ವಿಶ್ವಪ್ರಸಿದ್ಧ ನೇತ್ರತಜ್ಞ ಗರಿಮೆ ಪಡೆದ ಮಹಾನ್ ವ್ಯಕ್ತಿ ಡಾ.ಚಂದ್ರಪ್ಪಾ ರೇಷ್ಮಿ ಅವರ ರೋಚಕ ಕಥನ

| Updated By: Rakesh Nayak Manchi

Updated on: Aug 13, 2023 | 8:21 PM

ವಿಶ್ವದ ಮೂರನೇ ಉತ್ತಮ ಕಣ್ಣಿನ ಡಾಕ್ಟರ್ ಎಂಬ ಖ್ಯಾತಿ ಪಡೆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಬುರಗಿ ಜಿಲ್ಲೆಯ ಡಾ.ಚಂದ್ರಪ್ಪಾ ರೇಷ್ಮಿ ಅವರು ನಿನ್ನೆ ನಿಧನ ಹೊಂದಿದ್ದಾರೆ. ಸಾವಿರಾರು ಜನರಿಗೆ ದೃಷ್ಟಿ ನೀಡಿದ್ದ ಜಗತ್ತಿನ ಸುಪ್ರಸಿದ್ದ ನೇತ್ರತಜ್ಞ ರೇಷ್ಮಿ ಅವರ ರೋಚಕ ಕಥನ ಇಲ್ಲಿದೆ.

ವಿಶ್ವಪ್ರಸಿದ್ಧ ನೇತ್ರತಜ್ಞ ಗರಿಮೆ ಪಡೆದ ಮಹಾನ್ ವ್ಯಕ್ತಿ ಡಾ.ಚಂದ್ರಪ್ಪಾ ರೇಷ್ಮಿ ಅವರ ರೋಚಕ ಕಥನ
ಡಾ.ಚಂದ್ರಪ್ಪ ರೇಷ್ಮಿ
Follow us on

ಕಲಬುರಗಿ ಜಿಲ್ಲೆಯಲ್ಲಿ ಹುಟ್ಟಿ ಜಗತ್ತಿನ ತುಂಬಾಲ್ಲಾ ಪ್ರಸಿದ್ಧಿ ಪಡೆದಿದ್ದ ವೈದ್ಯ ಅವರು. ಅವರ ಬಳಿ ಕಣ್ಣಿನ ಚಿಕಿತ್ಸೆಗಾಗಿ ಜೆಆರ್​​ಡಿ ಟಾಟಾರಂತವರು ಕಾಯುತ್ತಿದ್ದರು. ಸಾವಿರಾರು ಜನರಿಗೆ ದೃಷ್ಟಿ ನೀಡಿದ್ದ ಜಗತ್ತಿನ ಸುಪ್ರಸಿದ್ದ ನೇತ್ರ ತಜ್ಞ. ಅವರ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಕಣ್ಣಿನ ಲೆನ್ಸ್ ಅಳವಡಿಸಿದ ಭಾರತೀಯ ಮೊದಲ ನೇತ್ರತಜ್ಞ ಅನ್ನೋ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂತಹ ಸುಪ್ರಸಿದ್ಧ ನೇತ್ರತಜ್ಞ ಡಾ.ಚಂದ್ರಪ್ಪಾ ರೇಷ್ಮಿ (Dr. Chandrappa Reshmi) ಇನ್ನು ನೆನಪು ಮಾತ್ರ.

ಸಾವಿರಾರು ಜನರಿಗೆ ಬಾಳಿಗೆ ಬೆಳಕು ನೀಡಿ, ವಿಶ್ವದ ಶ್ರೇಷ್ಟ ನೇತ್ರ ತಜ್ಞ ಎಂಬ ಕೀರ್ತಿಯನ್ನು ಪಡೆದ ಕೆಲವೇ ಕೆಲವು ವೈದ್ಯರಲ್ಲಿ ರಾಜ್ಯದ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಡಾ. ಚಂದ್ರಪ್ಪಾ ರೇಷ್ಮಿ ಕೂಡಾ ಒಬ್ಬರು ಅನ್ನೋದು ನಮ್ಮ ಹೆಮ್ಮೆ. ಚಿತ್ತಾಪುರವು ರಾಜ್ಯದ ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪ್ರದೇಶ. ಇಂದಿಗೂ ಶಿಕ್ಷಣ, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಿಂದುಳಿದ ತಾಲೂಕು ಅನ್ನುವ ಹಣೆಪಟ್ಟಿಯನ್ನೇ ಹೊಂದಿರುವ ಪ್ರದೇಶ.

