ಪತ್ರಿಕಾ ರಂಗದ ಸುದ್ದಿಗಳನ್ನೂ ಫ್ಯಾಕ್ಟ್​​ ಚೆಕ್ ಮಾಡುತ್ತಾ ಸರ್ಕಾರ? ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 21, 2024 | 3:14 PM

ಸುಳ್ಳು ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಫ್ಯಾಕ್ಟ್​​ ಚೆಕ್ ಘಟಕ ಸ್ಥಾಪನೆಗೆ ಈ ಹಿಂದೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕ್ರಮ ಕೈಗೊಂಡಿತ್ತು. ಇದೀಗ ಪತ್ರಿಕಾ ರಂಗದ ಸುದ್ದಿಗಳನ್ನು ಫ್ಯಾಕ್ಟ್ ಚೆಕ್ ಮಾಡಲು ಸರ್ಕಾರ ಮುಂದಾಗಿದೆ, ಆದರೆ ಅನೇಕ ಅಡೆ ತಡೆಗಳಿವೆ ಎಂದಿದ್ದಾರೆ. ಆ ಮೂಲಕ ಮಾಧ್ಯಮ ಸುದ್ದಿಗಳನ್ನು ಫ್ಯಾಕ್ಟ್ ಚೆಕ್​ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಸಿದ್ದರಾಮಯ್ಯ ಹೇಳಿದ್ದೇನೆಂಬುದು ಇಲ್ಲಿದೆ.

ಪತ್ರಿಕಾ ರಂಗದ ಸುದ್ದಿಗಳನ್ನೂ ಫ್ಯಾಕ್ಟ್​​ ಚೆಕ್ ಮಾಡುತ್ತಾ ಸರ್ಕಾರ? ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
ಪತ್ರಿಕಾ ರಂಗದ ಸುದ್ದಿಗಳನ್ನೂ ಫ್ಯಾಕ್ಟ್​​ ಚೆಕ್ ಮಾಡುತ್ತಾ ಸರ್ಕಾರ? ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
Follow us on

ಮೈಸೂರು, ಸೆಪ್ಟೆಂಬರ್​ 21: ಜನರಿಗೆ ಸತ್ಯ ಹೇಳುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು. ಪತ್ರಿಕಾ ರಂಗದ ಸುದ್ದಿಗಳನ್ನ ಫ್ಯಾಕ್ಟ್ ಚೆಕ್ ಮಾಡಲಿಕ್ಕೆ ಸರ್ಕಾರ ಮುಂದಾಗಿದೆ. ಆದರೆ ಅನೇಕ ಅಡೆ ತಡೆಗಳು ಇವೆ. ಆ ಮೂಲಕ ಮಾಧ್ಯಮ ಸುದ್ದಿಗಳನ್ನು ಫ್ಯಾಕ್ಟ್ ಚೆಕ್ ಮಾಡುವ ಕುರಿತಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಸುಳಿವು ನೀಡಿದ್ದಾರೆ.

ನಗರದಲ್ಲಿ ನಡೆದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸುಳ್ಳು ಸುದ್ದಿಗಳು ನನ್ನನ್ನು ಕೂಡ ಬಿಟ್ಟಿಲ್ಲ. ಯಡಿಯೂರಪ್ಪ ಹೇಳಿದ್ದನ್ನ ನಾನು ಹೇಳಿದ ಹಾಗೆ ಮಾಡಿದ್ದರು. ಇದನ್ನು ಗ್ಯಾರಂಟಿ ಯೋಜನೆಗೆ ಜೋಡಿಸಿದ್ದರು. ಜನರಿಗೆ ಸತ್ಯ ಹೇಳುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು ವಿಮಾನಯಾನ ಬಹುತೇಕ ಸ್ತಬ್ಧ; ಸದ್ಯ ಈ ಎರಡು ನಗರಗಳಿಗೆ ಮಾತ್ರ ಸೇವೆ

ಸುಳ್ಳು ಸುದ್ದಿಗಳನ್ನ ಮಾಡುವುದರಿಂದ ವ್ಯಕ್ತಿಯ ತೇಜೋವದೆ ಆಗುತ್ತದೆ. ಹಾಗಾಗಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವಂತ ಕೆಲಸ ಮಾಡೋಣ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಟ್ಟಡಕ್ಕೂ ಅನುದಾನ ನೀಡೋಣ ಎಂದು ಹೇಳಿದ್ದಾರೆ.

ಜುಲೈ 1ರಂದು ಪತ್ರಿಕಾ ದಿನಾಚರಣೆ ಮಾಡಬೇಕು. ಮಂಗಳೂರು ಸಮಾಚಾರ ಪತ್ರಿಕೆ ಪ್ರಾರಂಭವಾದ ದಿನವನ್ನೇ ಪತ್ರಿಕಾ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ. ಪತ್ರಿಕಾ ದಿನಾಚರಣೆ ಮೂಲಕ ಪತ್ರಕರ್ತರ ಜವಾಬ್ದಾರಿ ಮೆಲುಕು ಹಾಕುವ ಕೆಲಸ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿ ವೇಗವಾಗಿ ಬೆಳೆಯಲಿಕ್ಕೆ ಪ್ರಾರಂಭವಾಗಿದೆ. ಇದನ್ನು ತಡೆಯದೇ ಹೋದರೆ ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳು ಉಳಿಯಲಿಕ್ಕೆ ಕಷ್ಟ ಆಗುತ್ತದೆ ಎಂದು ತಿಳಿಸಿದರು.

ಕುವೆಂಪು ಅವರು ಹೇಳಿದ ಶಾಂತಿಯ ತೋಟ ಆಗುವುದು ಕಷ್ಟ ಆಗುತ್ತದೆ. ಧಾರ್ಮಿಕ, ಸಾಮಾಜಿಕ ಘಟನೆಗಳು ನಮ್ಮ ಜೊತೆಯಲ್ಲಿರುವವರಿಗೆ ತೊಂದರೆ ಉಂಟು ಮಾಡುತ್ತದೆ. ಸುಳ್ಳು ಸುದ್ದಿ ಮಾಡುವುದು ಯಾರಿಗೂ ಶೋಭೆ ತರಲ್ಲ. ಇದನ್ನ ತಡೆಗಟ್ಟುವ ಕೆಲಸ ಮಾಡಬೇಕು. ಪತ್ರಕರ್ತರಲ್ಲದ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾಗೆ ದಿನಗಣನೆ: ಅರಮನೆಯ ಮತ್ತಷ್ಟು ಅಂದ ಹೆಚ್ಚಿಸಲಿವೆ 1 ಲಕ್ಷ ವಿದ್ಯುತ್ ದೀಪಗಳು

ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದೆ. ಅದಕ್ಕೆ ಅಪಾಯ ಬಂದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟಾಗುತ್ತದೆ. ಪತ್ರಿಕಾರಂಗಕ್ಕೆ ಯಾವುದೇ ನಿರ್ಬಂಧ ಹೇರಬಾರದು. ಅದು ಸ್ವತಂತ್ರವಾಗಿ ಕೆಲಸ ಮಾಡಬೇಕು. ಇದನ್ನೇ ಎಲ್ಲರು ಹೇಳಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:13 pm, Sat, 21 September 24