ಕಲಬುರಗಿ ನಗರದಲ್ಲಿ ಯುವಕನ ಕೊಲೆ ಪ್ರಕರಣ; ಘಟನೆ ನೆಡದ 24 ಗಂಟೆಯಲ್ಲಿ ಇಬ್ಬರು ಆರೋಪಿಗಳ ಬಂಧನ

|

Updated on: Jun 09, 2023 | 2:16 PM

ಅವರೆಲ್ಲ ಚಿಗರು ಮೀಸೆ ಯುವಕರು. ಜೀವನದಲ್ಲಿ ಬಾಳಿ ಬದುಕಬೇಕಿದ್ದವರು. ಆದ್ರೆ, ಕ್ಷುಲಕ ಕಾರಣಕ್ಕೆ ದ್ವೇಷ ಬೆಳಸಿಕೊಂಡಿದ್ದರು. ಈ ಕಡೆ ಯಾಕೇ ಬಂದಿದ್ದೀರಿ ಎಂದು ಕೇಳಿದ್ದಕ್ಕೆ ಮಾತಿಗೆ ಮಾತು ಬೆಳದು, ಓರ್ವ ಯುವಕನನ್ನೇ ಕೊಲೆ ಮಾಡಿದ್ದರು. ಇದೀಗ ಇಬ್ಬರು ಆರೋಪಿಗಳು ಕಂಬಿ ಹಿಂದೆ ಹೋಗಿದ್ದಾರೆ.

ಕಲಬುರಗಿ ನಗರದಲ್ಲಿ ಯುವಕನ ಕೊಲೆ ಪ್ರಕರಣ; ಘಟನೆ ನೆಡದ 24 ಗಂಟೆಯಲ್ಲಿ ಇಬ್ಬರು ಆರೋಪಿಗಳ ಬಂಧನ
ಆರೋಪಿ ಅರೆಸ್ಟ್​
Follow us on

ಕಲಬುರಗಿ: ನಗರದ ಹುಂಡೇಕಾರ್ ಕಾಲೋನಿಯಲ್ಲಿ ಇದೇ ಜೂನ್ 6 ರಂದು ರಾತ್ರಿ 10 ಗಂಟೆ ಸಮಯದಲ್ಲಿ ಇಪ್ಪತ್ತೈದು ವರ್ಷದ ಬಾಬಾಖಾನ್ ಅನ್ನೋ ಯುವಕ ಕೊಲೆ(Murder)ಯಾಗಿದ್ದ. ಬಾಬಾಖಾನ್, ಕಲಬುರಗಿ(Kalaburagi) ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಜೂನ್ 5 ರಂದು ರಾತ್ರಿ ಸಮಯದಲ್ಲಿ ಬಾಬಾಖಾನ್, ಆತನ ಸ್ನೇಹಿತ ಇಬ್ರಾಹಿಂ ಮತ್ತು ಮೋಯಿನು ಅನ್ನೋರು ಸೇರಿಕೊಂಡು, ಸಂಬಂಧಿಯ ಮನೆಗೆ ಊಟಕ್ಕೆ ಹೋಗಿ, ಬಳಿಕ ಊಟವನ್ನು ಮುಗಿಸಿಕೊಂಡು ಮರಳಿ ತಮ್ಮ ಮನೆಗೆ ಹೋಗುತ್ತಿದ್ದರಂತೆ. ಈ ವೇಳೆ ಬೈಕ್​ನಲ್ಲಿದ್ದ ಪೆಟ್ರೋಲ್ ಖಾಲಿಯಾಗಿದೆ. ಹುಂಡೇಕಾರ್ ಕಾಲೋನಿಯಲ್ಲಿ ನಿಂತಿಕೊಂಡಿದ್ದರು. ಈ ಸಂದರ್ಭದಲ್ಲಿ ಸೈಪನ್ ಮತ್ತು ಆತನ ಸ್ನೇಹಿತರೂ ಕೂಡ ನಿಂತುಕೊಂಡಿದ್ದರು. ನೀವು ಇಲ್ಲೇಕೆ ಬಂದಿದ್ದೀರಿ ಎಂದು ಕೇಳಿದ್ದಾರೆ. ನಮಗೆ ಇಲ್ಲೇಕೆ ಬಂದಿದ್ದೀರಿ ಎಂದು ಕೇಳೋಕೆ ನೀವು ಯಾರು ಎಂದು ಸೈಪನ್, ಇಬ್ರಾಹೀಂ ಮತ್ತು ಬಾಬಾಖಾನ್ ಜೊತೆ ಜಗಳ ತಗೆದಿದ್ದಾನೆ. ಎರಡು ಗುಂಪಿನ ನಡುವೆ ಗಲಾಟೆ ಆರಂಭವಾಗಿದೆ. ಈ ಸಮಯದಲ್ಲಿ ಸೈಪನ್ ಮತ್ತು ಆತನ ಸ್ನೇಹಿತ ಸಲ್ಮಾನ್, ಸಹೋದರ ಮಗ್ದುಂ, ಬಾಬಾಖಾನ್ ಮತ್ತು ಇಬ್ರಾಹೀಂ ಮೇಲೆ ಹಲ್ಲೆ ಮಾಡಿದ್ದು, ಈ ವೇಳೆ ಚಾಕುವಿನಿಂದ ಇರಿದು ಬಾಬಾಖಾನ್​ನನ್ನು ಕೊಲೆ ಮಾಡಿದ್ದರು.

