ಒಳ ಮೀಸಲಾತಿ ಜಾರಿ ಸಂದರ್ಭದಲ್ಲಿ ಒಗ್ಗಟ್ಟಾಗಿರಲು ದಲಿತ ಸಚಿವ, ಶಾಸಕರ ಸಭೆಯಲ್ಲಿ ನಿರ್ಧಾರ

ಕರ್ನಾಟಕದ ಒಳ ಮೀಸಲಾತಿ ವಿಚಾರದಲ್ಲಿ ನಾಗಮೋಹನ್ ದಾಸ್ ಆಯೋಗದ ವರದಿಗಾಗಿ ದಲಿತ ಸಚಿವರು ಕಾಯುತ್ತಿದ್ದಾರೆ. ಆಯೋಗ ಶೀಘ್ರದಲ್ಲಿ ವರದಿ ಸಲ್ಲಿಸಲಿದೆ. ವರದಿಯ ನಂತರ ಯಾವುದೇ ವಿರೋಧಾಭಾಸಗಳನ್ನು ತಪ್ಪಿಸಲು ಮತ್ತು ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಲು ದಲಿತ ಸಚಿವರು ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ಒಳ ಮೀಸಲಾತಿ ಜಾರಿ ಸಂದರ್ಭದಲ್ಲಿ ಒಗ್ಗಟ್ಟಾಗಿರಲು ದಲಿತ ಸಚಿವ, ಶಾಸಕರ ಸಭೆಯಲ್ಲಿ ನಿರ್ಧಾರ
ದಲಿತ ನಾಯಕರ ಸಭೆ
Updated By: ವಿವೇಕ ಬಿರಾದಾರ

Updated on: Aug 02, 2025 | 10:04 PM

ಬೆಂಗಳೂರು, ಆಗಸ್ಟ್​ 02: ನಾಗಮೋಹನ್ ದಾಸ್ ಆಯೋಗ (Nagamohan Das Commission) ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೆ ಎಂಬ ಮಾಹಿತಿ ಇದೆ. ಆ ವರದಿ ನೀಡುವಾಗ ನಾವು ಒಟ್ಟಾಗಿರಬೇಕೆಂಬ ಬಗ್ಗೆ ಚರ್ಚೆಯಾಗಿದೆ. ವಿವಿಧ ಸಮುದಾಯಗಳು, ಪರಿಶಿಷ್ಟ ಜಾತಿಯ ಒಳಪಂಗಡಗಳು ನಾವೆಲ್ಲರೂ ಒಟ್ಟಾಗಿ ಹೋಗಬೇಕೆಂದು ಚರ್ಚೆ ಮಾಡಿದ್ದೇವೆ. ಏನೇ ವ್ಯತ್ಯಾಸ ಇದ್ರು ಸರಿದೂಗಿಸಿಕೊಂಡು ಹೋಗುತ್ತೇವೆ. ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್​ (G Parameshwara) ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಶನಿವಾರ (ಆ.02) ದಲಿತ ಸಚಿವರು, ಶಾಸಕರ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಒಗ್ಗಟಾಗಿ ಇಲ್ಲದಿದ್ದರೇ ಮತ್ತೆ ಒಳ ಮೀಸಲಾತಿ ಜಾರಿ ವಿಳಂಬವಾಗುತ್ತದೆ. ಒಳ ಮೀಸಲಾತಿ ಸಮಸ್ಯೆ ಮತ್ತಷ್ಟು ಮುಂದಕ್ಕೆ ಹೋಗುತ್ತದೆ. ಒಳ ಮೀಸಲಾತಿ ಜಾರಿ ಮತ್ತೆ ಮುಂದಕ್ಕೆ ಹೋಗಬಾರದೆಂದು ನಾವೆಲ್ಲರೂ ಒಟ್ಟಾಗಿ ಸಭೆ ಸೇರಿ ತೀರ್ಮಾನಕ್ಕೆ ಬಂದಿದ್ದೇವೆ. ವರದಿಯಲ್ಲಿ ಏನೇ ಬರಲಿ ನಾವೆಲ್ಲರೂ ಆ ಕುರಿತು ಚರ್ಚಿಸುತ್ತೇವೆ. ಒಟ್ಟಾಗಿ ಹೋಗಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ನಮ್ಮ ಸಮುದಾಯದಲ್ಲಿ 101 ಒಳ ಜಾತಿಗಳಿವೆ. ಅವರಿಗೆಲ್ಲರಿಗೂ ಸಾಮಾಜಿಕವಾಗಿ ನ್ಯಾಯ ಸಿಗಬೇಕು. ವರದಿ ಬಂದ ಮೇಲೆ ನಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ಎಲ್ಲರಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ಎಲ್ಲರ ಸಹಮತವೂ ಇದೆ. ಸಹಮತ ಇರಬೇಕು ಎಂದೇ ಚರ್ಚೆ ಮಾಡಿದ್ದೇವೆ. ಸಹಮತಿಯನ್ನು ಎಲ್ಲರೂ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಸಂಯಮ, ಸಮನ್ವಯತೆಯಿಂದ ಒಟ್ಟಾಗಿ ಹೋಗೋಣ: ಮಹದೇವಪ್ಪ

