ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಸೆಕೆಂಡ್ ಇನಿಗ್ಸ್ ಶುರು ಮಾಡಿರುವ ಗಣಿದಣಿ ಗಾಲಿ ಜನಾರ್ದನ ರೆಡ್ಡಿ (Janardhana Reddy) ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಹಾಗೇ ರೆಡ್ಡಿ ಬಿಜೆಪಿ ಸೇರುತ್ತಾರೆ, ಇಲ್ಲ ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆಂದು ಸಾಕಷ್ಟು ಚರ್ಚೆಯಾಗುತ್ತಿವೆ. ಈ ಕುರಿತಾಗಿ ಮಾತನಾಡಿದ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ (K S Eshwarappa) ಗಾಲಿ ಜನಾರ್ದನ ರೆಡ್ಡಿ ಗಂಗಾವತಿ (Gangavati) ಕ್ಷೇತ್ರ ಆಯ್ಕೆ ಮಾಡಬಹುದೆಂಬ ಅಭಿಪ್ರಾಯ ಬರುತ್ತಿದೆ. ಪ್ರತಿ ವ್ಯಕ್ತಿಗೂ ಯಾವುದೇ ಪಕ್ಷಕ್ಕೆ ಹೋಗುವ ಅಧಿಕಾರ ಇದೆ. ರೆಡ್ಡಿ ಬಿಜೆಪಿ (BJP) ಸೇರುತ್ತಾರೋ ಅಥವಾ ಬೇರೆ ಪಕ್ಷಕ್ಕೆ ಹೋಗ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ವಿಚಾರ ನನಗೆ ಗೊತ್ತಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಚುನಾವಣೆ ಹತ್ತಿರ ಇದ್ದಾಗ ವಿಸ್ತರಣೆ ಮಾಡುತ್ತಾರೋ, ಇಲ್ವೋ ಗೊತ್ತಿಲ್ಲ. ಚುನಾವಣೆಯಲ್ಲಿ ಬಹುಮತ ಪಡೆಯಲು ನಾಯಕರು ತಂತ್ರ ಮಾಡುತ್ತಾರೆ. ಸಂಪುಟ ವಿಸ್ತರಣೆ ಮಾಡಬಹುದು, ಇಲ್ಲ ಹಾಗೆ ಮುಂದುವರಿಸಬಹುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದವರಿಗೆ ಕರ್ನಾಟಕದ ಒಂದು ಹನಿ, ಒಂದಿಂಚು ಭೂಮಿ ಸಿಗಲ್ಲ
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದದ ಕುರಿತಾಗಿ ಮಾತನಾಡಿದ ಅವರು ಅವರಿಗೆ ಕರ್ನಾಟಕದ ಒಂದು ಹನಿ, ಒಂದಿಂಚು ಭೂಮಿ ಸಿಗಲ್ಲ. ದೇಶ ಒಂದಾಗಬೇಕು ಅಂತಾ ಬಿಜೆಪಿ ಪ್ರಯತ್ನ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಇರುವ ಮರಾಠಿಗರು ಸಂತೋಷದಿಂದ ಇದ್ದಾರೆ. ಎರಡು ರಾಜ್ಯದವರು ಅಣ್ಣ-ತಮ್ಮಂದಿರಂತೆ ಇದ್ದೀವಿ. ಕೆಲ ರಾಜಕಾರಣಿಗಳು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹವರಿಗೆ ಎರಡು ರಾಜ್ಯದ ಜನರು ಛೀಮಾರಿ ಹಾಕುತ್ತಿದ್ದಾರೆ. ಗಡಿ ವಿಚಾರದಲ್ಲಿ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿವೆ ಎಂದು ತಿಳಿಸಿದರು.
ನೋಟಿಸ್ ಬದಲು ಗ್ರಾಮಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲಿ ಸಾಕು
ಕರ್ನಾಟಕ ಸೇರಬಯಸುವ ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು ನೋಟಿಸ್ ಬದಲು ಗ್ರಾಮಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲಿ ಸಾಕು. ನೋಟಿಸ್ ಕೊಡುವುದು ಖಳನಾಯಕನ ಕೆಲಸ. ನೋಟಿಸ್ ವಾಪಸ್ ಪಡೆದು ಆ ಜನ ಬಯಸಿದ ಸೌಲಭ್ಯ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲೂ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುತ್ತೆ
ಗುಜರಾತ್ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಬಂದಿರುವ ವಿಚಾರವಾಗಿ ಮಾತನಾಡಿದ ಅವರು ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಕರ್ನಾಟಕದಲ್ಲೂ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಬರುತ್ತೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಭವಿಷ್ಯ ನಡಿದರು.
ರಾಜ್ಯ ಕಾಂಗ್ರೆಸ್ನಲ್ಲಿ ಇಬ್ಬರು ಪೈಲ್ವಾನ್ಗಳು ಹೊಡೆದಾಡುತ್ತಿದ್ದಾರೆ
ರಾಜ್ಯ ಕಾಂಗ್ರೆಸ್ನಲ್ಲಿ ಇಬ್ಬರು ಪೈಲ್ವಾನ್ಗಳು ಹೊಡೆದಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಪರಸ್ಪರ ಹೊಡೆದಾಡುತ್ತಿದ್ದಾರೆ. ಸಿದ್ದರಾಮಯ್ಯ ಪರಿಸ್ಥಿತಿ ನೋಡಿದರೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ರಾಜ್ಯದ ಯಾವುದೇ ಕ್ಷೇತ್ರ ಕೊಟ್ಟರೂ ನಿಲ್ಲಲು ಸಿದ್ಧನಿದ್ದೇನೆ ಅಂತಾರೆ. ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೀಗೆ ಹೇಳುತ್ತಾರೆ. ಕೋಲಾರ, ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರ ಯಾಕೆ ಬೇಡ? ಸಿದ್ದರಾಮಯ್ಯ ಯಾಕೆ ಹೊಸ ಕ್ಷೇತ್ರವನ್ನು ಹುಡುಕಿ ಹೋಗುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕ್ಷೇತ್ರ ಕ್ಲಿಯರ್ ಅಗಿಲ್ಲ ಅಂದರೆ ಹೇಗೆ? ಬಹುಮತ ಇರಲಿ, ವಿರೋಧ ಪಕ್ಷದ ನಾಯಕನ ಸ್ಥಾನವೂ ಸಿಗಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