ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ, ಬೈಕ್ ಸವಾರ ಬಿಬಿಎಂಪಿ ನೌಕರ ಕೊನೆಯುಸಿರು
ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರನ್ನ ಸ್ಥಳೀಯ ಪೊಲೀಸರು ಸೆಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಬೆಂಗಳೂರು: ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ಬೈಕ್ ಸವಾರಿ ಮಾಡುತ್ತಿದ್ದ ಬಿಬಿಎಂಪಿ ನೌಕರನಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರನ್ನ ಸ್ಥಳೀಯ ಪೊಲೀಸರು ಸೆಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಿದ್ದರು. ಬಸ್ ತಿರುಪತಿಯಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು. ಬಿಬಿಎಂಪಿ ನೌಕರರ ವಿ. ಶ್ರೀಧರ್ ಮೃತ ವ್ಯಕ್ತಿ. ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಟ್ಟೆ ಒಗೆಯುವಾಗ ಆಕಸ್ಮಿಕವಾಗಿ ವರುಣ ನಾಲೆಗೆ ಬಿದ್ದು ದಂಪತಿ ಸಾವು
ಮೈಸೂರು ತಾಲೂಕಿನ ಶಾದನಹಳ್ಳಿ ಬಳಿ ಆಕಸ್ಮಿಕವಾಗಿ ವರುಣ ನಾಲೆಗೆ ಬಿದ್ದು ದಂಪತಿ ಸಾವನ್ನಪ್ಪಿದ್ದಾರೆ. ಪತ್ನಿ ಕವಿತಾ ಬಟ್ಟೆ ಒಗೆಯುವಾಗ ಆಕಸ್ಮಿಕವಾಗಿ ನಾಲೆಗೆ ಬಿದ್ದರು. ಪತ್ನಿಯನ್ನ ರಕ್ಷಿಸಲು ಹೋದ ಶಿವಕುಮಾರ್ (29 ) ಸಹ ಜಲಸಮಾಧಿಯಾಗಿದ್ದಾರೆ. ಕಾಮನಕೆರೆಹುಂಡಿ ಬಳಿ ವರುಣ ನಾಲೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆ ಮುಗಿದ ಬಳಿಕ ಆಟವಾಡಲು ತೆರಳಿದ್ದ ಬಾಲಕರಿಬ್ಬರು ನೀರುಪಾಲು:
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೊರವಲಯದಲ್ಲಿರುವ ಎಸಳೆ ಕೆರೆ ಬಳಿ ಆಟವಾಡಲು ತೆರಳಿದ್ದ ಬಾಲಕರಿಬ್ಬರು ನೀರುಪಾಲಾಗಿದ್ದಾರೆ. ಶಿರಸಿಯ ಕಸ್ತೂರಬಾ ನಗರದ ಅಹ್ಮದ್ ರಾಜಾ ಜನ್ನಿಗೇರಿ (14) ಮತ್ತು ಖಾಸೀಂ ರಿಯಾಜ್ ಪಾಳಾ(14) ನೀರುಪಾಲಾಗಿರುವ ಬಾಲಕರು. ಸಮೀಪದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕರಿಬ್ಬರೂ ಶಾಲೆ ಮುಗಿದ ಬಳಿಕ ಆಟವಾಡಲು ಕೆರೆ ಬಳಿ ತೆರಳಿದ್ದರು. ಶಿರಸಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 3:28 pm, Sat, 5 November 22