ಬೆಂಗಳೂರು: ಶಾಂತಿನಗರ RTO ಕಚೇರಿಯಲ್ಲಿ ದೌಲತ್ತಿನ ಅಧಿಕಾರಿಯೊಬ್ಬರಿದ್ದಾರೆ. ಹೌದು, ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ IPS ಅಧಿಕಾರಿ ಶಿವಕುಮಾರ್ ಅಧಿಕಾರದ ದರ್ಪ ತೋರುತ್ತಿದ್ದಾರೆ. ನಗರದಲ್ಲಿ ಬೈಕ್ ಟ್ಯಾಕ್ಸಿಗಳ ಅಕ್ರಮದ ಬಗ್ಗೆ ಸುದ್ದಿ ಮಾಡಲು ಹೋದ ಟಿವಿ9 ತಂಡದ ಕ್ಯಾಮರಾವನ್ನು ಕಿತ್ತೆಸೆಯಲು ಯತ್ನಿಸಿದ್ದಲ್ಲದೆ ಉಡಾಫೆಯಾಗಿ ವರ್ತಿಸಿದ್ದಾರೆ. ಇದಲ್ಲದೆ, ಸಾರಿಗೆ ಆಯುಕ್ತರ ಕಚೇರಿಯಲ್ಲೇ ಟಿವಿ9 ರಿಪೋರ್ಟರ್ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ.
ರಾಜ್ಯದ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆಯ ಆಯುಕ್ತ ಶಿವಕುಮಾರ್ ಅಚಾನಕ್ಕಾಗಿ ಈ ಸ್ಥಾನಕ್ಕೆ ಬಂದ್ರೋ ಅಥವಾ ಈ ಸ್ಥಾನದ ಜವಾಬ್ದಾರಿ ಅರಿತು ಬಂದ್ರೋ ಗೊತ್ತಿಲ್ಲ. ಆದರೆ, ಒಬ್ಬ ಆಯುಕ್ತರಿಗೆ ಇರಬೇಕಾದ ಕನಿಷ್ಠ ಘನತೆ ಕೂಡ ಇದ್ದಂತಿಲ್ಲ. ಉನ್ನತ ಹುದ್ದೆಯಲ್ಲಿ ಕುಳಿತು ದುರಹಂಕಾರದಿಂದ ಮಾತನಾಡ್ತಾರೆ.
ಟಿವಿ9 ಕ್ಯಾಮರಾ ಮೇಲೆ ಎರಗಿದ ಶಿವಕುಮಾರ್!
ಸಾರಿಗೆ ಇಲಾಖೆಯಲ್ಲಿ ಏನೇ ಆದ್ರೂ, ಎಲ್ಲವನ್ನೂ ನಿಭಾಯಿಸಬೇಕಾದ ಹೊಣೆ ಆಯುಕ್ತರ ಮೇಲಿರುತ್ತೆ. ಆದ್ರೆ, ಈ IPS ಅಧಿಕಾರಿ ಶಿವಕುಮಾರ್ಗೆ ಅದ್ಯಾವುದರ ಪರಿಜ್ಞಾನವೇ ಇದ್ದಂತಿಲ್ಲ.
