ಬೆಂಗಳೂರು: ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಅತ್ಯಾಕರ್ಷಕ ಸುರಂಗ ಅಕ್ವೇರಿಯಂ ತೆರೆಯಲಾಗಿದೆ. ಇಂದಿನಿಂದ ರೈಲ್ವೆ ಪ್ರಯಾಣಿಕರು ಸಂಚಾರ ಕೈಗೊಳ್ಳುವಾಗ ವಿಶ್ರಾಂತಿ ಪಡೆಯಲು ಅಥವಾ ಅತ್ಯಾಕರ್ಷಕ ಜಲಚರಗಳನ್ನು ನೊಡಬಹುದು. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಇಷ್ಟವಾಗುವ ವಿವಿಧ ಜಲಚರಗಳು ಪ್ರಯಾಣಿಕರಿಗೆ ಖುಷಿ ನೀಡುತ್ತವೆ. ಜತೆಗೆ ಸಮಯ ಕಳೆಯಲು ಉತ್ತಮ ಸ್ಥಳವಾಗಿದೆ. ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ದಿ ನಿಗಮ ( ಐಆರ್ಎಸ್ಡಿಸಿ) ಮತ್ತು ಎಚ್ಎನ್ಐ ಎಂಟರ್ಪ್ರೈಸಸ್ ಜಂಟಿಯಾಗಿ ಅಕ್ವೇರಿಯಂ ತೆರೆಯಲು ಯೋಜನೆ ನಡೆಸಿತ್ತು. ಆದರೆ ಕೊರೊನಾ ಸಾಂಕ್ರಾಮಿಕದಿಂದಾಗಿ ಇದನ್ನು ಮುಂದೂಡಲಾಗಿತ್ತು. ಇಂದಿನಿಂದ ರೈಲು ಪ್ರಯಾಣಿಕರು ಅತ್ಯಾಕರ್ಷಕ ಜಲಚರಗಳ ವೀಕ್ಷಣೆ ಮಾಡಬಹುದು.
ರೈಲ್ವೆ ನಿಲ್ದಾಣದ ಪ್ರವೇಶದ್ವಾರದ ಸಮೀಪದಲ್ಲಿಯೇ ಅಕ್ವೇರಿಯಂ ಸ್ಥಾಪಿಸಲಾಗಿದೆ. ರೈಲ್ವೆ ನಿಲ್ದಾಣಕ್ಕೆ ಪ್ರವೆಶಿಸುತ್ತಿದ್ದಂತೆಯೇ ಬಹಳ ಆಕರ್ಷಕವಾಗಿ ಜಲಚರಗಳಿಂದ ತುಂಬಿಕ ಅಕ್ವೇರಿಯಂ ಕಾಣಿಸುತ್ತಿದೆ. ಐಆರ್ಎಸ್ಡಿಸಿ ಸಾಲಭ್ಯ ನಿರ್ವಹಣಾ ವಿಭಾಗದ ಸಲಹೆಗಾರರಾದ ಎನ್.ರಘುರಾಮನ್ ಮಾತನಾಡಿ, ಭಾರತದಲ್ಲೆ ಮೊದಲ ಬಾರಿಗೆ ಸುರಂಗ ಅಕ್ವೇರಿಯಂ ಸ್ಥಾಪಿಸಲಾಗಿದೆ. ಇದು ಪ್ರಯಾಣಿಕರಿಗೆ ಆಕರ್ಷಣೆಯಾಗಿ ಕಾಣಿಸುವುದಂತೂ ಸತ್ಯ. ರೈಲ್ವೆ ಪ್ರಯಾಣಿಕರು ಸಮಯ ಕಳೆಯಲು ಇದೊಂದು ಒಳ್ಳೆಯ ಜಾಗವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಇಂತಹ ಯೋಜನೆಗಳು