ಅಕಾಲಿಕ ಮಳೆಯಿಂದ ಮೇವಿನ ಕೊರತೆ; ಗೋಶಾಲೆಗಳಲ್ಲಿ ಗೋವುಗಳ ಸಾಕಾಣಿಕೆ ಜಟಿಲ
ಅಕಾಲಿಕ ಮಳೆಯಿಂದ ರೈತ ಬೆಳೆದ ಬೆಳೆ ನಾಶವಾಗಿದ್ದರಿಂದ ಜಾನುವಾರುಗಳಿಗೂ ಮೇವು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಗೋ ಶಾಲೆಗಳಲ್ಲಿರುವ ಗೋವುಗಳಿಗೆ ಮೇವು ಸಿಗುತ್ತಿಲ್ಲ. ಸರ್ಕಾರದಿಂದಲೂ ಸೂಕ್ತ ನೆರವು ಸಿಗುತ್ತಿಲ್ಲ.
ಕಾರವಾರ: ಗೋಹತ್ಯೆ ನಿಷೇಧ ನಿಯಮ ತಂದ ರಾಜ್ಯ ಸರ್ಕಾರ ಗೋವುಗಳ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಅದೇ ಸರ್ಕಾರ ಗೋಶಾಲೆಗಳ ನಿರ್ವಹಣೆಗೆ ಅನುದಾನ ನೀಡುವಲ್ಲಿ ಕಠಿಣ ನಿಯಮಗಳನ್ನ ಜಾರಿಗೊಳಿಸಿರುವುದು ಗೋಶಾಲೆಗಳ ನಿರ್ವಹಣೆ ಮಾಡುವವರು ಅದನ್ನ ಮುನ್ನಡೆಸಿಕೊಂಡು ಹೋಗಲು ಪರದಾಡಬೇಕಾದ ಸ್ಥಿತಿ ಎದುರಾಗಿದೆ. ಇದರಲ್ಲಿ ಉತ್ತರ ಕನ್ನಡವೂ ಸೇರಿಕೊಂಡಿದೆ. ಜಿಲ್ಲೆಯಲ್ಲಿ ಗೋವು ಪ್ರೀಯರು ಗೋವುಗಳನ್ನ ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ ಈ ವರ್ಷದ ಅಕಾಲಿಕ ಮಳೆಯಿಂದಾಗಿ ಒಣ ಮೇವು ಸಿಗುತ್ತಿಲ್ಲ, ಜೊತೆವೆ ಮೇವಿನ ದರವು ಹೆಚ್ಚಾಗಿದೆ. ಹೀಗಿರುವಾಗ ನೂರಾರು ಗೋವುಗಳನ್ನ ಸಾಕುವವರಿಗೆ ಅದರ ನಿರ್ವಹಣೆ ಮಾಡುವುದೆ ಕಷ್ಟವಾಗಿದೆ. ಅದರ ಜೊತೆಗೆ ಸರ್ಕಾರ ಕೂಡ ಸೂಕ್ತ ಪರಿಹಾರ ನೀಡಿ ಸ್ಪಂದಿಸುತ್ತಿಲ್ಲ ಎನ್ನುವುದು ಗೋ ಪ್ರೀಯರ ಅಳಲು ತೋಡಿಕೊಳ್ಳುತ್ತಿದ್ದಾರೆ.
ಇನ್ನು ಗೋಶಾಲೆಯಲ್ಲಿ ಪ್ರತಿನಿತ್ಯ ಒಂದು ಗೋವಿನ ನಿರ್ವಹಣೆಗೆ 75 ರೂಪಾಯಿ ತಗುಲುತ್ತದೆ. ಆದರೆ ಸರ್ಕಾರ ಪ್ರತಿ ಗೋವಿಗೆ ಕೇವಲ 17 ರೂಪಾಯಿ ಮಾತ್ರ ನಿಗಧಿಪಡಿಸಿದ್ದು, ಅದನ್ನ ಪಡೆದುಕೊಳ್ಳಲು ಸರ್ಕಾರ ಯಾವುದೇ ಜಾನುವಾರುಗಳನ್ನ ತಂದುಬಿಟ್ಟರೂ ಅವುಗಳನ್ನ ಸಾಕಬೇಕು ಎನ್ನುವ ಮುಚ್ಚಳಿಕೆಯನ್ನ ಗೋಶಾಲೆಗಳು ಬರೆದುಕೊಡಬೇಕು. ಇದು ಗೋಶಾಲೆಗಳಿಗೆ ಅನುಕೂಲಕ್ಕಿಂತ ಹೊರೆಯಾಗುವುದೇ ಹೆಚ್ಚು. ಈ ಕಾರಣದಿಂದ ಸರ್ಕಾರದ ಅನುದಾನದ ನಿರೀಕ್ಷೆಯನ್ನೇ ಗೋಶಾಲೆಗಳು ಇಟ್ಟಿವೆ.
ಇನ್ನೂ ಈ ಬಗ್ಗೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕೇಳಿದರೆ ಗೋಶಾಲೆಗಳ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಈ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರದಿಂದಲೇ ಗೋ ಶಾಲೆಗಳನ್ನು ಸ್ಥಾಪಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಒಟ್ಟಾರೇ ಗೋವುಗಳನ್ನ ರಕ್ಷಣೆ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಸರ್ಕಾರ ಅನುದಾನ ನೀಡುವುದಕ್ಕೆ ಮಾತ್ರ ಕಟ್ಟುನಿಟ್ಟಿನ ನಿಯಮಗಳನ್ನ ವಿಧಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಇನ್ನಾದರೂ ಎಚ್ಚೆತ್ತು ನಿಯಮಗಳನ್ನ ಸಡಿಲಿಸಿ ಸಂಕಷ್ಟದಲ್ಲಿರುವ ರಾಜ್ಯದ ಗೋಶಾಲೆಗಳ ನೆರವಿಗೆ ಮುಂದಾಗಬೇಕಿದೆ.
ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sat, 5 November 22