ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಹೂಡಿಕೆದಾರರ ಸಮಾವೇಶ (Invest Karnataka 2022) ‘ಇನ್ವೆಸ್ಟ್ ಕರ್ನಾಟಕ-2022’ ಶುಕ್ರವಾರ ಸಂಜೆ ಸಂಪನ್ನಗೊಂಡಿತು. ಈ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಬಂಡವಾಳ ಹರಿದುಬಂದಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ತಿಳಿಸಿದರು. ಇದರೊಂದಿಗೆ, ನಿರೀಕ್ಷೆಗಿಂತಲೂ ಅತಿಹೆಚ್ಚು ಮೊತ್ತದ ಹೂಡಿಕೆ ರಾಜ್ಯಕ್ಕೆ ಹರಿದುಬಂದಂತಾಗಿದೆ. ಸುಮಾರು 7 ಲಕ್ಷ ಕೋಟಿ ರೂ. ಬಂಡವಾಳ ಬರಬಹುದು ಎಂದು ಸಮಾವೇಶಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಂದಾಜಿಸಿದ್ದರು.
ನಿರೀಕ್ಷೆಗಿಂತ ದುಪ್ಪಟ್ಟು ಹೂಡಿಕೆ: ನಿರಾಣಿ
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವ ನಿರಾಣಿ, ನಿರೀಕ್ಷೆಗಿಂತ ದುಪ್ಪಟ್ಟು ಬಂಡವಾಳ ಹೂಡಿಕೆಯಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ ಎಂಬ ಬಗ್ಗೆ ಶನಿವಾರ ಮಾಹಿತಿ ನೀಡಲಿದ್ದೇವೆ. ಯಾವ ವಲಯಕ್ಕೆ ಎಷ್ಟು ಬಂಡವಾಳ ಅಂತ ಎಂಬ ಮಾಹಿತಿಯನ್ನೂ ನೀಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಶೇಕಡಾ 70ರಷ್ಟು ಹೂಡಿಕೆ
ರಾಜ್ಯದಲ್ಲಿ ಮಾಡಲಾಗಿರುವ ಒಟ್ಟು ಹೂಡಿಕೆ ಪೈಕಿ ಶೇಕಡಾ 70ರಷ್ಟು ಬೆಂಗಳೂರಿನಲ್ಲಿ ಮಾಡಲಾಗಿದೆ. ಮುಂದಿನ ಜಿಮ್ ಸಮಾವೇಶ 2025ರಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: Invest Karnataka 2022: ಕರ್ನಾಟಕದಲ್ಲಿ 7 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ: ಅದಾನಿ ಗ್ರೂಪ್
ಹೂಡಿಕೆ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದರು. ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಜಾಗತಿಕ ಉದ್ಯಮಿಗಳಲ್ಲಿ ಮನವಿ ಮಾಡಿದ್ದರು. ಅದಾನಿ ಸಮೂಹ, ಜೆಎಸ್ಡಬ್ಲ್ಯು ಸೇರಿದಂತೆ ಅನೇಕ ಕಂಪನಿಗಳು ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ರಾಜ್ಯದಲ್ಲಿ ಮುಂದಿನ 7 ವರ್ಷಗಳ ಅವಧಿಯಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಅದಾನಿ ಗ್ರೂಪ್ ಘೋಷಿಸಿದ್ದರೆ, 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಜೆಎಸ್ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಘೋಷಿಸಿದ್ದರು. ನಾವು 50 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತೇವೆ ಎಂದು ಸ್ಟರ್ಲೈಟ್ ಪವರ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪ್ರತೀಕ್ ಅಗರ್ವಾಲ್ ಘೋಷಿಸಿದ್ದರು. ಇಂಧನ ಕ್ಷೇತ್ರ ಹಾಗೂ ಹಸಿರು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಹೂಡಿಕೆ ಮಾಡುವುದಾಗಿ ಅವರು ತಿಳಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