ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ‘ಇನ್ವೆಸ್ಟ್ ಕರ್ನಾಟಕ 2022 (Invest Karnataka 2022)’ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮೊದಲ ದಿನವಾದ ಬುಧವಾರ 3.61 ಲಕ್ಷ ಕೋಟಿ ರೂ. ಹೂಡಿಕೆಗೆ ಒಡಂಬಡಿಕೆ ಏರ್ಪಟ್ಟಿದೆ. ಗ್ರೀನ್ ಹೈಡ್ರೋಜನ್, ಗ್ರೀನ್ ಅಮೋನಿಯಂ, ಸೌರಶಕ್ತಿ, ಇಂಧನ ಕ್ಷೇತ್ರ, ಸೆಮಿಕಂಡಕ್ಟರ್ ವಲಯ, ಎಲೆಕ್ಟ್ರಾನಿಕ್ಸ್ ಹಾಗೂ ಉತ್ಪಾದನಾ ವಲಯಗಳ ಕೈಗಾರಿಕೋದ್ಯಮಿಗಳು ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಮೂಲಸೌಕರ್ಯ, ಕೈಗಾರಿಕೆ, ಲಾಜಿಸ್ಟಿಕ್ ವಲಯಗಳಲ್ಲಿ ಒಟ್ಟು 43,500 ಕೋಟಿ ರೂ. ಹೂಡಿಕೆಯ ಒಪ್ಪಂದಗಳು ಏರ್ಪಟ್ಟಿವೆ.
ರಾಜ್ಯದಲ್ಲಿ ಮುಂದಿನ ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಜೆಎಸ್ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಸಮಾವೇಶದ ಮೊದಲ ದಿನದ ಪೂರ್ವರ್ಧದಲ್ಲಿ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಮುಂದಿನ 7 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಅದಾನಿ ಗ್ರೂಪ್ ಕೂಡ ತಿಳಿಸಿದೆ. ಮಲ್ಟಿಪಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿ, ಆಹಾರ ಸಂಸ್ಕರಣೆ, ಇಂಧನ, ನವೀಕರಿಸಬಹುದಾದ ಇಂಧನ, ಸೌರ ಶಕ್ತಿ, ಜಲಸಾರಿಗೆ ಹಾಗೂ ಲಾಜಿಸ್ಟಿಕ್ ಕ್ಷೇತ್ರದಲ್ಲೂ ಹೂಡಿಕೆ ಮಾಡುವುದಾಗಿ ಕಂಪನಿಯ ಸಿಇಒ ಕರಣ್ ಅದಾನಿ ತಿಳಿಸಿದ್ದಾರೆ.
ಇದನ್ನೂ ಓದಿ: Invest Karnataka 2022: ಕರ್ನಾಟಕದಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ, ಸಜ್ಜನ್ ಜಿಂದಾಲ್ ಘೋಷಣೆ
ಈ ಮಧ್ಯೆ, 50 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಸ್ಟರ್ಲೈಟ್ ಪವರ್ ಕಂಪನಿ ತಿಳಿಸಿದೆ. ಇಂಧನ ಕ್ಷೇತ್ರ ಹಾಗೂ ಹಸಿರು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಹೂಡಿಕೆ ಮಾಡುವುದಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಅಗರ್ವಾಲ್ ಹೇಳಿದ್ದಾರೆ.
ಮೂರು ದಿನಗಳ ಕಾಲ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು. ಸಮಾವೇಶದಲ್ಲಿ ಭಾಗಿಯಾದ ವಿಶ್ವದ ಎಲ್ಲ ಮೂಲೆ ಮೂಲೆಗಳಿಂದ ಬಂದಿರುವ ಹೂಡಿಕೆದಾರರಿಗೂ ಸ್ವಾಗತ ಕೋರಿದ್ದ ಮೋದಿ, ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಲ್ಲಿ ಮನವಿ ಮಾಡಿದ್ದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಿಂದಾಗಿ 7 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬರುವ ಸಾಧ್ಯತೆ ಇದೆ. ಖಾಸಗಿ ವಲಯದಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದಾಜಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