ಕೆಂಪೇಗೌಡ ಏರ್ಪೋರ್ಟ್: ಹಳದಿ ಬೋರ್ಡ್ ಕ್ಯಾಬ್ ನಿಯಮ, ದಂಡ ಪರಿಷ್ಕರಣೆ, ಚಾಲಕರಿಗೆ ರಿಲೀಫ್
ಚಾಲಕರ ಪ್ರತಿಭಟನೆ ಬಳಿಕ ಕೆಂಪೇಗೌಡ ವಿಮಾನ ನಿಲ್ದಾಣ (BLR) ಹಳದಿ ಬೋರ್ಡ್ ಕ್ಯಾಬ್ ನಿಯಮಗಳನ್ನು ಪರಿಷ್ಕರಿಸಿದೆ. ಪಿಕಪ್ ಸಮಯವನ್ನು 10 ರಿಂದ 15 ನಿಮಿಷಗಳಿಗೆ ಹೆಚ್ಚಿಸಲಾಗಿದೆ. 45 ನಿಮಿಷಗಳ ನಂತರದ ದಂಡವನ್ನು 100 ರಿಂದ 50 ರೂ.ಗೆ ಕಡಿತಗೊಳಿಸಲಾಗಿದೆ. ಇಡೀ ದಿನದ ಪಾರ್ಕಿಂಗ್ ದಂಡ 600 ರಿಂದ 350 ರೂ.ಗೆ ಇಳಿದಿದೆ. ಇದು ಚಾಲಕರಿಗೆ ಸಮಾಧಾನ ತಂದಿದೆ.

ಬೆಂಗಳೂರು, ಡಿ.27: ಬೆಂಗಳೂರು ಕೆಂಪೇಗೌಡ ಏರ್ಪೋಟ್ ನಲ್ಲಿ (Kempegowda Airport) ಹಳದಿ ಬೋರ್ಡ್ ಚಾಲಕರ ಪಿಕಪ್ ಸಮಯ ಹೆಚ್ಚಳ ಹಾಗೂ ದಂಡದ ನಿಯಮ ಜಾರಿಗೆ ಸಂಬಂಧಿಸಿದಂತೆ, ಹೊಸ ನಿಯಮ ಜಾರಿ ವಿರುದ್ದ ಚಾಲಕರು ಮಾಡಿದ್ದ ಪ್ರತಿಭಟನೆಗೆ ಮಣಿದ ಏರ್ಪೋಟ್ ಆಡಳಿತ ಮಂಡಳಿ ಇದೀಗ ಹೊಸ ದರ ಹಾಗೂ ನಿಯಮವನ್ನು ಜಾರಿ ಮಾಡಿದೆ. 10 ನಿಮಿಷದಿಂದ 15 ನಿಮಿಷಕ್ಕೆ ಹಳದಿ ಬೋರ್ಡ್ ಕ್ಯಾಬ್ಗಳ ಪಿಕಪ್ ಸಮಯ ಹೆಚ್ಚಳ ಮಾಡಿತ್ತು. ಟರ್ಮಿನಲ್ 1ರ P3 ಮತ್ತು P4 ನಲ್ಲಿ ಪಿಕಪ್ ಸಮಯ ಹೆಚ್ಚಳ ಮಾಡಲಾಗಿತ್ತು. 15 ನಿಮಿಷದ ಉಚಿತ ಪಿಕಪ್ ಸಮಯ ಮೀರಿದರೆ 15ರಿಂದ 45 ನಿಮಿಷ ಹೆಚ್ಚುವರಿಯಾಗಿ ಉಳಿದುಕೊಂಡರೆ 100 ರೂ. ದಂಡ ಹಾಕಲಾಗುವುದು ಎಂಬ ನಿಯಮವನ್ನು ತರಲಾಗಿತ್ತು.
