ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಹೆಚ್ಚಾಗ್ತಿದೆಯಾ ಗೊಂದಲ? ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದ ದೇವೇಗೌಡ

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ವರಿಷ್ಠ ಹೆಚ್​​ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಬೆಳವಣಿಗೆಗಳು ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಬಿರುಕು ಹೆಚ್ಚಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಹೆಚ್ಚಾಗ್ತಿದೆಯಾ ಗೊಂದಲ? ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದ ದೇವೇಗೌಡ
ಹೆಚ್​ಡಿ ದೇವೇಗೌಡ (ಸಂಗ್ರಹ ಚಿತ್ರ)

Updated on: Dec 27, 2025 | 9:49 AM

ಬೆಂಗಳೂರು, ಡಿಸೆಂಬರ್ 27: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ (JDS) ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (BJP) ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ದೇವೇಗೌಡ ನಿರಾಕರಿಸಿದ್ದಾರೆ. ಈ ಬೆಳವಣಿಗೆಗಳು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಗೊಂದಲ, ಬಿರುಕು ಹೆಚ್ಚಾಗುತ್ತಿದೆಯಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೆಚ್​ಡಿ ದೇವೇಗೌಡರು ಹೇಳಿದ್ದೇನು?

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ದೇವೇಗೌಡ, ನಾವು ಲೋಕಸಭೆ, ವಿಧಾನಸಭೆ ಮತ್ತು ಪರಿಷತ್ತಿನ ಚುನಾವಣೆಗಳಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಲಿದ್ದೇವೆ. ಬಿಜೆಪಿ ರಾಜ್ಯ ಅಧ್ಯಕ್ಷರು ಹೇಳಿರುವ ವಿಚಾರದ ಬಗ್ಗೆ ನಾನು ಯಾವುದೇ ಪ್ರಶ್ನೆಗಳನ್ನು ಎತ್ತುವುದಿಲ್ಲ. ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಜೆಡಿಎಸ್ ಸ್ವಂತ ಬಲದ ಮೇಲೆ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್, ಆ ಮೂಲಕ ಎನ್​ಡಿಎ ಮಿತ್ರಕೂಟದ ಭಾಗವಾಗಿದೆ. ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ.

ಬಿವೈ ವಿಜಯೇಂದ್ರ ಹೇಳಿದ್ದೇನು?

4 ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅಧಿಕಾರ ಹಿಡಿದ ಕೂಡಲೇ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಲೆಕ್ಕಾಚಾರಕ್ಕೆ ಇಳಿದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಇದು, 2028ರ ವಿಧಾನಸಭೆ ವೇಳೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಮುರಿದು ಬೀಳುತ್ತಾ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ. ಆದರೆ, ವಿಜಯೇಂದ್ರ ಹೇಳಿಕೆ ಬಗ್ಗೆ ಜಾಣತನದಿಂದ ಪ್ರತಿಕ್ರಿಯಿರುವ ದೇವೇಗೌಡರು, ಆ ಬಗ್ಗೆ ಪ್ರಶ್ನೆ ಮಾಡಲು ಹೋಗುವುದಿಲ್ಲ ಎಂದಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ರಚನೆಯಾಗಿದ್ದರೂ ಅದಕ್ಕೆ ಬಿಜೆಪಿ ರಾಜ್ಯ ನಾಯಕರ ಸಂಪೂರ್ಣ ಸಹಮತ ಸಿಕ್ಕಿಲ್ಲ ಎಂಬುದು ನಂತರದ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. ವರಿಷ್ಠರ ಕಟ್ಟಪ್ಪಣೆಗೆ ಮಣಿದ ನಾಯಕರು, ನಾವು ಜೊತೆಗಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ರೂಪಿಸುವಲ್ಲಿ ಈ ಮೈತ್ರಿ ಸಫಲವಾಗಿಲ್ಲ. ಆಗೊಮ್ಮೆ ಈಗೊಮ್ಮೆ ಸಭೆ ನಡೆದರೂ ಅದು ಟೀ-ಕಾಫಿಗಷ್ಟೇ ಸೀಮಿತವಾಗಿದೆ ಎಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಹಲವು ಬಾರಿ ಚರ್ಚೆಗಳಾಗಿವೆ.

ಇದನ್ನೂ ಓದಿ: ಕಾಂಗ್ರೆಸ್ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ, ಸುಮ್ನೆ ಭಾಷಣ ಮಾಡಿ ಹೋಗಿಲ್ಲ: ಖರ್ಗೆ ನಿವಾಸದ ಎದುರೇ ಡಿಕೆಶಿ ಖಡಕ್ ಮಾತು

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೂ ಮೈತ್ರಿಯಾಗಿ ವಿಪಕ್ಷಗಳು ಕ್ರಾಂತಿ ಮಾಡಿಲ್ಲ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ವಂತ ಬಲದ ಬಗ್ಗೆ ಮಾತನಾಡಿದ್ದಾರೆ. ಜೆಡಿಎಸ್ ಸಹ ಸ್ವಂತ ಬಲದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸುವ ಘೋಷಣೆ ಮಾಡಿದೆ. ಇದು ಮುಂದೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