ಇಂತಹದೇ ಮಣ್ಣಲ್ಲಿ ಹುಟ್ಟಿ, ಕನ್ನಡ, ಉರ್ದು ಮಾಧ್ಯಮದಲ್ಲಿ ಓದಿ, ಇಡೀ ಅಮೆರಿಕ ಸೇರಿದಂತೆ ಜಗತ್ತಿನ ಅನೇಕ ಮಹನೀಯರು, ತಮಗಾಗಿ ಕಾಯುವಂತಹ ಸಾಧನೆ ಮಾಡಿದ್ದು ಡಾ. ಚಂದ್ರಪ್ಪ ರೇಷ್ಮಿ. ಇವರು ನಿನ್ನೆ ಮಧ್ಯಾಹ್ನ ಕಲಬುರಗಿ ನಗರದಲ್ಲಿ ವಯೋಸಹಜ ಖಾಯಿಲೆಯಿಂದ ಬಳಲಿ ಮೃತಪಟ್ಟಿದ್ದಾರೆ. ತೊಂಬತ್ತು ವರ್ಷದ ಡಾ. ಚಂದ್ರಪ್ಪ ರೇಷ್ಮಿ ಅವರ ಅಂತ್ಯಕ್ರಿಯೆ ಇಂದು ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಅವರ ತೋಟದಲ್ಲಿ ನೆರವೇರಿಸಲಾಯಿತು.

ಕಲಬುರಗಿ ನಗರದ ಜಯನಗರದಲ್ಲಿರುವ ತಮ್ಮ ಮನೆಯಲ್ಲಿ ಮೃತಪಟ್ಟ ಡಾ. ಚಂದ್ರಪ್ಪ ಅವರ ಪ್ರಾರ್ಥಿವ ಶರೀರವನ್ನು ಕಳೆದ ರಾತ್ರಿಯೇ ಅವರ ಹುಟ್ಟೂರು ಚಿತ್ತಾಪುರ ಪಟ್ಟಣಕ್ಕೆ ತಗೆದುಕೊಂಡು ಹೋಗಲಾಗಿತ್ತು. ಡಾ. ಚಂದ್ರಪ್ಪ ಅವರು ಹುಟ್ಟಿ ಬೆಳೆದ ಮನೆಯಲ್ಲಿ ಪ್ರಾರ್ಥಿವ ಶರೀರದ ದರ್ಶನಕ್ಕೆ ಸಂಜೆ ಮೂರು ಗಂಟೆವರಗೆ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಂತರ ತೆರೆದ ವಾಹನದಲ್ಲಿ ಮನೆಯಿಂದ ತೋಟದವರಗೆ ಮೆರವಣಿಗೆ ಮೂಲಕ ತಂದು, ಸಂಜೆ ಐದು ಗಂಟೆಗೆ, ಅವರ ತೋಟದಲ್ಲಿ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೇಯನ್ನು ನೆರವೇರಿಸಲಾಯಿತು. ಬಂದು ಬಾಂಧವರು, ಸಾರ್ವಜನಿಕರು ಅಂತ್ಯಕ್ರಿಯೇಯಲ್ಲಿ ಬಾಗಿಯಾಗಿ, ತಮ್ಮೂರಿನ ಹೆಮ್ಮೆಯ ವೈದ್ಯನಿಗೆ ಕಂಬನಿ ಮೀಡಿದರು.

ಇದನ್ನೂ ಓದಿ: ಮಳೆಗಾಲದಲ್ಲಿ ಹರಡುವ ಕಣ್ಣಿನ ಸಮಸ್ಯೆಗೆ ಮನೆಮದ್ದು ಇಲ್ಲಿದೆ

ಡಾ. ಚಂದ್ರಪ್ಪ ರೇಷ್ಮಿ ಅವರ ಸಾಧನೆಯನ್ನು ಕೇವಲ ಭಾರತ ಮಾತ್ರವಲ್ಲ, ಇಡಿ ವಿಶ್ವವೇ ಕೊಂಡಾಡುತ್ತಿದೆ. ಇಂತಹ ಸಾಧನೆಯನ್ನು ಮಾಡಿರುವ ಡಾ.ಚಂದ್ರಪ್ಪ ವಿಶ್ವದ ಪ್ರಮುಖ ನೇತ್ರ ತಜ್ಞರಲ್ಲಿ ಒಬ್ಬರು ಅನ್ನೋ ಕೀರ್ತಿಯನ್ನು ಪಡೆದಿದ್ದರು.

