ಕಲಬುರಗಿಯಲ್ಲೂ ಮೌಢ್ಯಾಚರಣೆ; ಕೊರೊನಾವನ್ನು ದೂರ ಮಾಡು ಎಂದು ದೇವರ ಮೊರೆ ಹೋದ ಗ್ರಾಮಸ್ಥರು

|

Updated on: May 30, 2021 | 1:28 PM

ಜನರು ಗುಂಪು ಗುಂಪಾಗಿ ಸೇರುವುದನ್ನು ಮಾಡಬಾರದು. ಗುಂಪಲ್ಲಿ ಒಬ್ಬರು ಸೋಂಕಿತರಿದ್ದರೆ, ಅವರಿಂದ ಇಡೀ ಗ್ರಾಮದ ಜನರಿಗೆ ಸೋಂಕು ಹಬ್ಬುವ ಆತಂಕ ಇರುತ್ತದೆ. ಭಯ ಬೇಡ, ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ್ ತಿಳಿಸಿದ್ದಾರೆ.

ಕಲಬುರಗಿಯಲ್ಲೂ ಮೌಢ್ಯಾಚರಣೆ; ಕೊರೊನಾವನ್ನು ದೂರ ಮಾಡು ಎಂದು ದೇವರ ಮೊರೆ ಹೋದ ಗ್ರಾಮಸ್ಥರು
ಕೊರೊನಾವನ್ನು ದೂರ ಮಾಡು ಎಂದು ದೇವರ ಮೊರೆ ಹೋದ ಗ್ರಾಮಸ್ಥರು
Follow us on

ಕಲಬುರಗಿ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದ ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆ ಕೂಡಾ ಒಂದು. ಮೊದಲು ಕಲಬುರಗಿ ನಗರದಲ್ಲಿಯೇ ಹೆಚ್ಚಾಗಿದ್ದ ಸೋಂಕು, ಲಾಕ್​ಡೌನ್ ಸೇರಿದಂತೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಪರಿಣಾಮ, ಸೋಂಕಿನ ಪ್ರಮಾಣ ದೀಢಿರನೆ ಕಡಿಮೆಯಾಗಿದೆ. ಆದರೆ ಹಳ್ಳಿಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಯ ಜನರು, ಕೊರೊನಾದ ಬಗ್ಗೆ ಹೆಚ್ಚು ಜಾಗೃತಿಯನ್ನು ವಹಿಸಬೇಕಿದೆ. ಸೋಂಕಿನ ಲಕ್ಷಣಗಳು ಕಂಡುಬಂದರೆ ಮೊದಲು ವೈದ್ಯರ ಬಳಿ ಹೋಗಬೇಕಿದೆ. ಆದರೆ ಜಿಲ್ಲೆಯ ಅನೇಕ ಕಡೆ ಜನರು ಜಾಗೃತಿಯನ್ನು ಬಿಟ್ಟು, ಮೌಢ್ಯಾಚರಣೆಗೆ ಮುಂದಾಗಿದ್ದಾರೆ. ಇದರಿಂದ ಸೋಂಕು ಕಡಿಮೆಯಾಗುವ ಬದಲು ಹೆಚ್ಚಾಗುವ ಆತಂಕ ಶುರುವಾಗಿದೆ.

ಜಿಲ್ಲೆಯ ಅಫಜಲಪುರ ತಾಲೂಕಿನ ಸಿದನೂರು ಗ್ರಾಮದಲ್ಲಿ ಎರಡು ದಿನದ ಹಿಂದೆ ಹುಣ್ಣಿಮೆ ದಿನ, ನೂರಾರು ಜನರು ಸೇರಿ ಗ್ರಾಮದ ಮರಿಗೆಮ್ಮ ದೇವಿಗೆ ಉಡಿ ತುಂಬಿದ್ದಾರೆ. ತಮ್ಮೂರಲ್ಲಿ ಕೊರೊನಾ ಕಡಿಮೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅಲ್ಲದೆ ಗ್ರಾಮದ ತುಂಬೆಲ್ಲಾ ಪಲ್ಲಕ್ಕಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಕೊರೊನಾ ಮಾರಿ ಬಾರದಂತೆ ತಡೆಯಲು ದೇವಿಗೆ ಮೊರೆ ಹೋಗೋಣಾ ಎಂದು ನಿರ್ಧಿರಿಸಿ, ದೇವಿಗೆ ಉಡಿ ತುಂಬುವ ಶಾಸ್ತ್ರ ಮಾಡಿದ್ದಾರೆ.

