎಲ್​ ಕಾರ್ಡ್ ಅವಶ್ಯಕತೆ ಇಲ್ಲ. ಸ್ವಯಂಪ್ರೇರಿತರಾಗಿ ಬಿಪಿಎಲ್​​ನಿಂದ ಎಪಿಎಲ್​​ಗೆ ಬನ್ನಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅನರ್ಹ ಬಿಪಿಎಲ್ ಕಾರ್ಡ್​ದಾರರಿಗೆ ಶಾಕ್ ನೀಡಲಿದೆ ಆಹಾರ ಇಲಾಖೆ: 12 ಲಕ್ಷ ಪಡಿತರ ಚೀಟಿ ರದ್ದತಿಗೆ ತೆರೆಮರೆಯ ಸಿದ್ಧತೆ

ರಾಜ್ಯದಲ್ಲಿ ಶೇಕಡಾ 75 ರಷ್ಟು ಜನ ಬಿಪಿಎಲ್​ ಕಾರ್ಡ್​ ವ್ಯಾಪ್ತಿಗೆ ಬರುತ್ತಾರೆ. ಅಂದರೆ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಬಿಪಿಎಲ್​ ಕಾರ್ಡ್​ ಇದ್ದು, ಒಟ್ಟು 4 ಕೋಟಿ 50 ಲಕ್ಷ ಜನರು ಫಲಾನುಭವಿಗಳಾಗಿದ್ದಾರೆ. ಅನರ್ಹರ ಕಾರ್ಡ್ ರದ್ದು ಮಾಡಿ ಅರ್ಹರಿಗೆ ಯೋಜನೆಗಳನ್ನ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.