ಇನ್ವೆಸ್ಟ್ ಕರ್ನಾಟಕ-2022: ರಾಜ್ಯಕ್ಕೆ ಹರಿದು ಬಂತು 9.82 ಲಕ್ಷ ಕೋಟಿ; 6 ಲಕ್ಷ ಉದ್ಯೋಗ ಸೃಷ್ಟಿ

| Updated By: ಗಣಪತಿ ಶರ್ಮ

Updated on: Nov 05, 2022 | 3:17 PM

ಇನ್ವೆಸ್ಟ್ ಕರ್ನಾಟಕ-2022ಯಿಂದ ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಸಚಿವ ಮುರಗೇಶ್​ ನಿರಾಣಿ ಹೇಳಿದ್ದಾರೆ

ಇನ್ವೆಸ್ಟ್ ಕರ್ನಾಟಕ-2022: ರಾಜ್ಯಕ್ಕೆ ಹರಿದು ಬಂತು 9.82 ಲಕ್ಷ ಕೋಟಿ; 6 ಲಕ್ಷ ಉದ್ಯೋಗ ಸೃಷ್ಟಿ
ಮುರುಗೇಶ್ ನಿರಾಣಿ
Follow us on

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಹೂಡಿಕೆದಾರರ ಸಮಾವೇಶ (Invest Karnataka 2022) ‘ಇನ್ವೆಸ್ಟ್ ಕರ್ನಾಟಕ-2022’ ಶುಕ್ರವಾರ (ನ.4) ಸಂಜೆ ಸಂಪನ್ನಗೊಂಡಿತು. ಈ ಸಮಾವೇಶದಿಂದ ರಾಜ್ಯದಲ್ಲಿ ಅಂದಾಜು 9.82 ಲಕ್ಷ ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ತಿಳಿಸಿದರು. ಬೆಂಗಳೂರಿನಲ್ಲಿ ಇಂದು (ನ.5) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹೂಡಿಕೆಯಿಂದ ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.

ಮುಂದುವರೆದು ಸಿಂಗಲ್ ವಿಂಡೋದಲ್ಲಿ 2,83,415 ಕೋಟಿ ಒಡಂಬಡಿಕೆಯಾಗಿದೆ. ಸರ್ಕಾರದ ಜೊತೆ ಒಟ್ಟು 5,41,369 ಕೋಟಿ ಒಡಂಬಡಿಕೆಯಾಗಿದೆ. ಇನ್ವೆಸ್ಟ್ ಕರ್ನಾಟಕದಲ್ಲೇ 1,56,000 ಕೋಟಿ ಘೋಷಣೆಯಾಗಿದೆ. ರಾಜ್ಯದಲ್ಲಿ ಒಟ್ಟು 9,81,784 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಶೇ 90 ರಷ್ಟು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ಇಂಧನ ಕ್ಷೇತ್ರದಲ್ಲಿ ಶೇ 38, ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಶೇ 33, ಮೂಲಸೌಕರ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಶೇ 9 ಹೂಡಿಕೆಯಾಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ 5 ಏರ್‌ಪೋರ್ಟ್​​ ನಿರ್ಮಾಣ ಆಗಲಿದೆ

ರಾಜ್ಯದಲ್ಲಿ ಹೊಸದಾಗಿ 5 ಏರ್‌ಪೋರ್ಟ್​​ ನಿರ್ಮಾಣ ಆಗಲಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗಿವೆ. ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತೀನ್ ಗಡ್ಕರಿ ಹೆಚ್ಚು ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಬಂದರುಗಳ ಅಭಿವೃದ್ಧಿಗೂ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಬೇಕಾದ ಜಾಗವನ್ನು ರೈತರಿಂದ ಖರೀದಿ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಹೂಡಿಕೆಗೆ ಬೇಕಾದ ಎಲ್ಲಾ ವಾತಾವರಣ ಇದೆ. ಮುಂದಿನ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.ಬಂಡವಾಳ ಹೂಡಿಕೆ ಒಪ್ಪಂದ‌ ನಾವೇ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:40 pm, Sat, 5 November 22