ಚಿತ್ತಾಪುರ ಪಟ್ಣಣದಲ್ಲಿ 1934ರ ಜನವರಿ 20 ರಂದು ಡಾ. ಚಂದ್ರಪ್ಪನವರು ಹುಟ್ಟಿದ್ದರು. ಕೃಷಿ ಕುಟುಂಬದ ಸಿದ್ರಾಮಪ್ಪ ಮತ್ತು ವೀರಮ್ಮ ದಂಪತಿಯ ಎರಡನೇ ಮಗನಾಗಿದ್ದ ಇವರು ಚಿತ್ತಾಪುರ ಪಟ್ಟಣದಲ್ಲಿಯೇ ಕನ್ನಡ, ಉರ್ದು ಮಾಧ್ಯದಲ್ಲಿ ತಮ್ಮ ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣ ಪಡೆದಿದ್ದರು. ನಂತರ ಕಲಬುರಗಿ ನಗರದಲ್ಲಿ ಪಿಯುಸಿ ಶಿಕ್ಷಣಕ್ಕೆ ಸೇರಿಕೊಂಡಿದ್ದರು.

ಈ ಸಂದರ್ಭದಲ್ಲೇ ಅವರಿಗೆ ಟಿಬಿ, ಕಾಮಾಲೆ ಖಾಯಿಲೆಗಳು ವಕ್ಕರಿಸಿದ್ದವು. ಹೀಗಾಗಿ ಶಿಕ್ಷಣವನ್ನು ಅರ್ದಕ್ಕೆ ಬಿಟ್ಟು, ಐದು ವರ್ಷಗಳ ಕಾಲ ತಮ್ಮೂರಿನಲ್ಲಿರುವ ತೋಟದಲ್ಲಿ ಹೋಗಿ, ದೇವರ ಪೂಜೆ ಸೇರಿದಂತೆ ತೋಟದ ಕೆಲಸ ಮಾಡಿಕೊಂಡಿದ್ದರು. ಇನ್ನು ನನ್ನ ಶೈಕ್ಷಣಿಕ ಜೀವನ ಮುಗಿತು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರಾಯ್ತು ಅಂತ ಸುಮ್ಮನಾಗಿದ್ದರು.

ತೆಲೆೆಂಗಾಣದ ವಿಕಾರಬಾದ್​ನಲ್ಲಿ ಚಿಕಿತ್ಸೆ ಪಡೆದರೂ ಖಾಯಿಲೆ ಬೇಗ ವಾಸಿಯಾಗದೇ ಇದ್ದಿದ್ದರಿಂದ, ಸಾಕಷ್ಟು ತೊಂದರೆ ಅನುಭವಿಸಿದ್ದರು. ಆದರೆ ಸನ್ಯಾಸಿಯೊಬ್ಬರು ನೀವು ದೊಡ್ಡ ವ್ಯಕ್ತಿಯಾಗುತ್ತೀರಿ ಅಂತ ಹೇಳಿದ್ದರು. ತಾಯಿಯ ಪ್ರೋತ್ಸಾಹವೂ ದೊರೆತ ಹಿನ್ನೆಲೆ ರೇಷ್ಮಿ ಅವರು ಮತ್ತೆ ಕಾಲೇಜಿಗೆ ಹಾಜರಾಗಿ ಪರೀಕ್ಷೆ ಬರೆದು ಪಾಸಾಗಿದ್ದರು.

ಇದೇ ಸಂದರ್ಭದಲ್ಲಿ ಎಂಬಿಬಿಎಸ್ ಮಾಡಲು ಹೈದ್ರಾಬಾದ್​ನ ಮೆಡಿಕಲ್ ಕಾಲೇಜಿಗೆ ಅರ್ಜಿ ಹಾಕಿದ್ದರು. ಆದರೆ ನೀವು ಕರ್ನಾಟಕದವರು ಅಂತ ಅಲ್ಲಿನ ಸರ್ಕಾರ ಮೆಡಿಕಲ್ ಸೀಟ್ ನೀಡಿರಲಿಲ್ಲವಂತೆ. ಹೀಗಾಗಿ 1957 ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಕಾಲೇಜಿಗೆ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗಿದ್ದರು. ಅಂದು 1300 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದಂತೆ. ಆದರೆ ಆಯ್ಕೆಯಾಗಿದ್ದು ಮಾತ್ರ ಕೆಲವೇ ವಿದ್ಯಾರ್ಥಿಗಳು. ಅಂತಹವರಲ್ಲಿ ಡಾ.ಚಂದ್ರಪ್ಪ ಕೂಡಾ ಒಬ್ಬರು. ಇನ್ನು 1962 ರಲ್ಲಿ ಎಂಬಿಬಿಎಸ್ ಪದವಿಯ ಪರೀಕ್ಷೆಯಲ್ಲಿ ಇಡೀ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದರು.