ಮತ್ತೊಂದಡೆ ಇದೇ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಕೂಡ ಗ್ರಾಮದ ಹೊರವಲಯದಲ್ಲಿರುವ ಮರಗಮ್ಮ ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ಜನರೆಲ್ಲಾ ಸೇರಿ, ದೇವಿಗೆ ಉಡಿ ತುಂಬಿ ಗ್ರಾಮದಲ್ಲಿ ವಕ್ಕರಿಸಿರುವ ಕೊರೊನಾ ದೂರವಾಗಲಿ ಎಂದು ಬೇಡಿಕೊಂಡಿದ್ದಾರೆ. ಕರಜಗಿ ಗ್ರಾಮದಲ್ಲಿ ಮೂವತ್ತಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಅನೇಕರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮದ ಜನರು, ಗುಂಪು ಸೇರಿದ್ದಾರೆ. ಇವು ಕೇವಲ ಉದಾಹರಣೆಗಳು ಮಾತ್ರ. ಇಂತಹ ಅನೇಕ ಆಚರಣೆಗಳು ಗ್ರಾಮೀಣ ಭಾಗದಲ್ಲಿ ಇದೀಗ ಹೆಚ್ಚಾಗಿವೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿ ಹಳ್ಳಿಯಲ್ಲಿ ಗ್ರಾಮದ ಹೊರಗಡೆ ಮರಗಮ್ಮ ಸೇರಿದಂತೆ ಕೆಲ ಪುಟ್ಟ ಪುಟ್ಟ ವಿವಿಧ ದೇವರುಗಳ ಗುಡಿಗಳಿವೆ. ಮರಗಮ್ಮ ತಮ್ಮನ್ನೂ ಜಂಜಡಗಳಿಂದ ಕಾಪಾಡುತ್ತಾಳೆ. ಗ್ರಾಮಕ್ಕೆ ದುಷ್ಟ ಶಕ್ತಿಗಳು ಬರದಂತೆ ಕಾಪಾಡುತ್ತಾಳೆ ಎನ್ನುವ ನಂಬಿಕೆ ಹಳ್ಳಿಯ ಜನರಲ್ಲಿದೆ. ಪ್ರತಿ ವರ್ಷ ಗ್ರಾಮದ ಜನರು, ದೇವಿಗೆ ಉಡಿ ತುಂಬುವುದು, ಪೂಜೆ ಮಾಡುವುದು, ಪಲ್ಲಕ್ಕಿ ಮೆರವಣಿಗೆ ಮಾಡುತ್ತಾ ಬರುತ್ತಿದ್ದರು. ಆದರೆ ಇತ್ತೀಚೆಗೆ ಈ ರೀತಿಯ ಆಚರಣೆಗಳು ಕಡಿಮೆಯಾಗಿವೆ. ಆದರೆ ದೇವರನ್ನು ಮರೆತಿದ್ದೇ ತಮ್ಮೂರಿಗೆ ಇಂತಹ ದುಸ್ಥಿತಿ ಬರಲು ಕಾರಣ ಎಂದು ಅಂದುಕೊಂಡಿರುವ ಅನೇಕ ಹಳ್ಳಿಯ ಜನರು ಇದೀಗ ಮತ್ತೆ ದೇವತೆಗಳನ್ನು ಸಂತೃಪ್ತಿಗೊಳಿಸಲು ಮುಂದಾಗಿದ್ದಾರೆ.

ಹಳ್ಳಿಯ ಜನರು ಮಾಡಬೇಕಾಗಿದ್ದು ಏನು?
ಕೊರೊನಾ ಸೋಂಕು ಇದೀಗ ಹಳ್ಳಿಗಳಲ್ಲಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜನರು ಮೌಢ್ಯಾಚರಣೆಗಳನ್ನು ಬಿಟ್ಟು ಕೊರೊನಾದ ಬಗ್ಗೆ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಿದೆ. ಮೊದಲು ಹಳ್ಳಿಯ ಕಟ್ಟೆಗಳಲ್ಲಿ ಗುಂಪಾಗಿ ಕೂರುವುದನ್ನು ಬಿಡಬೇಕಿದೆ. ಒಬ್ಬರು ಮತ್ತೊಬ್ಬರ ಮನೆಗೆ ಹೋಗುವುದನ್ನು ಕೆಲ ದಿನಗಳ ಕಾಲ ನಿಲ್ಲಿಸಬೇಕಿದೆ. ಎಲ್ಲರು ಮಾಸ್ಕ್​ಗಳನ್ನು ಹಾಕಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ದೈಹಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡುವದನ್ನು ಕಲಿಯಬೇಕು.

ಸೋಂಕಿನ ಲಕ್ಷಣಗಳು ಕಂಡು ಬಂದರೆ, ಮನೆಯಲ್ಲಿಯೇ ಮನೆ ಮದ್ದು ಸೇವಿಸಿ ಸುಮ್ಮನಾಗುವ ಬದಲು ಮೊದಲು ವೈದ್ಯರ ಮೊರೆ ಹೋಗಬೇಕಿದೆ. ಅನೇಕರು ದೇವರ ಶಾಪ ಎಂದು ವೈದ್ಯರ ಬಳಿ ಹೋಗದೆ, ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಅದನ್ನು ಬಿಟ್ಟು ಮೊದಲು ವೈದ್ಯರ ಬಳಿ ಹೋಗುವುದು, ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದನ್ನು ಮಾಡಬೇಕು.

