Rohini Vs Roopa: ರೂಪಾ ವಿರುದ್ಧ FIR ದಾಖಲಿಸಲು ರೋಹಿಣಿ ಸಿಂಧೂರಿ ಪಟ್ಟು, ಪೊಲೀಸ್ ಆಯುಕ್ತರಿಗೆ ಪತ್ರ
ರೋಹಿಣಿ ಸಿಂಧೂರಿ ಕೋರ್ಟ್ನಿಂದ ತಡೆಯಾಜ್ಞೆ ತಂದಿರುವ ಬೆನ್ನಲ್ಲೇ ಇದೀಗ ರೂಪಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಬಿಗಿಪಟ್ಟು ಹಿಡಿದಿದ್ದಾರೆ.
ಬೆಂಗಳೂರು: ಯಾವುದೇ ಮಾನಹಾನಿಕಾರ ಹೇಳಿಕೆ, ಆರೋಪಗಳನ್ನು ಮಾಡದಂತೆ ಡಿ ರೂಪಾ ಮೌದ್ಗಿಲ್(D Roopa moudgil) ಸೇರಿದಂತೆ ಇತರೆ ಪ್ರತಿವಾದಿಗಳ ವಿರುದ್ಧ ರೋಹಿಣಿ ಸಿಂಧೂರಿ (Rohini SIndhuri) ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಐಪಿಎಸ್ ಡಿ. ರೂಪಾ ಮೌದ್ಗಿಲ್ ವಿರುದ್ಧ FIR ದಾಖಲಿಸುವಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪಟ್ಟು ಹಿಡಿದಿದ್ದಾರೆ. ರೂಪಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಿ ಎಂದು ರೋಹಿಣಿ ಸಿಂಧೂರಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ಮತ್ತೆ ಪತ್ರ ಬರೆದಿದ್ದಾರೆ. ಐಟಿ ಕಾಯ್ದೆ, ಐಪಿಸಿ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಐಪಿಸಿ ಸೆಕ್ಷನ್ 354ಸಿ, 463, 509, 504, 120ಬಿ, 378 ಹಾಗೂ ಐಟಿ ಕಾಯ್ದೆ ಸೆಕ್ಷನ್ 43, 66, 66ಬಿ, 66ಇ, 67, 67ಎ, 71, 72 ಹಾಗೂ 74ರಡಿ ದೂರು ದಾಖಲಿಸುವಂತೆ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿ ರೂಪಾ ಮಾನಹಾನಿಕರ ಹೇಳಿಕೆ ನೀಡಿದ್ದಾರೆ. ಖಾಸಗಿ ಫೋಟೋಗಳು, ಸ್ಕ್ರೀನ್ ಷಾಟ್ ಗಳನ್ನು ಹಾಕಿದ್ದಾರೆ. ಕೆಲ ಫೋಟೋಗಳನ್ನು ತಿರುಚಿ ಪೋಸ್ಟ್ ಮಾಡಿದ್ದಾರೆ. ವೃತ್ತಿ ಮಾತ್ಸರ್ಯದಿಂದ ರೂಪಾ ಮೌದ್ಗಿಲ್ ಹೀಗೆ ಮಾಡಿದ್ದಾರೆ. ಈ ಬಗ್ಗೆ ಬಾಗಲಕುಂಟೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ ಪೊಲೀಸರು ಈ ಬಗ್ಗೆ ತನಿಖೆಯನ್ನೇ ನಡೆಸಿಲ್ಲ. ರೂಪಾ ಐಜಿಪಿ ರ್ಯಾಂಕ್ ನಲ್ಲಿರುವ ಪವರ್‌ಫುಲ್ ಅಧಿಕಾರಿಯಾಗಿದ್ದಾರೆ. ಹೀಗಾಗಿಯೇ ಪೊಲೀಸರು ತನಿಖೆ ಆರಂಭಿಸಿಲ್ಲವೆಂದು ರೋಹಿಣಿ ಆರೋಪಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಸೋಮವಾರ ನೇರವಾಗಿ ಬೆಂಗಳೂರಿನ ಬಾಗಲಗುಂಟೆಯ ಪೊಲೀಸ್ ಠಾಣೆಗೆ ತೆರಳಿ ಡಿ. ರೂಪಾ ವಿರುದ್ಧ ದೂರು ದಾಖಲಿಸಿದ್ದರು. ಆದ್ರೆ, ಪೊಲೀಸರು ಈ ಬಗ್ಗೆ ತನಿಖೆಯನ್ನೇ ನಡೆಸಿಲ್ಲ ಎಂದು ರೋಹಿಣಿ ಸಿಂಧೂರಿ ಪತ್ರದ ಮೂಲಕ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರ ಗಮನಕ್ಕೆ ತಂದಿದ್ದಾರೆ.