ತಾಯಿಯ ಕಣ್ಣಿನ ಆಪರೇಷನ್ ರೇಷ್ಮಿ ಜೀವನದ ಟರ್ನಿಂಗ್ ಪಾಯಿಂಟ್

ರೇಷ್ಮಿ ಅವರು ತನ್ನ ತಾಯಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಅವರ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರಂತೆ. ಆದರೆ ಆಗ ಶಶ್ತ್ರಚಿಕಿತ್ಸೆ ನಂತರ ಹಲವು ಸಮಯದ ವರೆಗೆ ಕಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡು ಇರಬೇಕಾಗಿತ್ತು. ಜೊತೆಗೆ ಅನೇಕ ಸಮಸ್ಯೆಗಳು ಕೂಡಾ ಇದ್ದವಂತೆ. ಹೀಗಾಗಿ ತಾನು ಕಣ್ಣಿನ ವೈದ್ಯನಾಗಬೇಕು. ಅನೇಕರ ಬಾಳಿಗೆ ದೃಷ್ಟಿ ನೀಡುವ ಕೆಲಸಮಾಡಬೇಕು. ನೇತ್ರ ಶಸ್ತ್ರಚಿಕಿತ್ಸೆಯಲ್ಲಿ ಸುಧಾರಣೆಗಳನ್ನು ತರಬೇಕು ಅನ್ನೋ ಉದ್ದೇಶದಿಂದ ಕಣ್ಣಿನ ವೈದ್ಯನಾಗಲು ಚಂದ್ರಪ್ಪ ರೇಷ್ಮಿ ನಿರ್ಧಾರ ಮಾಡಿದ್ದರಂತೆ.

ಅದರಂತೆ, ಅಮೆರಿಕದಲ್ಲಿರುವ ಏಜುಕೇಶನ್ ಕೌನ್ಸಿಲ್ ಪಾರ್ ಪಾರಿನ್ ಮೆಡಿಕಲ್ ಗ್ರ್ಯಾಜುಯೇಟ್ಸ್ ಪರೀಕ್ಷೆಗೆ ಹಾಜರಾಗಿ, ಅದರಲ್ಲಿ ತೇರ್ಗಡೆಯಾಗಿದ್ದರಂತೆ. 1964 ರಲ್ಲಿ ಅಮೆರಿಕದ ಲೋರಿಯನ್ ಓಹಿಯೋ ಸಂತ್ ಜೋಸೆಪ್ ಆಸ್ಪತ್ರೆಯಲ್ಲಿ ಒಂದು ವರ್ಷದ ಇಂಟರ್ನಸಿಪ್ ಮಾಡಿದ್ದರಂತೆ. ನಂತರ ಅಮೆರಿಕದಲ್ಲಿ ವಿಶ್ವವಿಖ್ಯಾತ ನೇತ್ರ ತಜ್ಞ ವೈದ್ಯ ಡಾ. ಮಿಲ್ಸ್ ಗಾಲಿನ ಬಳಿ ತರಬೇತಿ ಪಡೆದು ಪಿಟ್ಸಬರ್ಗ್ ಸೇರಿದಂತೆ ಅನೇಕ ಕಡೆ ನೇತ್ರ ತಜ್ಞರಾಗಿ ಕೆಲಸ ಆರಂಭಿಸಿದ್ದರು. ಅನೇಕ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೂಡಾ ಕೆಲಸ ನಿರ್ವಹಿಸಿದ್ದರು.