ಸೋಂಕು ದೃಢವಾದರೆ, ಮನೆಯಲ್ಲಿಯೇ ಇರದೆ, ಕೊರೊನಾ ಕೇರ್ ಸೆಂಟರ್​ಗಳಿಗೆ ಹೋಗಿ ದಾಖಲಾಗಬೇಕು.
ಕೊರೊನಾ ಬಗ್ಗೆ ಅಪಪ್ರಚಾರದ ಸುದ್ದಿಗಳಿಗೆ ಕಿವಿಗೊಡದೆ, ಅದರ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸುವುದನ್ನು ಮಾಡಬೇಕು. ಕೊರೊನಾ ಲಸಿಕೆ ಬಗ್ಗೆ ತಪ್ಪು ತಿಳುವಳಿಕೆ ಬಿಟ್ಟು, ಮೊದಲು ಲಸಿಕೆ ಹಾಕಿಸಿಕೊಳ್ಳಬೇಕು.
ಆಸ್ಪತ್ರೆಗೆ ಹೋದರೆ ನಾವು ಬದಕೋದಿಲ್ಲಾ ಅನ್ನೋ ಭ್ರಮೆಯಿಂದ ಮೊದಲು ಹೊರಬರಬೇಕಿದೆ. ಇದೇ ಭ್ರಮೆಯಿಂದ ಅನೇಕರು ಸೋಂಕಿನ ಲಕ್ಷಣಗಳು ಇದ್ದರು ಆಸ್ಪತ್ರೆಗೆ ಹೋಗದೆ, ಮನೆಯಲ್ಲಿಯೇ ಇದ್ದು ಸೋಂಕಿಗೆ ಬಲಿಯಾಗುತ್ತಿದ್ದಾರೆ.

ಗ್ರಾಮೀಣ ಭಾಗದ ಜನರು ಮೌಢ್ಯಾಚರಣೆಗಳನ್ನು ಬಿಟ್ಟ, ಕೊರೊನಾದ ಬಗ್ಗೆ ಹೆಚ್ಚು ಜಾಗೃತರಾಗಿರುವ ಕೆಲಸ ಮಾಡಬೇಕಿದೆ. ಅಂದಾಗ ಮಾತ್ರ ಸೋಂಕಿನಿಂದ ಪಾರಾಗಬಹುದು. ಜನರು ಗುಂಪು ಗುಂಪಾಗಿ ಸೇರುವುದನ್ನು ಮಾಡಬಾರದು. ಗುಂಪಲ್ಲಿ ಒಬ್ಬರು ಸೋಂಕಿತರಿದ್ದರೆ, ಅವರಿಂದ ಇಡೀ ಗ್ರಾಮದ ಜನರಿಗೆ ಸೋಂಕು ಹಬ್ಬುವ ಆತಂಕ ಇರುತ್ತದೆ. ಭಯ ಬೇಡ, ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ್ ತಿಳಿಸಿದ್ದಾರೆ.

ಗ್ರಾಮದಲ್ಲಿ ಕೊರೊನಾ ದೂರವಾಗಲಿ ಎಂದು ಗ್ರಾಮದ ಹೊರವಲಯದಲ್ಲಿ ಮರಗಮ್ಮ ದೇವಿಗೆ ಉಡಿ ತುಂಬಿದ್ದೇವೆ. ದೇವಿಯಲ್ಲಿ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ ಮಾಡಿದ್ದೇವೆ. ಹಳ್ಳಿಗೆ ಸಂಕಷ್ಟ ಬಂದಾಗ, ದೇವರಿಗೆ ಉಡಿ ತುಂಬುವುದು ಸೇರಿದಂತೆ ಕೆಲ ಆಚರಣೆಗಳನ್ನು ಮಾಡುವುದು ಮೊದಲಿನಿಂದಲು ಗ್ರಾಮೀಣ ಭಾಗದಲ್ಲಿ ರೂಢಿಯಲ್ಲಿದೆ. ಇದು ಮೌಢ್ಯಾಚರಣೆ ಅನಿಸಿದರು ಕೂಡಾ ಹಳ್ಳಿಯ ಜನರಿಗೆ ಭಯ ದೂರವಾಗುತ್ತದೆ. ದೇವಿ ನಮ್ಮನ್ನು ಕಾಪಾಡುತ್ತಾಳೆ ಎನ್ನುವ ಧೈರ್ಯ ಇರುತ್ತದೆ ಎಂದು ಸಿದನೂರು ಗ್ರಾಮಸ್ಥ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ:

ಕೊವಿಡ್ ನಿಯಮ ಉಲ್ಲಂಘಿಸಿ ಹೋಮ ಹವನ; ನಾಲ್ವರ ವಿರುದ್ಧ ಎಫ್ಐಆರ್

ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಮೌಢ್ಯದಾಚೆಗೂ ವಾತಾವರಣ ಶುದ್ಧೀಕರಣಕ್ಕೆ ಹೋಮ-ಹವನ ಮಾಡಿಸಿದ ಶಾಸಕ ಅಭಯ್ ಪಾಟೀಲ್