ರಾಮನಗರ, ಮಾರ್ಚ್ 13: ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಮಂಜುನಾಥ್ (Dr CN Manjunath) ರವರು ಒಳ್ಳೆಯ ಡಾಕ್ಟರ್. ಅವರು ರಾಜಕೀಯಕ್ಕೆ ಅಮಾಯಕರು. ಪಾಪ ಅಮಾಯಕರನ್ನು ತಂದು ಸ್ಪರ್ಧೆಗಿಳಿಸುತ್ತಿದ್ದಾರೆ. ಡಿ.ಕೆ ಸುರೇಶ್ ವಿರುದ್ಧ ಪಾಪ ಮಂಜುನಾಥ್ರವರನ್ನು ಹರಕೆ ಕುರಿ ಮಾಡುತ್ತಿದ್ದಾರೆ. ಯಾಕೆ ನಿಮಗೆ ತಾಕತ್ತಿಲ್ವಾ, ನಮಗೆ ಗಂಡಸ್ತನ ಇಲ್ವಾ ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಮಂತ್ರಿ ಆಗಿದ್ರಲ್ಲ ಅವರಿಗೆ ನಿಲ್ಲಿಸಬಹುದಿತ್ತಲ್ವಾ ಎಂದು ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ಗೆ ಟಾಂಗ್ ನೀಡಿದ್ದಾರೆ. ಡಿಕೆ ಸುರೇಶ್ ವಿರುದ್ಧ ನಿಮಗೆ ಅಭ್ಯರ್ಥಿ ಇಲ್ಲವೆನ್ನುವುದು ತೋರಿಸುತ್ತೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಚಿಹ್ನೆ ಅಡಿ ಡಾ. ಮಂಜುನಾಥ್ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಜೆಡಿಎಸ್ ಅವನತಿಯತ್ತ ಸಾಗುತ್ತಿದೆ. ಇರುವ 19 ಜನ ಶಾಸಕರಲ್ಲಿ 12 ಕಾಂಗ್ರೆಸ್ ಬರಲಿದ್ದಾರೆ. ಜೆಡಿಎಸ್ನಲ್ಲಿ ಯಾವುದೇ ಸಿದ್ಧಾಂತ ಇಲ್ಲ. ಹಾಗಾಗಿ ಎಲ್ಲರೂ ಕಾಂಗ್ರೆಸ್ಗೆ ಬರಲು ಸಿದ್ಧರಾಗಿದ್ದಾರೆ. ಹತ್ತಕ್ಕೂ ಹೆಚ್ಚು ಶಾಸಕರು ಚುನಾವಣೆಗೂ ಮುಂಚೆ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ನನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ವೈಷಮ್ಯವಿರಲಿಲ್ಲ; ಬೇರೆ ಬೇರೆ ಪಕ್ಷಗಳಲ್ಲಿದ್ದೆವು, ಅಷ್ಟೇ: ಸಿಪಿ ಯೋಗೇಶ್ವರ್
ಕಿರಾತಕ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿಮ್ಮನ್ನು ಕೈಯ್ಯತ್ತಿ ಮುಖ್ಯಮಂತ್ರಿ ಮಾಡಿದಾಗ ಅವರು ಕಿರಾತಕ ಆಗಿರಲಿಲ್ಲವಾ? ಒಬ್ಬ ಮುಸ್ಲಿಂ ನನ್ನು ಗೆಲ್ಲಿಸಿದಕ್ಕೆ ಅವರು ಕಿರಾತಕ ಆದರಾ? ಆ ಪದ ನಿಮಗೆ ಅನ್ವಯಿಸುತ್ತದೆ, ನೀವು ಕಿರಾತಕರು. ಸೋಲಿನ ಹತಾಶೆಯಲ್ಲಿ ಇದೆಲ್ಲಾ ಮಾತಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಾ ಮಂಜುನಾಥ್ಗೆ ಲೋಕಸಭಾ ಟಿಕೆಟ್ ಖಚಿತ, ಬಿಜೆಪಿ ಸೇರ್ಪಡೆಗೆ ಮುಹೂರ್ತ ಸಹ ಫಿಕ್ಸ್!
ಕಾಂಗ್ರೆಸ್ನಿಂದ ಕುಕ್ಕರ್ ಹಾಗೂ ಗಿಫ್ಟ್ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಹಬ್ಬ, ಹುಣ್ಣಮೆಗೆ ಕೊಡುವಷ್ಟು ಶಕ್ತಿ ನಮಗಿದೆ. ಎಲ್ಲಾ ವರ್ಗದ ಜನರಿಗೆ ನಾವು ಕೊಡುತ್ತೇವೆ. ನಿಮಗೆ ಶಕ್ತಿ ಇದ್ದರೆ ನೀವು ಕೊಡಿ. ನಾವು ಇಲ್ಲೇಇರೋರು. ಹಬ್ಬ ಹುಣ್ಣಿಮೆಗೆ ಕೊಡುತ್ತೇವೆ. ಕೊಟ್ಟಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕ್ಕೊಂಡಿದ್ದಾರೆ ಎಂದರು.
ಸದ್ಯ ಡಾ.ಸಿ.ಎನ್. ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.