ಕಣ್ಣಿನ ಲೆನ್ಸ್ ಅಳವಡಿಸಿದ ಮೊದಲ ಭಾರತೀಯ ನೇತ್ರ ತಜ್ಞ ಅನ್ನೋ ಖ್ಯಾತಿಯನ್ನು ಡಾ. ಚಂದ್ರಪ್ಪ ರೇಷ್ಮಿ ಪಡೆದಿದ್ದಾರೆ. ಜೊತೆಗೆ ಕಣ್ಣಿನ ಕಾರ್ನಿಯಾ ಮತ್ತು ಹೊರ ರೋಗಗಳ ಬಗ್ಗೆ ನುರಿತ ವೈದ್ಯ ಅನ್ನೋ ಹೆಗ್ಗಳಿಕೆ ಪಡೆದ ಮೊದಲ ಇಂಡೋ ಅಮೆರಿಕನ್ ಇವರಾಗಿದ್ದರು. ಪ್ರತಿನಿತ್ಯ ನೂರಾರು ಜನರಿಗೆ ಕಣ್ಣಿನ ಆಪರೇಶನ್ ಮಾಡುತ್ತಿದ್ದ ಡಾ. ಚಂದ್ರಪ್ಪ, ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಜನರಿಗೆ ದೃಷ್ಟಿ ನೀಡಿದ್ದಾರೆ.

ಡಾ. ಚಂದ್ರಪ್ಪರಿಂದ ಚಿಕಿತ್ಸೆ ಪಡೆದಿದ್ದ ಟಾಟಾ

ಡಾ.ಚಂದ್ರಪ್ಪ ಅಮೆರಿಕ್ ಸೇರಿದಂತೆ ಜಗತ್ತಿನ ಅನೇಕ ದೇಶದ ಮಹನೀಯರಿಗೆ, ಸುಪ್ರಸಿದ್ಧ ವ್ಯಕ್ತಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನಮ್ಮ ದೇಶದ ಅನೇಕ ಮಹನೀಯರಿಗೆ ಕೂಡಾ ಡಾ.ಚಂದ್ರಪ್ಪ ಕಣ್ಣಿನ ಶಸ್ತ್ರ ಚಿಕಿತ್ಸೆ ಪಡೆದಿದ್ದಾರೆ. ಅನೇಕರು ಅವರ ಬಳಿ ಚಿಕಿತ್ಸೆಗಾಗಿ ಕಾದು, ಅವರ ಬಳಿಯೇ ಚಿಕಿತ್ಸೆ ಪಡೆದಿದ್ದಾರಂತೆ. ಅದರಲ್ಲಿ ಜೆಆರ್​ಡಿ ಟಾಟಾ ಕೂಡಾ ಒಬ್ಬರು.

ಹೌದು, 1992 ರಲ್ಲಿ ಲಂಡನ್​ನಲ್ಲಿ ಡಾ. ಜೆಆರ್​ಡಿ ಟಾಟಾ ಅವರು ತಮ್ಮ ಬಲಗಣ್ಣಿನ ಚಿಕಿತ್ಸೆ ಮಾಡಿಸಿಕೊಂಡಿದ್ದರಂತೆ. ಆದರು ಕೂಡಾ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲವಂತೆ. ಹೀಗಾಗಿ ಭಾರತಕ್ಕೆ ಡಾ. ಚಂದ್ರಪ್ಪ ರೇಷ್ಮಿ ಅವರು ಬಂದಿರುವುದು ತಿಳಿದಿದ್ದ ಟಾಟಾ ಅವರ ಕುಟುಂಬದ ವೈದ್ಯರು, ಡಾ. ಚಂದ್ರಪ್ಪ ಅವರನ್ನು ಸಂಪರ್ಕಿಸಿ ಜೆಆರ್​​ಡಿ ಟಾಟಾ ಅವರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಅಂತ ಮನವಿ ಮಾಡಿದ್ದರಂತೆ.

ಭಾರತದ ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರೊಂದಿಗೆ ಡಾ.ಚಂದ್ರಪ್ಪಾ ರೇಷ್ಮಿ

ಭಾರತದ ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರೊಂದಿಗೆ ಡಾ.ಚಂದ್ರಪ್ಪಾ ರೇಷ್ಮಿ