ವಿದೇಶದಲ್ಲಿ ಜನಪ್ರಿಯ. ಜತೆಗೆ ಪ್ರವಾಸಿಗರಿಗೆ ಭೇಟಿ ನೀಡುವುದು ಹೆಚ್ಚು. ಎಚ್ಎನ್ಐ ವ್ಯವಸ್ಥಾಪಕ ಪಾಲುದಾರ ಸೈಯದ್ ಹಮೀದ್ ಹಸನ್, ಮೂರು ವರ್ಷಗಳಿಂದ ಮೀನುಗಾರಿಗೆ ಇಲಾಖೆಯ ಮತ್ಸ್ಯ ಮೇಳದಲ್ಲಿ ಭಾಗವಹಿಸಿದ್ದಾರೆ. ಮೈಸೂರು ದಸಾರಾ ಸಮಯದಲ್ಲಿಯೂ ಸಹ ಈ ರೀತಿಯ ಪ್ರದರ್ಶನವನ್ನು ನೀಡಿದ್ದರು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂಡೋನೇಷ್ಯಾದ, ಬ್ಯಾಂಕಾಕ್, ತೈವಾನ್ ಮತ್ತು ಸಿಂಗಾಪುರದಿಂದ ಇನ್ನು ವಿವಿಧ ಜಾತಿಯ ಮೀನುಗಳನ್ನು ತರಿಸಲಿದ್ದೇವೆ. ಈಗಾಗಲೇ ಬ್ಲ್ಯಾಕ್ ಡೈಮಂಡ್, ಸ್ಟಿಂಗ್ ರೇ ಮತ್ತು ಹೈ ಫಿನ್ ಸಾರ್ಕ್ನಂತಹ ವಿವಿಧ ಜಲಚರಗಳನ್ನು ಅಕ್ವೇರಿಯಂನಲ್ಲಿ ಇಡಲಾಗಿದೆ. ಅಲಿಗೇಟರ್ ಗಾರ್ಸ್ ಎಂಬ ಒಂದು ಜಾತಿಯ ಮೀನು ನಮ್ಮಲ್ಲಿ ಈಗಾಗಲೇ ಇದೆ ಎಂದು ಎಚ್ಎನ್ಐನಿಂದ ನಿಯಾಜ್ ಅಹ್ಮದ್ ಖುರೇಷಿ ಮಾಹಿತಿ ನೀಡಿದರು.
ವಿಶೇಷ ಜಲಚರಗಳನ್ನು ವೀಕ್ಷಿಸಲು ಸಮಯವನ್ನು ನಿಗದಿ ಮಾಡಲಾಗಿದೆ. ಬೆಳಿಗ್ಗೆ 9ರಿಂದ ಸಂಜೆ 9ಗಂಟೆಯವರೆಗೆ ಅಕ್ವೇರಿಯಂ ಬಾಗಿಲು ತೆರೆದಿರುತ್ತದೆ. ಪ್ರವೇಶ ಶುಲ್ಕ ಒಬ್ಬರಿಗೆ 25ರೂಪಾಯಿ. ವಿಶೇಷವಾಗಿ ಜನರು ಆಕರ್ಷಿತರಾಗುವಂತೆ ಸೆಲ್ಫಿ ಪಾಯಿಂಟ್ಗಳನ್ನು ಇಡಲಾಗಿದೆ. ಅಮುದ್ರ ಆಮೆ, ಏಡಿ, ಸ್ಟಾರ್ಫಿಶ್ ಹೀಗೆ ಅನೇಕ ಜಾತಿಯ ಜಲಚರಗಳ ಚಿತ್ರಪಟವನ್ನು ಸೆಲ್ಫಿ ಪಾಯಿಂಟ್ಗಳನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ:
ಕರ್ನಾಟಕ ವಿಶ್ವವಿದ್ಯಾಲಯದ ಮೆರುಗನ್ನು ಹೆಚ್ಚಿಸಲಿದೆಯಾ 300 ಕೆಜಿ ತೂಕದ ತಿಮಿಂಗಿಲದ ಅಸ್ಥಿಪಂಜರ?
Published On - 12:15 pm, Thu, 1 July 21