ಇದೀಗ ಈ ನಿಯಮವನ್ನು ಸಡಿಲಗೊಳಿಸಿ 45 ನಿಮಿಷಕ್ಕಿಂತ ಹೆಚ್ಚುವರಿಯಾಗಿ ನಿಲುಗಡೆ ಮಾಡಿದ್ರೆ ಪ್ರತಿ ಗಂಟೆಗೆ 100 ರೂ. ಬದಲು 50 ರೂ ದಂಡ ಹಾಕಲಾಗುವುದು. ಒಂದು ದಿನ ಪೂರ್ತಿ ವಾಹನ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ರೆ 600 ರೂ. ಪೈನ್ ಹಾಕಲಾಗಿತ್ತು. ಇದೀಗ ಒಂದು ದಿನಕ್ಕೂ ಪಾರ್ಕಿಂಗ್ನಲ್ಲಿ ವಾಹನ ಉಳಿದ್ರೆ ದಿನಕ್ಕೆ 350 ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿ ಹೊಸ ದಂಡ ದರ ಪಟ್ಟಿ ಬಿಡುಗಡೆ ಮಾಡಿದೆ.
ಈ ಹಿಂದೆ ಹಳದಿ ಬೋರ್ಡ್ ಕ್ಯಾಬ್ಗೆ 8 ನಿಮಿಷ ಮಾತ್ರ ಉಚಿತ ಪಾರ್ಕಿಂಗ್ ನೀಡಿದ್ದ ಕೆಐಎಬಿ. ನಂತರದಲ್ಲಿ ಈ ನಿಮಯವನ್ನು ಬದಲಾವಣೆ ಮಾಡಿ, 8 ನಿಮಿಷದ ನಂತರ 150 ರೂ ದಂಡ ಹಾಕಲಾಗುವುದು ಎಂದು ಹೇಳಿತ್ತು. ಈ ನಿಯಮದ ವಿರುದ್ದ ಕ್ಯಾಬ್ ಚಾಲಕರು ಏರ್ಪೋಟ್ ಟೋಲ್ ಬಳಿ ಪ್ರತಿಭಟನೆ ಮಾಡಿದ್ದರು. ಚಾಲಕರ ಪ್ರತಿಭಟನೆ ಬೆನ್ನಲೇ ಸಭೆ ನಡೆಸಿ ಇದೀಗ ಹಳದಿ ಬೋರ್ಡ್ಗಳಿಗೆ ಹೊಸ ದರ ಹಾಗೂ ಸಮಯ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ಹೊಸ ರೂಲ್ಸ್: ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಫಿಕ್ಸ್
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಆಗಮನ ಪ್ರದೇಶಗಳಲ್ಲಿ ಸುರಕ್ಷತೆ, ಶಿಸ್ತು, ಇತರ ನಿಯಮಗಳನ್ನು ಅನುಸರಿಸಲು ಹೊಸ ನಿಯಮಗಳನ್ನು ಪರಿಚಯಿಸಲಾಗಿತ್ತು. ಪ್ರತಿದಿನ ಸುಮಾರು 1,30,000 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ 3ನೇ ಅತಿದೊಡ್ಡ ವಿಮಾನ ನಿಲ್ದಾಣ. ಹಾಗಾಗಿ ಸುಮಾರು 1 ಲಕ್ಷ ವಾಹನಗಳು ಪ್ರತಿದಿನ ಏರ್ಪೋರ್ಟ್ ಮಾರ್ಗದಲ್ಲಿ ಸಂಚಾರ ನಡೆಸುತ್ತವೆ. ಇದರಿಂದಾಗಿ ಟರ್ಮಿನಲ್‌ಗಳ ಮುಂಭಾಗ ಇರುವ ಕರ್ಬ್‌ಸೈಡ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹಾಗಾಗಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳಲ್ಲಿ ಕೆಲವೊಂದು ನಿಯಮಗಳನ್ನು ತರಲಾಗಿತ್ತು. ಇದರ ಜತೆಗೆ ಟರ್ಮಿನಲ್ 1ರಲ್ಲಿ ಯಲ್ಲೋ ಬೋರ್ಡ್ ಕಾರುಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಯಲ್ಲೋ ಬೋರ್ಡ್ ಕಾರುಗಳಿಗೆ P3, P4 ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Sat, 27 December 25



