Rohini Vs Roopa: ಸತ್ಯಮೇವ ಜಯತೇ ಎಂದ ಡಿ.ರೂಪಾ, ಕುತೂಹಲ ಮೂಡಿಸಿದ IPS ನಡೆ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನ್ಯಾಯಾಲಯದಲ್ಲಿ ಹಾಕಿರುವ ಅರ್ಜಿ ವಿರುದ್ಧವಾಗಿ ಐಪಿಎಸ್ ಡಿ ರೂಪಾ ಸಹ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

Rohini Vs Roopa: ಸತ್ಯಮೇವ ಜಯತೇ ಎಂದ ಡಿ.ರೂಪಾ, ಕುತೂಹಲ ಮೂಡಿಸಿದ IPS ನಡೆ
ಡಿ.ರೂಪಾ, ರೋಹಿಣಿ ಸಿಂಧೂರಿ
Updated By: ರಮೇಶ್ ಬಿ. ಜವಳಗೇರಾ

Updated on: Feb 23, 2023 | 10:05 PM

ಬೆಂಗಳೂರು: ಐಪಿಎಸ್ ಡಿ ರೂಪಾ ಮೌದ್ಗಿಲ್ (D Roopa Moudgil)ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವಿನ ಆರೋಪ-ಪ್ರತ್ಯಾರೋಪಗಳು ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಕಾನೂನು ಹೋರಾಟಕ್ಕಿಳಿದಿದ್ದಾರೆ. ಇದೀಗ ರೂಪಾ ಸಹ ತಮ್ಮ ಎದುರಾಳಿ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಸಮರಕ್ಕೆ ಸಿದ್ಧರಾಗಿದ್ದು, ಕೋರ್ಟ್​ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ರೋಹಿಣಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಟಿವಿ9 ಹೊರತುಪಡಿಸಿ ರೂಪಾ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ಕೋರ್ಟ್ ನಿರ್ಬಂಧ

ಹೌದು..ತಮ್ಮ ಅಧಿಕೃತ ಫೇಸ್​ಬುಕ್​ನಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ರೂಪಾ, ನನ್ನ ಮಾತು ಕೇಳಲು ಅವಕಾಶ ನೀಡಿದ ಕೋರ್ಟ್‌ಗೆ ಕೃತಜ್ಞಳಾಗಿದ್ದೇನೆ. ಗೌರವಾನ್ವಿತ ನ್ಯಾಯಾಲಯದ ಮುಂದೆ ನನ್ನ ಮನವಿ ಸಲ್ಲಿಸುತ್ತೇನೆ. ಸತ್ಯಮೇವ ಜಯತೇ. ಆತ್ಮೀಯ ಸ್ನೇಹಿತರೇ, ಹಿತೈಷಿಗಳೇ ನಿಮ್ಮಿಂದ ಅಪಾರ ಬೆಂಬಲ ಸಿಕ್ಕಿದೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಹೋರಾಟಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ TV9 ಹೊರತುಪಡಿಸಿ ಐಪಿಎಸ್ ಅಧಿಕಾರಿ ಡಿ.ರೂಪಾ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿ ಇಂದು(ಫೆಬ್ರುವರಿ 23) ಬೆಂಗಳೂರಿನ 74ನೇ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ಆದಶ ಹೊರಡಿಸಿದೆ. ಆದ್ರೆ, ಇನ್ನು ರೋಹಿಣಿ ಸಿಂಧೂರಿ ಅರ್ಜಿಗೆ ಆಕ್ಷೇಪ ಸಲ್ಲಿಸಲು ಐಪಿಎಸ್ ಡಿ ರೂಪಾ ಮೌದ್ಗಿಲ್ ಅವರಿಗೂ ಕೋರ್ಟ್​ ಕಾಲವಕಾಶ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ಮುಂದೂಡಿದೆ.

ಇದನ್ನೂ ಓದಿ: Rohini Vs Roopa: ರೂಪಾ ವಿರುದ್ಧ FIR ದಾಖಲಿಸಲು ರೋಹಿಣಿ ಸಿಂಧೂರಿ ಪಟ್ಟು, ಪೊಲೀಸ್ ಆಯುಕ್ತರಿಗೆ ಪತ್ರ

ಕೋರ್ಟ್​ ಆಕ್ಷೇಪಣೆಗೆ ಕಾಲಾವಕಾಶ ನೀಡಿದ್ದರಿಂದ ರೂಪಾ ಅವರು ತಮ್ಮ ಮನವಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ರೋಹಿಣಿ ಹಾಗೂ ರೂಪಾ ಪರ ವಕೀಲರ ನಡುವಿನ ವಾದ-ಪ್ರತಿವಾದ ನಡೆಯಲಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಪು ನೀಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.