ಇನ್ನು ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಆರೋಪಿಗಳಾದ ಸೈಪನ್ ಮತ್ತು ಆತನ ಸಹೋದರ ಮುಗ್ದಂ ಅನ್ನೋ ಇಬ್ಬರನ್ನು ಇದೀಗ ಬಂಧಿಸಿದ್ದಾರೆ. ಆರೋಪಿ ಸೈಪನ್ ಮತ್ತು ಬಾಬಾಖಾನ್ ಸ್ನೇಹಿತ ಇಬ್ರಾಹೀಂ ಈ ಮೊದಲು ಒಂದೇ ಏರಿಯಾದಲ್ಲಿದ್ದರಂತೆ. ಇಬ್ಬರ ನಡುವೆ ಆಟೋ ವಿಚಾರಕ್ಕೆ ಜಗಳವಾಗಿತ್ತಂತೆ. ಅದು ಪೊಲೀಸ್ ಠಾಣೆಯ ಮೆಟ್ಟಿಲು ಕೂಡ ಹತ್ತಿತ್ತಂತೆ. ಆದ್ರೆ, ಬಾಬಖಾನ್​ನ ಬೆಂಬಲದಿಂದಲೇ ಇಬ್ರಾಹೀಂ, ತನಗೆ ತೊಂದರೆ ಕೊಡುತ್ತಿದ್ದಾನೆ ಎಂದು ಸೈಪನ್ ಅಂದುಕೊಂಡಿದ್ದನಂತೆ. ಹೀಗಾಗಿ ಬಾಬಾಖಾನ್ ಮತ್ತು ಇಬ್ರಾಹೀಂ ಮೇಲೆ ಸೈಪನ್ ಮತ್ತು ಆತನ ಸಹೋದರರ ದಾಳಿ ನಡೆಸಿದ್ದರು. ಆದ್ರೆ, ಇಬ್ರಾಹೀಂ ಘಟನೆಯಲ್ಲಿ ಪಾರಾದ್ರೆ, ಬಾಬಾಖಾನ್ ಕೊಲೆಯಾಗಿದ್ದ.

ಇದನ್ನೂ ಓದಿ:ಶಂಶಾಬಾದ್​​ನಲ್ಲಿ ಕೊಲೆ, ಸರೂರ್ ನಗರದ ಮ್ಯಾನ್ ಹೋಲ್ ನಲ್ಲಿ ಶವ, ಪ್ರೇಯಸಿಯ ಹತ್ಯೆ, ಪ್ರಿಯಕರ ಕೊನೆಗೂ ಅರೆಸ್ಟ್

ಇನ್ನು ಕೊಲೆ ನಡೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದ್ರೆ, ಕಲಬುರಗಿ ನಗರದಲ್ಲಿ ಕ್ಷುಲಕ ಕಾರಣಕ್ಕೆ ಕೊಲೆಗಳಾಗುತ್ತಿರುವುದು, ಜನರ ಭಯಕ್ಕೆ ಕಾರಣವಾಗುತ್ತಿದೆ.

ವರದಿ: ಸಂಜಯ್,ಟಿವಿ9 ಕಲಬುರಗಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