ಆದರೆ ನನಗೆ ಸಮಯವಿಲ್ಲ, ನಾನು ಕುಟುಂಬದ ಜೊತೆಗೆ ಸಮಯ ಕಳೆಯಲು ಭಾರತಕ್ಕೆ ಬಂದಿರುವುದಾಗಿ ಹೇಳಿದ್ದರಂತೆ. ಆದರೆ ಕಲಬುರಗಿ ನಗರದಲ್ಲಿ ವಾಸ್ತವ್ಯದಲ್ಲಿದ್ದಾಗ, ಟಿವಿಯಲ್ಲಿ ಜೆಆರ್​ಡಿ ಟಾಟಾ ಅವರ ವ್ಯಕ್ತಿತ್ವ ಮತ್ತು ಅವರ ಸಾಧನೆ ಬಗ್ಗೆ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತಂತೆ. ಅದನ್ನು ನೋಡಿದ್ದ ಡಾ. ಚಂದ್ರಪ್ಪ, ಮತ್ತೆ ಮುಂಬೈಗೆ ಹೋಗಿ ಜೆಆರ್​ಡಿ ಟಾಟಾ ಅವರ ಎಡ ಕಣ್ಣಿನ ಆಪರೇಷನ್ ಮಾಡಿದ್ದರಂತೆ.

ಇದನ್ನೂ ಓದಿ: ಇನ್ನೇನು ಅಂತ್ಯಕ್ರಿಯೆ ನಡೆಸಬೇಕು ಅನ್ನುವಷ್ಟರಲ್ಲಿ ಕಣ್ಣು ತೆರೆದ ಬಿಜೆಪಿ ಮುಖಂಡ

ಮತ್ತೆ ಮೊದಲಿನಂತೆ ತಮ್ಮ ದೃಷ್ಟಿ ಬಂದಿದ್ದರಿಂದ, ತುಂಬಾ ಖುಷಿ ಪಟ್ಟ ಟಾಟಾ ಅವರು, ಡಾ.ಚಂದ್ರಪ್ಪ ಅವರನ್ನು ತಮ್ಮ ಮನೆಗೆ ಕರೆಸಿ ಸತ್ಕಾರ ಮಾಡಿದ್ದರಂತೆ. ಈ ಬಗ್ಗೆ 1992 ರ ಎಪ್ರಿಲ್ 30 ರಂದು ಡಾ. ಚಂದ್ರಪ್ಪ ಅವರಿಗೆ ಪತ್ರ ಬರೆದಿದ್ದ ಜೆಆರ್​​ಡಿ ಟಾಟಾ ಅವರು, ಇದೀಗ ನಾನು ಓದಲು ಸಾಧ್ಯವಾಗುತ್ತಿದೆ. ಕನ್ನಡಕವಿಲ್ಲದೇ ಓದಲು ಸಾಧ್ಯವಾಗುತ್ತಿದೆ. ನಿಮಗೆ ಧನ್ಯವಾದಗಳು ಅಂತ ಉಲ್ಲೇಖಿಸದ್ದರು.

ಇನ್ನು ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೇಲಸಿಂಗ್, ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ವಿಜಯಭಾಸ್ಕರ್ ರೆಡ್ಡಿ, ದಿ. ನಿಜಲಿಂಗಪ್ಪ ಸೇರಿದಂತೆ ದೇಶದ ಅನೇಕ ಮಹನೀಯರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿರುವ ಹಿರಿಮೆ ಡಾ. ಚಂದ್ರಪ್ಪ ರೇಷ್ಮಿ ಅವರಿಗೆ ಸಲ್ಲುತ್ತದೆ. ದೇಶದ ಅನೇಕ ಮಹನೀಯರ ಆರೋಗ್ಯ ಕಮಿಟಿಯಲ್ಲಿ ಡಾ.ಚಂದ್ರಪ್ಪ ಇದ್ದು, ಆರೋಗ್ಯ ವಿಷಯದ ಬಗ್ಗೆ ಅನೇಕರಿಗೆ ಸಲಹೆ ಸೂಚನೆಗಳನ್ನು ನೀಡಿದ್ದರು.