ನಾಗಮೋಹನ್ ದಾಸ್ ಸಮಿತಿ ತನ್ನ ಕೆಲಸವನ್ನ ಮಾಡಿದೆ. ಆ.4ರಂದು ಮುಖ್ಯಮಂತ್ರಿಗಳಿಗೆ ಒಳ ಮೀಸಲಾತಿ ಕುರಿತ ವರದಿ ಸಲ್ಲಿಕೆ ಮಾಡಲಾಗುತ್ತದೆ. ನಮಗೆ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಗೃಹಸಚಿವರು ನಮ್ಮನ್ನು ಕರೆದು ಚರ್ಚೆ ಮಾಡಿದ್ದಾರೆ. ಸಮಾನತೆಯಿಂದ ಸಮನ್ವಯತೆಯಿಂದ ಇರಲು ತಿಳಿಸಿದ್ದಾರೆ. ಸಂಯಮ, ಸಮನ್ವಯತೆಯಿಂದ ಒಟ್ಟಾಗಿ ಹೋಗೋಣ. ಎಲ್ಲ ದಲಿತ 101 ಜಾತಿಗಳಲ್ಲಿ ಸಾಮರಸ್ಯ ಬಿತ್ತೋಣ ಅಂತ ಚರ್ಚಿಸಿದ್ದೇವೆ ಎಂದು ಸಚಿವ ಹೆಚ್​ಸಿ ಮಹದೇವಪ್ಪ ಹೇಳಿದರು.

ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ: ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಿದ್ದರಾಮಯ್ಯಗೆ ಶಾಸಕರ ಒತ್ತಾಯ

ಒಗ್ಗಟ್ಟಾಗಿದ್ದು ಬಗೆಹರಿಸಿಕೊಳ್ಳಬೇಕೆಂಬುದು ಮೂಲ ಉದ್ದೇಶ: ಮುನಿಯಪ್ಪ

ಮುಂದಾಲೋಚನೆ ಮಾಡಿ ಗೃಹ ಸಚಿವರು ಸಭೆಗೆ ಕರೆದಿದ್ದರು. ನಾವೆಲ್ಲ ಮಂತ್ರಿಗಳು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಕಡಿಮೆ ಜನಸಂಖ್ಯೆ ಸಮುದಾಯಕ್ಕೂ ನ್ಯಾಯ ಕೊಡಬೇಕು. ವರದಿ ಬಂದಮೇಲೆ ಮತ್ತೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುತ್ತೇವೆ. ಒಗ್ಗಟ್ಟಾಗಿದ್ದು ಬಗೆಹರಿಸಿಕೊಳ್ಳಬೇಕೆಂಬುದು ಮೂಲ ಉದ್ದೇಶವಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Sat, 2 August 25