ನಗರದಲ್ಲಿ ಬೈಕ್ ಟ್ಯಾಕ್ಸಿಗಳು ಅನಧಿಕೃತವಾಗಿ ಓಡಾಡ್ತಿವೆ. ಅವುಗಳ ಓಡಾಟಕ್ಕೆ ಪರ್ಮಿಟ್ ಕೊಟ್ಟಿದ್ದೀರಾ ಅಂತಾ ನಮ್ಮ ಪ್ರತಿನಿಧಿ ಪ್ರಶ್ನಿಸಿದ್ರೆ ಧಿಮಾಕಿನ ಉತ್ತರ ಕೊಟ್ಟಿದ್ದಾರೆ. ನಾನ್ ಏನೂ ಹೇಳಲ್ಲ.. ನಾನ್ಯಾಕೆ ಮಾತಾಡಬೇಕು.. ನಾನು ಹೇಳಿದ್ದನ್ನಷ್ಟೇ ಕೇಳಬೇಕು ಅಂತಾ ಉತ್ತರಿಸಿದ್ದಾರೆ. ಅದಕ್ಕೆ, ನಮ್ಮ ಪ್ರತಿನಿಧಿ ಎಷ್ಟೋ ಅಧಿಕಾರಿಗಳಿದ್ರು ಅವರುಯಾರೂ ನಿಮ್ಮ ಹಾಗೆ ವರ್ತಿಸ್ತಿರಲಿಲ್ಲ ಎಂದು ಸೌಜನ್ಯದಿಂದ ಹೇಳಿದ್ದಕ್ಕೆ, ಸಿಟ್ಟಿಗೆದ್ದ ಅಧಿಕಾರಿ ಕುರ್ಚಿಯಿಂದ ಎದ್ದು ಬಂದು ಏಕಾಏಕಿ ಕ್ಯಾಮರಾ ಕಿತ್ತುಕೊಳ್ಳಲು ಯತ್ನಿಸಿದ್ದಲ್ಲದೆ ಕ್ಯಾಮರಾದ ಕೇಬಲ್ ಕಿತ್ತೆಸೆದಿದ್ದಾರೆ. ಜೊತೆಗೆ, ಕ್ಯಾಮರಾ ಟ್ರೈಪಾಟ್ ಅನ್ನು ನೆಲಕ್ಕೆ ತಳ್ಳಿ ದಾಂಧಲೆ ಎಬ್ಬಿಸಿದ್ದಾರೆ.
ಅಂದ ಹಾಗೆ, ಟಿವಿ9 ತಂಡ ಸಾರ್ವಜನಿಕ ಸಂಪರ್ಕಾಧಿಕಾರಿಯ ಅಪಾಯಿಂಟ್ಮೆಂಟ್ ಪಡೆದೇ ಸಾರಿಗೆ ಇಲಾಖೆ ಕಚೇರಿಗೆ ಪ್ರತಿಕ್ರಿಯೆ ಪಡೆಯಲು ತೆರಳಿತ್ತು. ಕಚೇರಿಗೆ ಬಂದ ಸಾರ್ವಜನಿಕರಿಗೆ ಅಥವಾ ಮಾಧ್ಯಮದವರಿಗೆ ಉತ್ತರಿಸಬೇಕಾಗಿರುವುದು ಒಬ್ಬ ಸರ್ಕಾರಿ ಅಧಿಕಾರಿಯ ಕರ್ತವ್ಯ. ಆದರೆ, ಇದು ಈ IPS ಅಧಿಕಾರಿಗೆ ಅನ್ವಯಿಸುವುದಿಲ್ಲವೇನೋ. ನಿಯತ್ತಾಗಿ, ಜವಾಬ್ದಾರಿ ಹೊತ್ತು ಉತ್ತರ ಕೊಡುವ ಬದಲು ದೌಲತ್ತು ತೋರಿಸಿದ್ದಾರೆ.
ಬಹುಶಃ, ಸಾರಿಗೆ ಇಲಾಖೆಯನ್ನ ಶಿವಕುಮಾರ್ ತನ್ನ ಪ್ರೈವೇಟ್ ಲಿಮಿಟೆಡ್ ಕಂಪನಿ ಎಂದುಕೊಂಡಿರಬೇಕು. ಅಲ್ಲಿ ಅವರನ್ನು ಯಾರೂ ಪ್ರಶ್ನಿಸುವಂತಿಲ್ಲ, ಅಕ್ರಮದ ಬಗ್ಗೆ ಕೇಳುವಂತಿಲ್ಲ. ಈ IPS ಅಧಿಕಾರಿಯ ವರ್ತನೆ ನೋಡಿದ್ರೆ ಇವರ ಪ್ರಾಮಾಣಿಕತೆ ಬಗ್ಗೆ ಸಂಶಯ ಹುಟ್ಟುತ್ತಿದೆ.
ರಾಜ್ಯದ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆಯ ಆಯುಕ್ತ ಶಿವಕುಮಾರ್
ಇದನ್ನೂ ಓದಿ: IAS ಅಧಿಕಾರಿ ಮೇಲೆ ಪತಿಯ ದರ್ಪ: ಬಾಗಿಲು ಮುರಿದವ.. ಕೊನೆಗೆ ಜೈಲುಪಾಲಾದ