ಶಾಖಾಹಾರಿಯಾಗಿದ್ದ ಡಾ.ಚಂದ್ರಪ್ಪ ರೇಷ್ಮಿ

1964 ರಲ್ಲಿಯೇ ಅಮೆರಿಕಕ್ಕೆ ಹೋಗಿದ್ದ ಡಾ. ಚಂದ್ರಪ್ಪ ರೇಷ್ಮಿ, ಇತ್ತೀಚಿನವರಗೆ ಅಲ್ಲಿಯೇ ಇದ್ದರು. ಇನ್ನು ಅಮೆರಿಕದಲ್ಲಿಯೇ ಪತ್ರಕರ್ತೆಯಾಗಿರುವ ಕ್ಯಾಥಲಿನ್ ಎಂಬವರನ್ನು ವಿವಾಹವಾಗಿದ್ದ ಡಾ.ಚಂದ್ರಪ್ಪ ಅನೇಕ ದಶಕಗಳ ಕಾಲ ಪಿಟ್ಸಬರ್ಗ್​​ನಲ್ಲಿಯೇ ಇದ್ದರು. ಅಲ್ಲಿ ಇದ್ದರೂ ಅವರು ಶಾಖಾಹಾರಿಯಾಗಿಯೇ ಇದ್ದರಂತೆ. ಜೊತೆಗೆ ಇಷ್ಟಲಿಂಗ ಪೂಜೆಯನ್ನು ಬಿಟ್ಟಿರಲಿಲ್ಲವಂತೆ.

ಲಿಂಗಾಯತ ಕುಟುಂಬದಲ್ಲಿ ಹುಟ್ಟಿ ಬೆಳದಿದ್ದ ಡಾ.ಚಂದ್ರಪ್ಪ ಯಾವುದೇ ದೇಶಕ್ಕೆ ಹೋದರು ಕೂಡಾ ತಮ್ಮ ಆಚಾರ ವಿಚಾರಗಳನ್ನು ಮಾತ್ರ ಮರೆತಿರಲಿಲ್ಲವಂತೆ. ಎಪ್ಪತ್ತರ ದಶಕದಲ್ಲಿ ಡಾ. ಚಂದ್ರಪ್ಪ ಅಮೆರಿಕದಲ್ಲಿ ಸುಪ್ರಸಿದ್ಧ ನೇತ್ರ ತಜ್ಞರಾಗಿ ಹೆಸರು ಮಾಡಿದ್ದರಂತೆ. ಆಗಲೇ ಪ್ರತಿದಿನದ ಅವರ ಆಧಾಯ ಮೂವತ್ತೈದು ಸಾವಿರ ರೂಪಾಯಿ ಇತ್ತಂತೆ. ಹಗಲಿರಳು ಕೆಲಸ ಮಾಡುತ್ತಿದ್ದ ಡಾ.ಚಂದ್ರಪ್ಪ ಪ್ರತಿನಿತ್ಯ ನೂರಾರು ಜನರಿಗೆ ಚಿಕಿತ್ಸೆ ನೀಡುತ್ತಿದ್ದರಂತೆ.

ಹುಟ್ಟುರಿನ ವ್ಯಾಮೋಹದಿಂದ ಮರಳಿ ಭಾರತಕ್ಕೆ ಬಂದ ಡಾ.ಚಂದ್ರಪ್ಪ

ಅಮೆರಿಕಾ ಸೇರಿದಂತೆ ಜಗತ್ತಿನಾದ್ಯಂತ ಡಾ.ಚಂದ್ರಪ್ಪ ರೇಷ್ಮಿ ಅವರಿಗೆ ಹೆಸರು ಇತ್ತು. ವಿಶ್ವದ ಮೂರನೇ ಅತ್ಯಂತ ಶ್ರೇಷ್ಟ ತಜ್ಞ ನೇತ್ರ ವೈದ್ಯ ಅನ್ನೋ ಕೀರ್ತಿಯನ್ನು ಡಾ.ಚಂದ್ರಪ್ಪಾ ಪಡೆದಿದ್ದರು. ಹಣ, ಹೆಸರು ಇದ್ದರು ಕೂಡಾ ತಮ್ಮ ಕೊನೆಯ ದಿನಗಳನ್ನು ತಮ್ಮೂರಲ್ಲಿಯೇ ಕಳೆಯಬೇಕು ಅಂತ ಅಂದುಕೊಂಡಿದ್ದ ಡಾ.ಚಂದ್ರಪ್ಪ ರೇಷ್ಮಿ, ಕಳೆದ ಏಳು ವರ್ಷಗಳ ಹಿಂದೆ ಶಾಸ್ವತವಾಗಿ ಅಮೆರಿಕವನ್ನು ಬಿಟ್ಟು ಬಂದು ಕಲಬುರಗಿ ನಗರದಲ್ಲಿರುವ ಜಯನಗರದಲ್ಲಿನ ತಮ್ಮ ಮನೆಯಲ್ಲಿಯೇ ಇದ್ದರು. ಆದರೆ ಆಗಸ್ಟ್ 12 ರಂದು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅಮೆರಿಕ್ ಮತ್ತು ವಿಶ್ವದ ಅನೇಕ ಪ್ರಶಸ್ತಿಗಳು ಡಾ. ಚಂದ್ರಪ್ಪ ರೇಷ್ಮಿ ಅವರ ಮುಡಿಗೇರಿದ್ದವು.

ಡಾ.ಚಂದ್ರಪ್ಪ ರೇಷ್ಮಿ ಅವರಿಗೆ ಲಭಿಸಿದ ಪ್ರಶಸ್ತಿಗಳು

ಡಾ.ಚಂದ್ರಪ್ಪ ರೇಷ್ಮಿ ಅವರಿಗೆ ಲಭಿಸಿದ ಪ್ರಶಸ್ತಿಗಳು

ಚಂದ್ರಪ್ಪ ರೇಷ್ಮಿ ಅವರು ಅನೇಕ ಕಣ್ಣಿನ ಶಿಬಿರ ಆಯೋಜಿಸಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತ್ತು ಸುತ್ತಮುತ್ತಲಿನ ಅನೇಕರಿಗೆ ಉಚಿತವಾಗಿ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿದ್ದರಂತೆ. ಕಲಬುರಗಿಯಲ್ಲಿ ಚಿಕಿತ್ಸೆ ಸಾಧ್ಯವಾಗದೇ ಇದ್ದರೆ, ಹೈದ್ರಾಬಾದ್​ಗೆ ಕರೆದುಕೊಂಡು ಹೋಗಿ, ಅಲ್ಲಿ ಸ್ವಂತ ಖರ್ಚಿನಲ್ಲಿ ಅನೇಕರಿಗೆ ನೇತ್ರ ಚಿಕಿತ್ಸೆ ಮಾಡಿದ್ದಾರಂತೆ.

ತಮ್ಮೂರು, ತಮ್ಮ ಜನ ಅನ್ನೋ ಸಾಕಷ್ಟು ಹೆಮ್ಮೆ ಡಾ. ಚಂದ್ರಪ್ಪ ಅವರಿಗೆ ಇತ್ತಂತೆ. ವಿಶ್ವದ ಪ್ರಮುಖ ಮೂವರು ನೇತ್ರತಜ್ಞರಲ್ಲಿ ಡಾ. ಚಂದ್ರಪ್ಪ ಅವರು ಕೂಡಾ ಆಗಿದ್ದರು ಅನ್ನೋದು ಕಲಬುರಗಿ ಮತ್ತು ಕರ್ನಾಟಕದ ಜನರಿಗೆ ಹೆಮ್ಮೆಯ ವಿಷಯವಾಗಿದೆ. ಅಂತಹ ಮಹಾನ್ ನೇತ್ರತಜ್ಞ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಅವರು ಬದುಕಿನುದ್ದಕ್ಕು ಮಾಡಿರುವ ಕೆಲಸಗಳು ಮಾತ್ರ ಚಿರಸ್ಥಾಯಿಯಾಗಿ ಉಳದಿವೆ.

ಡಾ.ಚಂದ್ರಪ್ಪ ರೇಷ್ಮಿ, ಜಗತ್ತಿನ ಶ್ರೇಷ್ಟ ನೇತ್ರ ತಜ್ಞ ಅಂತ ಹೆಸರು ಮಾಡಿದ್ದರು. ಹಿಂದುಳಿದ ಪ್ರದೇಶದಲ್ಲಿ ಹುಟ್ಟಿ ಇಂತಹ ಸಾಧನೆ ಮಾಡಿದ್ದು ನಮಗೆಲ್ಲರಿಗೂ ಹೆಮ್ಮಯ ವಿಚಾರ. ವಿದೇಶದಲ್ಲಿದ್ದರು ಕೂಡಾ ಭಾರತೀಯರು, ಕಲಬುರಗಿ ಜನರು ಅಂದರೆ ಅವರಿಗೆ ಹೆಚ್ಚಿನ ಪ್ರೀತಿಯಿತ್ತು. ಸಾವಿರಾರು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಅವರ ಸಾಧನೆ ಯುವ ಪೀಳಿಗೆಗೆ ಆದರ್ಶ ಎಂದು ಚಂದ್ರಪ್ಪಾ ಅವರ ಬಾಲ್ಯ ಸ್ನೇಹಿತರೂ ಆಗಿರುವ ಮಾಜಿ ಶಾಸಕ ಮತ್ತು ವಿಧಾನಪರಿಷತ್ ಮಾಜಿ ಸಭಾಪತಿ ಚಂದ್ರಶೇಖರ ರೆಡ್ಡಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